ಹುಮನಾಬಾದ: ದೇವರನ್ನು ನಂಬದ ವ್ಯಕ್ತಿಗಳು ತಮ್ಮ ಸಾಧನೆಗೆ ಕೇವಲ ತಾವಷ್ಟೇ ಕಾರಣ ಎನ್ನುತ್ತಾರೆ. ಆದರೆ ಈ ಜಗತ್ತಿನಲ್ಲಿ ದೇವರ ಕೃಪೆ ಇಲ್ಲದೇ ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ ಎನ್ನುವುದನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು ಎಂದು ಬೀದರ ದಕ್ಷಿಣ ಕ್ಷೇತ್ರ ಶಾಸಕ ಬಂಡೆಪ್ಪ ಖಾಶೆಂಪೂರ ಹೇಳಿದರು.
ಚಿಟಗುಪ್ಪ ತಾಲೂಕು ಚಾಂಗ್ಲೇರಾ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಗುರುವಾರ ರಾತ್ರಿ ನಡೆದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು. ದೇವರೆಂಬ ಅದ್ಭುತ ಶಕ್ತಿಯೊಂದು ಇದೆ ಎನ್ನುವ ಕಾರಣ ಮನುಷ್ಯ ಭಯದಿಂದ ಬದುಕುತ್ತಾನೆ. ಮನುಷ್ಯ ತನ್ನ ಆಪತ್ಕಾಲದಲ್ಲಿ ನೆನೆಸಿಕೊಳ್ಳುವುದು ಮನುಷ್ಯರನ್ನರಲ್ಲ ದೇವರನ್ನು. ದುಃಖದ ಪ್ರಸಂಗ ಬಂದಾಗ ಜನ ದೇವರ ಮೇಲೆ ನಂಬಿಕೆ ಇಡುತ್ತಾನೆ.
ವಿಜ್ಞಾನ, ವೈದ್ಯಕೀಯ ಕ್ಷೇತ್ರ ಎಷ್ಟೇ ಪ್ರಗತಿ ಸಾಧಿಸಿದರೂ ಸಹ ರೋಗಿಯನ್ನು ತಪಾಸಣೆ ಕೈಗೊಳ್ಳುವ ವೈದ್ಯರು ಕೊನೆಗೆ ಹೇಳುವುದಿಷ್ಟೇ “ನನ್ನ ಕೆಲಸ ನಾನು ಮಾಡಿದ್ದೇನೆ ಮಿಕ್ಕಿದ್ದು ದೇವರಿಗೆ ಬಿಟ್ಟಿದ್ದು’ ಎಂದು. ಎಂದರೆ ಯಾರಿಗೂ ಕಾಣದ ಅಗೋಚರ ಶಕಿ ಇದೆ ಎಂಬುದನ್ನು ಪ್ರತಿಯೊಬ್ಬರು ನಂಬುತ್ತಾರೆ. ಆ ಶಕ್ತಿಯೇ ದೇವರು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ|ಶೈಲೇಂದ್ರ ಬೆಲ್ದಾಳೆ ಮಾತನಾಡಿ, ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ವರ್ಷಗಳು ಗತಿಸಿದಂತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಸೌಲಭ್ಯ ಕಲ್ಪಿಸಬೇಕಾದ ಅಗತ್ಯವಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಮುಖ್ಯಮಂತ್ರಿಗಳ ಮೇಲೆ ಹೆಚ್ಚು ಒತ್ತಡ ಹೇರಿ ಕಲ್ಯಾಣ ಮಂಟಪ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಶಕ್ತಿಮೀರಿ ಯತ್ನಿಸುವುದಾಗಿ ಭರವಸೆ ನೀಡಿದರು.
ತಡೋಳಾದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಹುಮನಾಬಾದ ಹಿರೇಮಠದ ರೇಣುಕ ಗಂಗಾಧರ ಸ್ವಾಮೀಜಿ, ಶಾಂಡಿಲೇಶ್ವರ ಸ್ವಾಮೀಜಿ, ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಕಡಗಂಚಿ ಸ್ವಾಮೀಜಿ, ಇಟಗಾ ಚನ್ನಲ್ಲೇಶ್ವರ ಸ್ವಾಮೀಜಿ, ಬಾಬುರಾವ್ ಕಾರಭಾರಿ, ಚಿದಾನಂದ ಮಹಾರಾಜ, ಸಂಗಮೇಶ ತೋಂಟ, ಚಿಟಗುಪ್ಪ ತಹಶೀಲ್ದಾರ್ ಜಿಯಾವುದ್ದಿನ್ ಸಾಬ್, ಬೆಮಳಖೇಡಾ ನಾಡತಹಶೀಲ್ದಾರ್ ಮಲ್ಲಿಕಾರ್ಜುನ ನಿರ್ಣಾ, ವಿಜಯಕುಮಾರ ಸ್ವಾಮಿ, ದೇವಸ್ಥಾನ ಸಮಿತಿ ಅಧ್ಯಕ್ಷ ವಿಜಯಕುಮಾರ ವಾಲಿ ಇದ್ದರು. ದೇವಸ್ಥಾನ ಸಮಿತಿ ಅಧ್ಯಕ್ಷ ವಿಜಯಕುಮಾರ ವಾಲಿ ಸ್ವಾಗತಿಸಿದರು. ರಾಜಶೇಖರ ಪೂಜಾರಿ ನಿರೂಪಿಸಿದರು. ರವೀಂದ್ರಕುಮಾರ ವಂದಿಸಿದರು.
ಸಂಭ್ರಮದ ಪಲ್ಲಕ್ಕಿ ಉತ್ಸವ: ಧರ್ಮಸಭೆ ನಂತರ ಆರಂಭಗೊಂಡ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವದಲ್ಲಿ ವೈವಿಧ್ಯಮಯ ವಾದ್ಯವೃಂದ, ಶಾಲಾ ವಿದ್ಯಾರ್ಥಿಗಳ ಕೋಲಾಟ ಪ್ರದರ್ಶನ, ಬೊಂಬೆ ಕುಣಿತ ಇತ್ಯಾದಿಗಳು ಉತ್ಸವದ ಮೆರಗು ಹೆಚ್ಚಿಸಿದವು. ಪಲ್ಲಕ್ಕಿ ಉತ್ಸವ ರಥಕ್ಕೆ ಸಮೀಪಿಸುತ್ತಿದ್ದ ಹಾಗೆ ನೆರೆದ ಭಕ್ತರಿಂದ ಜಯ ಘೋಷ ಕೇಳಿ ಬರುತ್ತಿದ್ದಂತೆ ರಥೋತ್ಸವ ಆರಂಭಗೊಂಡಿತು.