ಹುಮನಾಬಾದ: ಸತತ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ. ಆದ್ದರಿಂದ ವಿದ್ಯಾರ್ಥಿನಿಯರು ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದಿದಾಗ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಸಿಪಿಐ ಜೆ.ಎಸ್.ನ್ಯಾಮಗೌಡರ್ ಹೇಳಿದರು.
ಪಟ್ಟಣದ ಯಲಾಲ್ ಶಿಕ್ಷಣ ದತ್ತಿ ಸರ್ವೋದಯ ಪದವಿ ಕಾಲೇಜಿನಲ್ಲಿ ರವಿವಾರ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಈ ದೇಶದ ಸಂಸ್ಕೃತಿಯ ಪ್ರತೀಕದವಾಗಿದ್ದು, ಇಂದಿನ ಯುವಕರು ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು. ಜೀವನದ ಅತ್ಯಂತ ಪ್ರಮುಖ ಘಟ್ಟವಾದ ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ವ್ಯರ್ಥ ಕಾಲಹರಣ ಮಾಡದೇ ಹೆತ್ತ ಪಾಲಕರು, ವಿದ್ಯೆ ನೀಡಿದ ಗುರು ಮತ್ತು ವಿದ್ಯಾಲಯದ ಕೀರ್ತಿ ಹೆಚ್ಚಿಸುವುದರೊಂದಿಗೆ ವೈಯಕ್ತಿಕ ಸ್ಥಾನಮಾನಕ್ಕಾಗಿ ಶ್ರಮಿಸಬೇಕು ಎಂದು ಹೇಳಿದರು.
ಪುರಸಭೆ ಸದಸ್ಯ ಸುನೀಲ ಗೌಡ್ರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ವಾಣಿಜ್ಯ ಕೇಂದ್ರಗಳಾಗಿ ಬೆಳೆಯುತ್ತಿರುವ ಈ ದಿನಗಳಲ್ಲಿ ಈ ಭಾಗದ ಬಡ ಮತ್ತು ಮಧ್ಯಮ ವರ್ಗದ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ದಶಕದಿಂದ ಅತ್ಯಲ್ಪ ಶುಲ್ಕದಲ್ಲಿ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ಯಲಾಲ್ ಶಿಕ್ಷಣ ದತ್ತಿ ಕಾರ್ಯ ಪ್ರಶಂಸನೀಯ. ಭವಿಷ್ಯದಲ್ಲಿ ಪುರಸಭೆ ವತಿಯಿಂದ ಅಗತ್ಯ ಸಹಾಯ ಸಹಕಾರ ನೀಡಲು ಯಾವತ್ತೂ ಸಿದ್ಧ ಎಂದು ಭರವಸೆ ನೀಡಿದರು.ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಹುಳುಗಳಾಗದೇ ಹೊರ ಪ್ರಪಂಚದ ಜ್ಞಾನರ್ಜನೆಗಾಗಿ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಲು ದಿನಪತ್ರಿಕೆ ಓದುವುದನ್ನು ರೂಢಿಸಿಕೊಳ್ಳಬೇಕು. ವಿಶೇಷವಾಗಿ ಯುವತಿಯರು ತಮ್ಮನ್ನು ತಾವು ಯಾವತ್ತೂ ನಾಲ್ಕು ಗೋಡೆಗೆ ಸೇಮಿತವಾಗಿಸಿಕೊಳ್ಳದೇ ವಿದ್ಯಾವ್ಯಾಸಂಗದ ಜೊತೆಗೆ ಬಿಡಿ ಕಾಸಿಗಾಗಿ ಪತಿ ಎದುರು ಕೈ ಚಾಚದೇ ಆರ್ಥಿಕ ಸ್ವಾವಲಂಬನೆ ಮೂಲಕ ತಲೆಎತ್ತಿ ಬದುಕು ಸಾಗಿಸಬೇಕು. ಪರಿಸರ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಿ ಅಕ್ಕಪಕ್ಕದವರಿಗೂ ಅದರ ಮಹತ್ವ ತಿಳಿಸಬೇಕು ಎಂದು ಹೇಳಿದರು.
ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬತಲಿ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕ ಪ್ರೀತಿ ಮೈಗೂಡಿಸಿಕೊಳ್ಳಬೇಕು. ಮೊಬೈಲ್ ಜ್ಞಾನಾರ್ಜನೆಗಾಗಿ ಬಳಸುವುದು ತಪ್ಪಲ್ಲ. ಆದರೆ ಏನು ಬೇಕು ಅದನ್ನು ನೋಡದೇ ಇನ್ನೇನನ್ನೊ ನೋಡುವ ಮೂಲಕ ಯುವಕ-ಯುವತಿರು ದಾರಿ ತಪ್ಪುತ್ತಿದ್ದಾರೆ. ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ್ದು, ಈ ಸಂದರ್ಭದಲ್ಲಿ ಕೈಗೊಳ್ಳುವ ಪ್ರತಿಯೊಂದು ಹೆಜ್ಜೆಯನ್ನೂ ಅತ್ಯಂತ ಜಾಗೃತಿಯಿಂದ ಇಡಬೇಕು ಎಂದು ಸಲಹೆ ನೀಡಿದರು.
ಯಲಾಲ್ ಶಿಕ್ಷಣ ಮುಖ್ಯದತ್ತಿ ನಾಗಶೆಟ್ಟಿ ಯಲಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಮೀನಶಾಕ್ಷಿ ಯಲಾಲ್, ನಿರ್ದೇಶಕ ಪ್ರಜ್ವಲ್ ಯಲಾಲ್, ಪ್ರಾಚಾರ್ಯ ಡಾ|ಅರುಣಕುಮಾರ ಯಲಾಲ್, ಉಪಪ್ರಾಚಾರ್ಯ ಆನಂದ ಚಾಕೂರೆ ವೇದಿಕೆಯಲ್ಲಿದ್ದರು.
ಮಹಾವಿದ್ಯಾಲಯದ ಪ್ರಾಧ್ಯಾಪಕ ಶರಣಯ್ಯ ಚೆಟ್ಟಿ, ಅನೀಲ ಲದ್ದಿ, ಚಂದ್ರಕಾಂತ ಬಿರಾದಾರ, ರಾಘವೇಂದ್ರ ಬಿರಾದಾರ, ರಮೇಶ ನಾಯಕ, ಸೈಯದ್ ಖಾಜಾ, ಸಂಗೀತಾ ಪೋಚಂಪಳ್ಳಿ, ಶಿವಲೀಲಾ ಕೋರಿ, ಶಿವಲೀಲಾ ಕೂಡ್ಲಿ, ಸಂಗೀತಾ ಮಠಪತಿ, ಗೌರಮ್ಮ ಪಂಚಮs್, ರೇಣುಕಾ ಬಿರಾದಾರ, ಅಂಬಿಕಾ ಮಹಾಗಾಂವೆ, ಎಚ್.ಕೆ.ಜ್ಯೋತಿ, ಸುಮಂಗಲಾ, ಮಂಗಲಾ, ಭವಾನಿ ಠಾಕೂರ್ ಇದ್ದರು.
ಸಂಗೀತಾ, ಕಲಾವತಿ ಪ್ರಾರ್ಥಿಸಿದರು. ಶಶಿಕಲಾ ಸ್ವಾಗತಿಸಿದರು. ಸಂಸ್ಥೆ ಅಧ್ಯಕ್ಷ ಶಾಂತವೀರ ಎನ್.ಯಲಾಲ್ ಪ್ರಾಸ್ತಾವಿಕ ಮಾತನಾಡಿದರು. ಪೂಜಾ ಮಹಾಗಾಂವ್ ಮತ್ತು ಶಿವಾನಿ ನಿರೂಪಿಸಿದರು. ಶಶಿಕಲಾ ಕೆ.ಬಿರಾದಾರ್ ವಂದಿಸಿದರು.