ಹುಮನಾಬಾದ: ಪ್ರಸಕ್ತ (2019) ಸಾಲಿನ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಹುಮನಾಬಾದ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದು, ವಿನೂತನ ಯೋಜನೆಗಳೇ ಯಶಸ್ಸಿಗೆ ಕಾರಣವಾಗಿದೆ. 2016ನೇ ಸಾಲಿನಲ್ಲಿ ಶೇ.75ರಷ್ಟು ಫಲಿತಾಂಶ ಬಂದಿತ್ತು. 2017ನೇ ಸಾಲಿನಲ್ಲಿ ಶೇ.69 ಇತ್ತು. 2018ನೇ ಸಾಲಿನಲ್ಲಿ ಶೇ.64.5ಕ್ಕೆ ಇಳಿದಿತ್ತು. 2019ನೇ ಸಾಲಿನಲ್ಲಿ ಸಚಿವ ರಾಜಶೇಖರ ಪಾಟೀಲ ಅವರ ಆದೇಶದ ಜತೆಗೆ ಇಲಾಖೆ ಹಿರಿಯ ಅಧಿಕಾರಿಗಳ ಕಟ್ಟುನಿಟ್ಟಿನ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಿದ್ದರ ಪರಿಣಾಮ ಫಲಿತಾಂಶದಲ್ಲಿ ಏರಿಕೆ ಕಂಡು ಬಂದಿದೆ.
ಸುಧಾರಣೆಗೆ ಮಾಡಿದ್ದೇನು: ಮಾಧ್ಯಮವಾರು ಮತ್ತು ವಿಷಯವಾರು ಶಿಕ್ಷಕರ ಮಾಸಿಕ ಸರಣಿ ಸಭೆ ನಡೆಸಿ ಫಲಿತಾಂಶ ಹೆಚ್ಚಿಸುವ ಉದ್ದೇಶದಿಂದ ವಿಶೇಷ ಶಿಕ್ಷಕರನ್ನು ಬಳಸಿಕೊಳ್ಳಲಾಗಿದೆ. ಸಹ ಶಿಕ್ಷಕರ ಗೈರು, ಸ್ಪರ್ಧಾ ಚಟುವಟಿಕೆ, ವಿಷಯ ಚರ್ಚಾಗೋಷ್ಠಿ, ರಸಪ್ರಶ್ನೆ, ಕಿರು ಪರೀಕ್ಷೆ, ವಿಷಯವಾರು ಸರಣಿ ಪರೀಕ್ಷೆ ತೆಗೆದುಕೊಳ್ಳದೇ ಇರುವುದನ್ನು ಗಂಭೀರ ಪರಿಗಣಿಸಿ ಕಟ್ಟುನಿಟ್ಟಿನಿಂದ ಪಾಲನೆ ಮಾಡುವಂತೆ ನೋಡಿಕೊಂಡಿರುವುದು ಫಲಿತಾಂಶ ಸುಧಾರಣೆಗೆ ಒಂದು ಕಾರಣ.
ತೀವ್ರ ನಿಗಾ ಕಲಿಕಾ ಕೇಂದ್ರ: ಶೇ.40ಕ್ಕಿಂತ ಕಡಿಮೆ ಫಲಿತಾಂಶ ಹೊಂದಿರುವ ಪ್ರೌಢಶಾಲೆಗಳಿಗೆ ಪ್ರತಿ 15ದಿನಕ್ಕೊಮ್ಮೆ ಸಭೆ ನಡೆಸಿ ಕ್ಷೇತ್ರದ ಶಿಕ್ಷ್ಷಣಾಧಿಕಾರಿ, ಸಮೂಹ ಸಂಪನ್ಮೂಲ, ಅಕ್ಷರ ದಾಸೋಹ, ಶಿಕ್ಷಣ ಸಂಯೋಜಕರು, ವಲಯ ಸಂಪನ್ಮೂಲ ಅಧಿಕಾರಿ ಹಾಗೂ ಮುಖ್ಯ ಶಿಕ್ಪ್ಷಕ, ಸಹ ಶಿಕ್ಷಕರಿಗೆ ದತ್ತು ನೀಡಿರುವುದು ಫಲಿತಾಂಶ ಸುಧಾರಣೆಗೆ ಪೂರಕವಾಗಿದೆ.
ವಿವಿಧ ಪರೀಕ್ಷೆ: ಪರೀಕ್ಷೆ ಎದುರಿಸುವ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ವಿಷಯವಾರು ತೆರೆದ ಪುಸ್ತಕ ಮಾದರಿ ಪರೀಕ್ಷೆ, ವಲಯವಾರು ನೇರ ಸಂವಾದ, ಹಿರಿಯ ಅಧಿಕಾರಿಗಳ ಜತೆಗೆ ಗಣಿತ, ವಿಜ್ಞಾನ, ಇಂಗ್ಲಿಷ್ ವಿಷಯವಾರು ಚರ್ಚಿಸಿ ಪರಿಹಾರ ಒದಗಿಸಲಾಗಿದೆ.
ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ: ಶಾಲಾ ಹಂತದಲ್ಲಿ ಕಲಿಕಾ ಮಾದರಿ ಅಳವಡಿಸಿಕೊಳ್ಳಲು ಸೂಚಿಸುವುದು. ಶಾಲಾ ಪೂರ್ವ ಹಾಗೂ ನಂತರ ವಿಶೇಷ ತರಗತಿ ನಡೆಸಲು ಕ್ರಮ ಕೈಗೊಳ್ಳುವುದು ಹಾಗೂ ಆಂತರಿಕ ಅಂಕಗಳ ಬಗ್ಗೆ ಮಾಹಿತಿ ನೀಡುವುದು. ಎಫ್.ಎ-1, ಎಫ್.ಎ-2, ಎಫ್.ಎ-3, ಎಫ್.ಎ-4 ಮತ್ತು ಎಸ್.ಎ-1, ಎಸ್.ಎ-2 ಕುರಿತು ಅರಿವು ಮೂಡಿಸುವುದು. ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ವಿಷಯಗಳನ್ನು ನೆಲದ ಮೇಲೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸುವ ಮೂಲಕ ವಿಷಯ ಸರಳೀಕರಿಸುವುದು.
ನೇರ ಫೋನ್-ಇನ್: ವಿಷಯವಾರು ತಜ್ಞ ಶಿಕ್ಷ್ಷಕರಿಂದ ಫೋನ್-ಇನ್ ಕಾರ್ಯಕ್ರಮ ಮೂಲಕ ಸಮಸ್ಯೆ ನಿವಾರಿಸಿಕೊಳ್ಳಲು ಕೊಟ್ಟ ಅವಕಾಶ ಸದ್ಬಳಕೆ ಮಾಡಿಕೊಂಡ ವಿದ್ಯಾರ್ಥಿಗಳಿಂದ 200ಕ್ಕೂ ಅಧಿಕ ಪ್ರಶ್ನೆ ಬಂದಿರುವುದು ಗಮನಾರ್ಹ. ಈ ಎಲ್ಲದರ ಜತೆಗೆ ವಲಯವಾರು ಹಾಗೂ ಶಾಲಾ ಹಂತದಲ್ಲಿ ಚಟುವಟಿಕೆ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘ, ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳ ಜತೆಗೆ ನಿರಂತರ ಸಂಪರ್ಕ ಇಟ್ಟುಕೊಂಡು ಚಟುವಟಿಕೆ ಏರ್ಪಡಿಸುವ ಮೂಲಕ ಪರೀಕ್ಷೆ ಫಲಿತಾಂಶ ಸುಧಾರಿಸಲಾಗಿದೆ.