Advertisement

ಶೆಡ್‌ ಸ್ವಯಂ ಪ್ರೇರಿತ ತೆರವು ಆರಂಭ

10:27 AM Jun 24, 2019 | Team Udayavani |

ಶಶಿಕಾಂತ ಕೆ.ಭಗೋಜಿ
ಹುಮನಾಬಾದ:
ಪಟ್ಟಣದ ಹಳೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ವೀರಭದ್ರೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಹಾಗೂ ಮುಜರಾಯಿ ಇಲಾಖೆಗೆ ವ್ಯಾಪ್ತಿಗೊಳಪಡುವ ಸ್ಥಳದಲ್ಲಿ ನಿರ್ಮಿಸಿದ್ದ ಶೆಡ್‌ಗಳನ್ನು ಕೆಲವು ವ್ಯಾಪಾರಿಗಳು ರವಿವಾರ ಉಪವಿಭಾಗಾಧಿಕಾರಿಗಳ ಆದೇಶದ ಮೇರೆಗೆ ಸ್ವಯಂ ಪ್ರೇರಣೆಯಿಂದ ತೆರವು ಆರಂಭಿಸಿದರು.

Advertisement

ಶೆಡ್‌ನ‌ಲ್ಲಿ ವ್ಯವಹಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ಜೂನ್‌ 9ರಂದು ಉಪವಿಭಾಗಾಧಿಕಾರಿಗಳು, ಜೂ.23ರೊಳಗೆ ತೆರವುಗೊಳಿಸುವಂತೆ ದೇವಸ್ಥಾನದ ಕಾರ್ಯದರ್ಶಿಯ ಮೂಲಕ ನೊಟೀಸ್‌ ಜಾರಿಗೊಳಿಸಿದ್ದರು. ನಿಗದಿತ ಅವಧಿಯೊಳಗೆ ತೆರವು ಮಾಡಿಕೊಳ್ಳದ ಶೆಡ್‌ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ, ತೆರವಿಗೆ ತಗಲುವ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಲಾಗುವುದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಇದರ ಪರಿಣಾಮ ಶೇ.40ರಷ್ಟು ವ್ಯಾಪಾರಿಗಳು ರವಿವಾರ ಬೆಳಗ್ಗೆಯಿಂದಲೇ ಸ್ವಯಂ ಪ್ರೇರಿತವಾಗಿ ತೆವುಗೊಳಿಸಲು ಆರಂಭಿಸಿದರು.

ನಗರದ ಸೌಂದರ್ಯ ಹೆಚ್ಚಿಸುವುದು ಹಾಗೂ ಅಭಿವೃದ್ಧಿ ಉದ್ದೇಶದಿಂದ ಶೆಡ್‌ ತೆರವುಗೊಳಿಸುತ್ತಿರುವುದನ್ನು ಸ್ವಾಗತಿಸುತ್ತೇವೆ. ಆದರೆ ತೆರವಿನ ನಂತರ ರಸ್ತೆ ಸೌಂದರ್ಯ ಕೆಡಿಸುವ ವ್ಯವಹಾರಕ್ಕೆ ಅಂದರೆ ಮೋಟರ್‌ ಗ್ಯಾರೇಜ್‌ಗೆ ಯಾವುದೇ ಕಾರ‌ಣಕ್ಕೂ ಅವಕಾಶ ಕಲ್ಪಿಸದೆ ಸ್ವಚ್ಛತೆಗೆ ಆದ್ಯತೆ ನೀಡುವ ವ್ಯಾಪಾರಿಗಳಿಗೆ ಮಾತ್ರ ಅಂಗಡಿಗಳನ್ನು ವಿತರಿಸಬೇಕು ಎಂಬುದು ಸಂತ್ರಸ್ಥರ ಒತ್ತಾಸೆ.

ಆಟೋ ನಗರ ಸ್ಥಾಪಿಸಿ: ಗ್ಯಾರೇಜ್‌ ಮತ್ತಿತರ ಮೋಟಾರು ವಾಹನ ದುರುಸ್ತಿಗೆ ಸಂಬಂಧಪಟ್ಟ ಅಂಗಡಿಗಳನ್ನು ನಗರದಿಂದ ದೂರ ಇಟ್ಟಲ್ಲಿ ಮಾತ್ರ ಪಟ್ಟಣದ ಸೌಂದರ್ಯ ಹೆಚ್ಚಿಸಬೇಕೆಂಬ ಸಚಿವ ರಾಜಶೇಖರ ಪಾಟೀಲ ಅವರ ಕನಸು ನನಸಾಗಲು ಸಾಧ್ಯ. ಆ ಉದ್ದೇಶದಿಂದಲೇ 2013ನೇ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ವಿಜಯ ಸಾಧಿಸಿದ ನಂತರ ಅಂದು ನಗರದ ಹೊರ ವಲಯದ ಆರ್‌ಟಿಒ ಚೆಕ್‌ಪೊಸ್ಟ್‌ ಹತ್ತಿರದ ವಾಯುವ್ಯ ದಿಕ್ಕಿನಲ್ಲಿ ಜಿಲ್ಲಾಧಿಕಾರಿ ಪಿ.ಸಿ. ಜಾಫರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಉಜ್ವಲಕುಮಾರ ಘೋಷ, ಉಪವಿಭಾಗಾಧಿಕಾರಿ ಹೆಬ್ಸಿಬಾರಾಣಿ ಕುರ್ಲಾಪಾಟಿ ಮತ್ತಿತರ ಅಧಿಕಾರಿಗಳ ತಂಡದೊಂದಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದನ್ನು ಈಗ ಸ್ಮರಿಸಬಹುದು.

ಕ್ಷೇತ್ರದ ಎಲ್ಲ ಸಮುದಾಗಳನ್ನು ಯಾವತ್ತೂ ಜೊತೆಗೆ ತೆಗೆದುಕೊಂಡು ಹೋಗುವ ಸಚಿವ ರಾಜಶೇಖರ ಪಾಟೀಲ ಅವರು ಗ್ಯಾರೇಜ್‌ಗಳನ್ನು ಮುಂದಿನ ದಿನಗಳಲ್ಲಿ ನಿರ್ಮಿಸಲಾಗುವ ಆಟೋ ನಗರಕ್ಕೆ ಕೊಂಡೊಯ್ಯವ ಮೂಲಕ ಆ ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

Advertisement

ಪಟ್ಟಣದ ಹಳೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ನೂರಾರು ಶೆಡ್‌ಗಳಲ್ಲಿ ಯಾವುದೇ ಒಂದು ಸಮುದಾಯದ ಜನರು ಮಾತ್ರ ವ್ಯಾಪಾರ ನಡೆಸುತ್ತಿಲ್ಲ. ಎಲ್ಲ ಸಮುದಾಯದವರಿಗೂ ನೀಡಿದ್ದರು ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ಈಗ ಶೆಡ್‌ ತೆರವಿನ ನಂತರ ನಿರ್ಮಿಸಲಾಗುವ ಅಂಗಡಿ ಕೇವಲ ಮುಜರಾಯಿ ವ್ಯಾಪ್ತಿಯ ಸಮುದಾಯಕ್ಕೆ ಮಾತ್ರ ನೀಡಬಾರದು. ಮತ್ತು ಈಗಾಗಲೇ ಈದ್ಗಾ ಮೈದಾನಕ್ಕೆ ಹೊಂದಿಕೊಂಡು ನಿರ್ಮಿಸಿರುವ 16 ಮಳಿಗೆಗಳನ್ನು ಸಹ ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಬಾಡಿಗೆಗೆ ನೀಡದೇ ಎಲ್ಲ ಸಮುದಾಯಗಳಿಗೂ ನೀಡಬೇಕು ಎಂಬುದು ವ್ಯಾಪಾರಿಗಳ ಬೇಡಿಕೆ. ಈ ನಿಟ್ಟಿನಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ಚುನಾಯಿತ ಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳು ವಿಶೇಷ ಮುತುವರ್ಜಿವಹಿಸಿ, ಮುಜರಾಯಿ ಮತ್ತು ವಕ್ಫ್ ವ್ಯಾಪ್ತಿಯ ಮಳಿಗೆಗಳ ವಿತರಣೆ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ಕಲ್ಪಿಸದೇ ಎಲ್ಲ ಸಮುದಾಯಗಳ ಭಾತೃತ್ವ ವೃದ್ಧಿಗೆ ಪೂರಕ ಯೋಜನೆ ರೂಪಿಸಬೇಕು ಎಂಬುದು ವ್ಯಾಪಾರಿಗಳ ಒತ್ತಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next