Advertisement

ರಸ್ತೆ ವಿಭಜಕವೀಗ ಬಿಡಾಡಿ ದನಗಳ ವಿಶ್ರಾಂತಿ ತಾಣ

11:01 AM Apr 27, 2019 | Naveen |

ಹುಮನಾಬಾದ್‌: ಸೂಕ್ತ ನಿರ್ವಹಣೆ ಕೊರತೆಯಿಂದ ಇಲ್ಲಿನ ವಾಂಜ್ರಿ ಮಾರ್ಗದಲ್ಲಿ ಲಕ್ಷಾಂತರ ರೂ. ವ್ಯಯಿಸಿ ನಿರ್ಮಿಸಿದ ರಸ್ತೆ ವಿಭಜಕ ಸಾರ್ವಜನಿಕ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ.

Advertisement

ಹೌದು, ಪಟ್ಟಣ ವಿಸ್ತರಿಸದಂತೆ ವಾಹನ ದಟ್ಟಣೆ ಗಂಭೀರವಾಗಿ ಪರಿಗಣಿಸಿ, ನಗರ ಸೌಂದರ್ಯ ವೃದ್ಧಿಸುವ ಉದ್ದೇಶದಿಂದ ರಸ್ತೆ ಅಭಿವೃದ್ಧಿ ಜೊತೆಗೆ ರಸ್ತೆ ವಿಭಜಕ ನಿರ್ಮಾಣ ಸಂಬಂಧ ಕ್ಷೇತ್ರದ ಶಾಸಕ ರಾಜಶೇಖರ ಬಿ.ಪಾಟೀಲ ಪುರಸಭೆ 14ನೇ ಹಣಕಾಸು ಯೋಜನೆಯಡಿ 2015-16ನೇ ಸಾಲಿನಲ್ಲಿ 2.5 ಕೋಟಿ ರೂ. ನಿಗದಿಪಡಿಸಲಾಗಿತ್ತು.

ನಿರ್ವಹಣೆ ಕೊರತೆ: ಈ ನಿಟ್ಟಿನಲ್ಲಿ ಡಾ| ಅಂಬೇಡ್ಕರ್‌ ವೃತ್ತದಿಂದ ವಾಂಜ್ರಿವರೆಗೆ ರಸ್ತೆ ವಿಸ್ತರಣೆ ಕೈಗೊಳ್ಳಲಾಗಿದೆ. ಜೊತೆಗೆ ಗ್ರಿಲ್ ಅಳವಡಿಕೆ ಕಾರ್ಯ ಸರ್ಕಾರಿ ಪ.ಪೂ ಕಾಲೇಜುವರೆಗೆ ಮಾತ್ರ ಪೂರ್ಣಗೊಳಿಸಲಾಗಿದೆ. ಆದರೆ ಬಾಕಿ ಉಳಿದ ರಸ್ತೆ ವಿಭಜಕಕ್ಕೆ ಗ್ರಿಲ್ ಅಳವಡಿಸದಿರುವ ಜೊತೆಗೆ ಸೂಕ್ತ ನಿರ್ವಹಣೆ ಕೊರತೆಯಿಂದ ರಸ್ತೆ ವಿಭಜಕ ಸಾರ್ವಜನಿಕ ಕಸದ ತೊಟ್ಟಿಯಾಗಿ ಮಾರ್ಪಟ್ಟಿರುವುದು ವಿಪರ್ಯಾಸದ ಸಂಗತಿ.

ರಸ್ತೆ ವಿಭಜಕ ಮಧ್ಯೆ ಹಸಿರು ಹಾಗೂ ಹೂಗಳಿಂದ ಕಂಗೊಳಿಸುವಂತಹ ಸಸಿ ನೆಡುವ ಕಾರ್ಯ ಕೈಗೊಳ್ಳದ ಕಾರಣ ಸಾರ್ವಜನಿಕರು ರಸ್ತೆ ವಿಭಜಕದ ಬಗ್ಗೆ ನಿಷ್ಕಾಳಜಿ ವಹಿಸುತ್ತಿದ್ದಾರೆ. ಈ ಎಲ್ಲದರ ಮಧ್ಯೆ ಇದೀಗ ವಿಭಜಕ ಬಿಡಾಡಿ ದನಗಳ ತಾಣವಾಗಿದೆ. ಇದರಿಂದ ವಾಹನ ಮತ್ತು ಜನ ಸಂಚಾರಕ್ಕೆ ಸಂಚಕಾರ ಬಂದಿರುವುದು ಸತ್ಯ.

ಶೌಚಕ್ಕೆ ಬಳಕೆ: ಜೈಲ್ ವಸತಿಗೃಹ ಸಮುಚ್ಛಯ ಪಕ್ಕದಲ್ಲಿರುವ ವಡ್ಡರ್‌ ಕಾಲೋನಿ ನಿವಾಸಿಗಳು ಈ ರಸ್ತೆ ವಿಭಜಕದ ಜಾಗವನ್ನು ಬೆಳಗಿನ ಜಾವ ಶೌಚಕ್ಕೋಸ್ಕರ ಬಳಸುತ್ತಿದ್ದರು ಎನ್ನುವ ಆಪಾದನೆಗಳೂ ದಟ್ಟವಾಗಿದ್ದು, ಇದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.

Advertisement

ಶಾಸಕರು ನಗರ ಸೌಂದರ್ಯ ಉದ್ದೇಶದಿಂದ ಕೈಗೊಂಡ ಕಾರ್ಯ ಯಶಸ್ವಿಗೊಳಿಸುವುದಕ್ಕಾಗಿ ಪುರಸಭೆ ಅಧಿಕಾರಿಗಳು ಅಭಿವೃದ್ಧಿ ವಿಷಯದಲ್ಲಿ ಕುಂಟು ನೆಪವೊಡ್ಡಿ ಕಾಮಗಾರಿ ವಿಳಂಬ ಮಾಡದೇ ಶೀಘ್ರ ಆರಂಭಿಸಬೇಕೆನ್ನುವುದು ಸಾರ್ವಜನಿಕರ ಒತ್ತಾಸೆ.

ಬಾಕಿ ಉಳಿದ ಗ್ರಿಲ್ ಅಳವಡಿಕೆ ಕಾರ್ಯದ ಜೊತೆ ವಿಭಜಕ ಮಧ್ಯೆ ಸಾಧ್ಯವಾದಷ್ಟು ಶೀಘ್ರ ಸಸಿ ನೆಡಬೇಕು. ಬಿಡಾಡಿ ದನಗಳ ಸಂಚಾರ ಸ್ಥಗಿತಗೊಳಿಸಿ, ಉದ್ದೇಶಿತ ಕೆಲಸಕ್ಕೆ ಬಳಕೆಯಾಗುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯಪ್ರವೃತ್ತರಾಗುವ ಮೂಲಕ ಸಾರ್ವಜನಿಕರಿಗೆ ಪುರಸಭೆ ಅಧಿಕಾರಿಗಳು ಅನುಕೂಲ ಒದಗಿಸಬೇಕು.
•ಎಂ.ಡಿ. ಇಸ್ಮಾಯಿಲ್,
ಕೃಷಿ ಇಲಾಖೆ ಜಿಲ್ಲಾ ಸಲಹೆಗಾರ

ಬಾಕಿ ಗ್ರಿಲ್ ಅಳವಡಿಕೆಗಾಗಿ 18 ಲಕ್ಷ ರೂ. ನಿಗದಿಪಡಿಸಿ, ವಿಭಜಕ ಮಧ್ಯೆ ಸಸಿ ನೆಡುವುದು ಮತ್ತು ಬೈಪಾಸ್‌ವರೆಗೆ ಗ್ರಿಲ್ ಅಳವಡಿಸುವ ಕಾರ್ಯಕ್ಕೆ ಈಗಾಗಲೇ ಟೆಂಡರ್‌ ನಡೆದಿದ್ದು, ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ವಾರದೊಳಗೆ ತೆರೆದ ನಂತರ ಕಾಮಗಾರಿ ಆರಂಭಿಸಲಾಗುವುದು. ಜೊತೆಗೆ ಕೆಇಬಿಯಿಂದ ಐಬಿವರೆಗಿನ ರಸ್ತೆ ವಿಭಜಕ ಮಧ್ಯೆದಲ್ಲೂ ಸಸಿ ನೆಡಲು 7ಲಕ್ಷ ರೂ. ನಿಗದಿಪಡಿಸಲಾಗಿದೆ. ಆ ಕಾಮಗಾರಿ ಆರಂಭಿಸಲು ಈ ಹಿಂದೆ ನಿರ್ಧರಿಸಲಾಗಿದೆ.
•ಅಪ್ಸರಮಿಯ್ಯ,
ಪುರಸಭೆ ಮಾಜಿ ಅಧ್ಯಕ್ಷ

ಶಶಿಕಾಂತ ಕೆ.ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next