Advertisement

ರೈತ ಭವನ ಉನ್ನತೀಕರಣ ಕಾರ್ಯವಾಗಲಿ

10:31 AM Jul 15, 2019 | Naveen |

ಶಶಿಕಾಂತ ಕೆ.ಭಗೋಜಿ
ಹುಮನಾಬಾದ‌:
ಕೃಷಿ ಉತ್ಪನ್ನ ಮಾರುಕಟ್ಟೆಗೆ ಧಾನ್ಯ ಮಾರಾಟಕ್ಕೆ ಬರುವ ರೈತರಿಗೆ ತುರ್ತು ಸಂದರ್ಭಧಲ್ಲಿ ವಾಸ್ತವ್ಯಕ್ಕೆ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ರಾಜ್ಯದ ವಿವಿಧೆಡೆ ರೈತ ಭವನ ನಿರ್ಮಿಸಿದ ಮಾದರಿಯಲ್ಲೇ ಇಲ್ಲೂ ನಿರ್ಮಿಸಲಾಗಿದೆ. ಆದರೆ ಉದ್ದೇಶಿತ ಕೆಲಸಕ್ಕೆ ಬಳಕೆ ಆಗದೇ ಇಲಾಖೆಯ ಕಾರ್ಯದರ್ಶಿ ರಾತ್ರಿ ವಾಸ್ತವ್ಯಕ್ಕೆ ಸೀಮಿವಾಗಿದೆ.

Advertisement

ರೈತರ ಹಿತ ಕಾಪಾಡುವ ಉದ್ದೇಶದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ 2019-10ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಬಿಡುಗಡೆ ಮಾಡಿದ ರೂ. 4.85ಲಕ್ಷ ರೂ. ವೆಚ್ಚದಲ್ಲಿ ಒಂದೇ ವಿಶ್ರಾಂತಿ ಕೋಣೆ, ಸ್ನಾನ ಮತ್ತು ಶೌಚಾಲಯ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಿಸಿ, ದಶಕ ಕಳೆದರೂ ಈವರೆಗೆ ಯಾರೊಬ್ಬ ರೈತರು ಉಳಿದುಕೊಂಡ ನಿದರ್ಶನವಿಲ್ಲ. ರೈತರು ಉಳಿದುಕೊಂಡಿಲ್ಲ ಎಂಬುದಕ್ಕಿಂತ ಸಂಬಂಧಪಟ್ಟವರು ರೈತರಿಗೆ ಅದರ ಉಪಯೋಗ ಕುರಿತು ಈ ವರೆಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿಲ್ಲ.

ರೈತ ಭವನದ ಅಗತ್ಯತೆ ಏನು?: ದವಸ ಧಾನ್ಯ ಮಾರಾಟ, ಖರೀದಿ ಹಾಗೂ ಸಂತೆ ಮೊದಲಾದ ಕೆಲಸಕ್ಕೆ ಗ್ರಾಮೀಣ ಭಾಗದಿಂದ ಬರುವ ರೈತರು ದುಬಾರಿ ಹಣ ತೆತ್ತು ಖಾಸಗಿ ಲಾಡ್ಜ್ಗಳಲ್ಲಿ ವಾಸ್ತವ್ಯ ಮಾಡುವುದು ಕಷ್ಟಸಾಧ್ಯ. ರೈತರಿಗೆ ಆರ್ಥಿಕ ಹೊರೆ ಆಗುವುದನ್ನು ತಪ್ಪಿಸಿ, ಉಚಿತ ಸೌಲಭ್ಯ ಕಲ್ಪಿಸುವುದು ರೈತ ಭವನದ ಮೂಲ ಉದ್ದೇಶ.

ಹೇಗಿರಬೇಕು ರೈತ ಭವನ?: ನೇಗಿಲಯೋಗಿಯ ರಾತ್ರಿ ವಾಸ್ತವ್ಯದ ಉದ್ದೇಶದಿಂದ ನಿರ್ಮಿಸುವ ರೈತ ಭವನದಲ್ಲಿ ವಾಸ್ತವ್ಯ ಮಾಡುವ ರೈತರ ಸಂಖ್ಯೆ ಅಂದಾಜು ಸಂಖ್ಯೆ ಗಮನದಲ್ಲಿಟ್ಟುಕೊಂಡು ಕೋಣೆ ನಿರ್ಮಿಸಿರಬೇಕು. ಪ್ರತಿಯೊಂದು ಕೋಣೆಗಳಲ್ಲೂ ಫ್ಯಾನ್‌ ಅಳವಡಿಸಿರಬೇಕು. ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಸಾಮೂಹಿಕ ಸ್ನಾನಕೋಣೆ, ಶೌಚಾಲಯ ಬಳಕೆಗೆ ಅಗತ್ಯ ನೀರಿನ ಸೌಲಭ್ಯದ ಜೊತೆಗೆ ಶುದ್ಧ ಕುಡಿವ ನೀರಿನ ವ್ಯವಸ್ಥೆ, ರೈತರ ಸಭೆ, ಸಮಾರಂಭಕ್ಕಾಗಿ ಒಂದು ಸಭಾಂಗಣ, ಗ್ರಂಥಾಲಯ ಮತ್ತಿತರ ಸೌಲಭ್ಯ ಕಲ್ಪಿಸಬೇಕು.

ಉಪಯೋಗಕ್ಕೆ ಬಾರದ ರೈತ ಭವನ: ಹುಮನಾಬಾದನಲ್ಲಿ ನಿರ್ಮಿಸಿರುವ ರೈತ ಭವನದಲ್ಲಿ ಒಂದೇ ಒಂದು ಕೋಣೆ, ಎರಡು ಮಂಚ, ಶೌಚಾಲಯ, ಸ್ನಾನಕೋಣೆ ಮಾತ್ರ ಇದ್ದು, ಅದನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಯ ರಾತ್ರಿ ವಾಸ್ತವ್ಯಕ್ಕೆ ಸೀಮಿತಗೊಂಡಿದೆ. ಹುಮನಾಬಾದ ತಾಲೂಕು ಕೇಂದ್ರದ ರೈತ ಭವನದಲ್ಲಿ ರೈತರು ಹೇಳುವ ಪ್ರಕಾರ ಕನಿಷ್ಟ 20 ಕೋಣೆ ಬೇಕು. ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಆದರೇ ಇಲ್ಲಿನ ರೈತ ಭವನದ ಹಿಂಭಾಗದಲ್ಲಿ ಸ್ಮಶಾನ ಇರುವ ಕಾರಣ ದೆವ್ವಗಳ ಕಾಟವಿದೆ ಎಂಬ ಕಾರಣಕ್ಕಾಗಿ ಉಳಿದುಕೊಳ್ಳಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸಹ ಹಿಂದೇಟು ಹಾಕುವ ಸ್ಥಿತಿ ಇದೆ.

Advertisement

ಕೆಟ್ಟು ಶುದ್ಧ ನೀರಿನ ಘಟಕ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ ಕಟ್ಟಡಕ್ಕೆ ಹೊಂದಿಕೊಂಡು ಎರಡು ವರ್ಷಗಳ ಹಿಂದೆ ರೂ.5ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ಶುದ್ಧಕುಡಿಯುವ ನೀರಿನ ಘಟಕ ಒಂದು ವರ್ಷದಿಂದ ಸ್ಥಗಿತಗೊಂಡ ಕಾರಣ ರೈತರಿಗೆ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ.

ಮಾರುಕಟ್ಟೆ ಪಾಂಗಣದಲ್ಲಿ ರೂ.1ಕೋಟಿಗೂ ಅಧಿಕ ವೆಚ್ಚದಲ್ಲಿ ಧಾನ್ಯ ಸ್ವಚ್ಛತೆ, ವರ್ಗೀಕರಣ ಮತ್ತು ಪ್ಯಾಕಿಂಗ್‌ ಘಟಕ ನಿರ್ಮಿಸಲಾಗಿದ್ದು, ಅದನ್ನು ಸಾಧ್ಯವಧಷ್ಟು ಶೀಘ್ರದಲ್ಲಿ ರೈತರ ಬಳಕೆಗೆ ಯೋಗ್ಯ ಸ್ಥಿತಿಗೆ ತರುವ ಅಗತ್ಯವಿದೆ.

ಸಾರ್ವಜನಿಕ ಶೌಚಾಲಯವಿಲ್ಲ: ಮಾರುಕಟ್ಟೆಗೆ ಬರುವ ರೈತರು ಮತ್ತು ವ್ಯಾಪಾರಿಗಳಿಗೆ ಅತ್ಯಂತ ಅವಶ್ಯವಿರುವ ಮೂತ್ರಾಲಯ ಮತ್ತು ಶೌಚಾಲಯ ಇಲ್ಲದಿರುವ ಕಾರಣ ಬಸ್‌ ನಿಲ್ದಾಣದ ಶೌಚಾಲಯದ ಮೊರೆ ಹೋಗುತ್ತಿದ್ದಾರೆ.

ಸಾಧ್ಯವಧಷ್ಟು ಶೀಘ್ರದಲ್ಲಿ ಅಗತ್ಯ ಮೂಲಸೌಲಭ್ಯ ಉಳ್ಳ ಅತ್ಯಾಧುನಿಕ ಕಟ್ಟಡ ನಿರ್ಮಿಸಿ, ರೈತರಿಗೆ ಅನುಕೂಲ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಎನ್ನುವುದು ರೈತರ ಒತ್ತಾಸೆ.

ಹುಮನಾಬಾದ್‌ನ ರೈತ ಭವನ ಹೆಸರಿಗೆ ಮಾತ್ರ ಇದೆ. ಕಟ್ಟಡ ನಿರ್ಮಿಸಿ ದಶಕವಾಗಿದೆ. ಪೂರ್ವ ಯೋಜನೆ ಇಲ್ಲದೇ ನಿರ್ಮಿಸಿದ್ದರಿಂದ ಅದು ರೈತರ ಬಳಕೆಗೆ ಯೋಗ್ಯವಿಲ್ಲದಂತಿದೆ. ಬರುವ ದಿನಗಳಲ್ಲಿ ಅತ್ಯಾಧುನಿಕ ಮೂಲ ಸೌಲಭ್ಯ ಉಳ್ಳ ಕನಿಷ್ಟ 20 ಕೋಣೆ, ಸಭಾಂಗಣ, ಗ್ರಂಥಾಲಯ ಇತ್ಯಾದಿ ಗಮನದಲ್ಲಿಟ್ಟುಕೊಂಡು ನೂತನ ರೈತ ಭವನ ನಿರ್ಮಿಸಬೇಕು.
ಸತೀಶ ನನ್ನೂರೆ,
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ

ಈಗಾಗಲೇ ನಿರ್ಮಿಸಿದ ರೈತ ಭವನ ಅವೈಜ್ಞಾಕವಾಗಿದೆ. ರೈತರ ಬೇಡಿಕೆಯಂತೆ ಹೆಚ್ಚು ಕೋಣೆಗಳ ಅಗತ್ಯವಿದೆ. ಕೆಟ್ಟುಹೋದ ಶುದ್ಧ ಕುಡಿಯುವ ನೀರಿನ ಘಟಕದ ಸ್ಥಳದಲ್ಲಿ ಹೊಸದಾಗಿ ಘಟಕ ಸ್ಥಾಪಿಸಲು ಉನ್ನತಾಧಿಕಾರಿಗೆ ಪ‌ತ್ರ ಬರೆಯಲಾಗಿದೆ. ರೈತ ಭವನ ಕಟ್ಟಡದ ಹಿಂಬದಿಯಲ್ಲಿ ಸ್ಮಶಾನವಿದೆ. ಸುತ್ತಲಿನ ಜನ ರಾತ್ರಿ ದೇವ್ವಗಳ ಕಾಟವಿದೆ ಎಂದಿದ್ದಾರೆ. ನನಗೂ ರಾತ್ರಿ ಮಲಗಲು ಒಮ್ಮೊಮ್ಮೆ ಭಯವಾಗುತ್ತಿದೆ. ಆದರೂ ಧೈರ್ಯ ಮಾಡಿ ಮಲಗುತ್ತಿದ್ದೇನೆ.
ಅ.ಬ.ಉಣ್ಣಿಬಾವಿ,
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next