Advertisement

ಬಿತ್ತನೆಗೆ ಸಿದ್ಧವಾದರೂ ಬಾರದ ಮುಂಗಾರು

02:54 PM Jun 15, 2019 | Naveen |

ಹುಮನಾಬಾದ: ಮುಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡು ಕುಳಿತಿರುವಾಗ ಸಕಾಲಕ್ಕೆ ಮಳೆ ಬಾರದೇ ಇರುವುದರಿಂದ ಅನ್ನದಾತನ ಮೊಗ ಕಳೆಗುಂದುತ್ತಿದೆ.

Advertisement

ಮುಂಗಾರು ಮಳೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ರೈತರು ಎರಡು ವಾರದಿಂದ ಹೊಲ ಹದಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜೂನ್‌ 3ರಂದು ಹುಮನಾಬಾದ ಹೋಬಳಿ ವ್ಯಾಪ್ತಿಯಲ್ಲಿ ಸುರಿದ 40 ಎಂಎಂ ಮಳೆ ಕೊಂಚ ಮಟ್ಟಿಗೆ ಸಮಾಧಾನ ತಂದರೂ, ಬಿತ್ತನೆಗೆ ಇನ್ನೊಂದು ಮಳೆ ಬರುವವರೆಗೆ ರೈತರು ಕಾಯುವುದು ಅನಿವಾರ್ಯವಾಗಿದೆ. ಈ ಮಧ್ಯ ಶೇ.2ರಷ್ಟು ರೈತರು ಕೊಳವೆಬಾವಿ ನೀರಿನ ಸೌಲಭ್ಯ ಉಳ್ಳವರು ಭೂಮಿ ಹದಗೊಳಿಸಿ, ಬಿತ್ತನೆ ಕೈಗೊಂಡಿದ್ದು, ಸಣ್ಣ ಪ್ರಮಾಣದಲ್ಲಿ ಮೊಳಕೆ ಚಿಗುರೊಡೆಯುತ್ತಿವೆ.

ಮಳೆ ಕೊರತೆ ಪ್ರಮಾಣ: ಹುಮನಾಬಾದನಲ್ಲಿ 40 ಎಂಎಂ ಮಳೆಯಾದ ಕಾರಣ ಶೇ.36ರಷ್ಟು ಕೊರತೆ ಕಾಡಿದರೆ, ಚಿಟಗುಪ್ಪ ಶೇ.72, ಬೆಮಳಖೇಡಾ ಶೇ.63, ದುಬಲಗುಂಡಿ ಶೇ.23, ಹಳ್ಳಿಖೇಡ(ಬಿ) ಶೇ.61, ನಿರ್ಣಾಶೇ.62ರಷ್ಟು ಈ ಬಾರಿ ಮಳೆ ಕೊರತೆ ಇದೆ. ಒಟ್ಟಾರೆ ತಾಲೂಕಿನಲ್ಲಿ 75 ಎಂಎಂ ಬದಲಿಗೆ 30 ಎಂಎಂ ಸುರಿದಿದ್ದರಿಂದ ಮಳೆ ಅಭಾವ ತೀವ್ರವಾಗಿ ಕಾಡುತ್ತಿದೆ.

ಬಿತ್ತನೆ ಗುರಿ: ಈ ಬಾರಿ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ ಸೋಯಾ ಅವರೆ 18,000 ಹೆಕ್ಟೇರ್‌, ತೊಗರಿ 14,000 ಹೆಕ್ಟೇರ್‌, ಉದ್ದು 4,000 ಹೆಕ್ಟೇರ್‌, ಹೆಸರು 6,000 ಹೆಕ್ಟೇರ್‌, ಎಳ್ಳು 1,000 ಹೆಕ್ಟೇರ್‌, ಸಜ್ಜೆ 1,300 ಹೆಕ್ಟೇರ್‌, ಜೋಳ 6,000 ಹೆಕ್ಟೇರ್‌ ಭತ್ತ 1,000 ಹೆಕ್ಟೇರ್‌ ಮತ್ತು ಕಬ್ಬು 8,000 ಹೆಕ್ಟೇರ್‌ ಸೇರಿ ತಾಲೂಕಿನಲ್ಲಿ ಒಟ್ಟು 64,085 ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆ ಕೈಗೊಳ್ಳುವ ಗುರಿ ಹೊಂದಲಾಗಿದೆ. ಒಂದು ವೇಳೆ ಮುಂಗಾರು ಇನ್ನೂ ವಿಳಂಬವಾದರೆ ಹೆಚ್ಚುವರಿ ಸೋಯಾ ಅವರೆ ಬೀಜ ಅಗತ್ಯ ಬೀಳುವ ಸಾಧ್ಯತೆ ಇದ್ದು, ಮುಂಜಾಗೃತಾ ಕ್ರಮವಾಗಿ ಅಗತ್ಯ ದಾಸ್ತಾನು ಮಾಡಿಕೊಳ್ಳಲಾಗುವುದು ಎಂದು ಡಾ|ಎಂ.ಪಿ.ಮಲ್ಲಿಕಾರ್ಜುನ ತಿಳಿಸಿದರು.

6 ಹೋಬಳಿ- 3 ಉಪಕೇಂದ್ರದಲ್ಲಿ ದಾಸ್ತಾನು: ಹುಮನಾಬಾದ, ದುಬಲಗುಂಡಿ, ಹಳ್ಳಿಖೇಡ(ಬಿ), ಚಿಟಗುಪ್ಪ, ನಿರ್ಣಾ ಮತ್ತು ಬೆಮಳಖೇಡಾ ಸೇರಿ 6 ಹೊಬಳಿ ಮತ್ತು ಕನಕಟ್ಟಾ, ಘಟಬೋರಾಳ ಮತ್ತು ಮನ್ನಾಎಖ್ಖೆಳ್ಳಿ ಹೆಚ್ಚುವರಿ ಉಪ ಕೆಂದ್ರಗಳಲ್ಲಿ 9,600 ಕ್ವಿಂಟಲ್ ಸೋಯಾ ಅವರೆ ದಾಸ್ತಾನು ಮಾಡಲಾಗಿದೆ. ಕಳೆದ ಸಾಲಿನಲ್ಲಿ 8,500 ಕ್ವಿಂಟಲ್ ಬೇಡಿಕೆ ಆಧರಿಸಿ, ಈ ಬಾರಿ 1,600 ಕ್ವಿಂಟಲ್ ಹೆಚ್ಚು ದಾಸ್ತಾನು ಮಾಡಲಾಗಿದೆ. ಸಾಮಾನ್ಯ ಗುಂಪಿನ ರೈತರಿಗೆ ಶೇ.50ರ ರಿಯಾಯ್ತಿ ದರದಲ್ಲಿ, ಪ.ಜಾ.-ಪ.ಪಂ. ರೈತರಿಗೆ ಶೇ.75ರಷ್ಟು ರೀಯಾಯ್ತಿ ದರದಲ್ಲಿ ಪ್ರತೀ ರೈತರಿಗೆ ಗರಿಷ್ಟ 2 ಹೆಕ್ಟೇರ್‌ (ಅಂದರೇ 5ಎಕರೆ)ಗೆ ತಗಲುವಷ್ಟು ಮಾತ್ರ ಬೀಜ ವಿತರಣೆ ಮಾಡಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ವಿವರಿಸಿದರು.

Advertisement

ಆನ್‌ಲೈನ್‌ ನೋಂದಣಿ ಕಡ್ಡಾಯ: ಸರ್ಕಾರದ ಹೊಸ ಆದೇಶದ ಪ್ರಕಾರ ಪ್ರತೀ ರೈತರು ತಮ್ಮ ಬ್ಯಾಂಕ್‌ ಖಾತೆ ಪುಸ್ತಕ, ಪಹಣಿ, ಆಧಾರ ಕಾರ್ಡ್‌ ದಾಖಲೆಗಳನ್ನು ಕೆ.ಕಿಸಾನ್‌ಫಿಟಾಲ್ನಲ್ಲಿ ನೋಂದಣಿ ಮಾಡಿಸಲೇಬೇಕು. ಹೀಗೆ ಒಮ್ಮೆ ಮಾಡಿಸಿದ ನೋಂದಣಿ ಜೀವನ ಪರ್ಯಂತ ನಡೆಯುತ್ತದೆ. ಕಾರಣ ಕೊಂಚ ಬೇಸರವಾದರೂ ತಾಳ್ಮೆ ಕಳೆದುಕೊಳ್ಳದೇ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

ವಿಮೆ ಕಂತು ಪಾವತಿಸಿ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಸೇರಿದಂತೆ ಅಕಾಲಿಕ ಮಳೆಯಿಂದ ಹಾನಿಗೀಡಾಗುವ ಬೆಳೆಹಾನಿ ಪರಿಹಾರ ಪಡೆಯುವುದಕ್ಕಾಗಿ ಪಹಣಿ, ಬ್ಯಾಂಕ್‌ ಪಾಸ್‌ಬುಕ್‌, ಆಧಾರ ದಾಖಲೆಗಳ ಜೊತೆಗೆ ಶೇ.2ರಷ್ಟು ವಿಮೆ ಕಂತನ್ನು ಪಾವತಿಸಲೇಬೇಕು. ಅದಕ್ಕಾಗಿ ತೊಗರಿ ಪ್ರತೀ ಎಕರೆಗೆ 323.00 ರೂ. ಸೋಯಾ ಅವರೆ 275.00 ರೂ. ಉದ್ದು 226.72, ಜೋಳ 275.03 ರೂ. ಪಾವತಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಡಾ|ಎಂ.ಪಿ.ಮಲ್ಲಿಕಾರ್ಜುನ ತಿಳಿಸಿದರು.

ಜೂ.14ರ ವರೆಗೂ ನಿರೀಕ್ಷೆಯಂತೆ ಮುಂಗಾರು ಮಳೆಯಾಗಿಲ್ಲ. ರೈತರು ಯಾವುದೇ ಕಾರಣಕ್ಕೂ ಬಿತ್ತನೆ ವಿಷಯದಲ್ಲಿ ಅವಸರ ಮಾಡದೇ ತಾಳ್ಮೆ ಕಳೆದುಕೊಳ್ಳದೇ ಮಳೆಗಾಗಿ ದಾರಿ ಕಾಯಲೇಬೇಕಾದ ಅನಿವಾರ್ಯತೆ ಇದೆ. ಜುಲೈ ಅಂತ್ಯದ ವರೆಗೆ ಬಿತ್ತನೆ ಕೈಗೊಂಡರೂ ಇಳುವರಿ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ.
ಡಾ| ಎಂ.ಪಿ.ಮಲ್ಲಿಕಾರ್ಜನ,
ಸಹಾಯಕ ಕೃಷಿ ನಿರ್ದೇಶಕರು, ಹುಮನಾಬಾದ

Advertisement

Udayavani is now on Telegram. Click here to join our channel and stay updated with the latest news.

Next