Advertisement

ವಾದ್ಯ-ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶನ

04:51 PM May 17, 2019 | Naveen |

ಹುಮನಾಬಾದ: ಮೇ 29ರಂದು ನಡೆಯಲಿರುವ ಪುರಸಭೆ ಚುನಾವಣೆ ಪ್ರಯುಕ್ತ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಗುರುವಾರ ವಿವಿಧ ಪಕ್ಷಗಳ ಅಭ್ಯರ್ಥಿಗಳು ವೈವಿಧ್ಯಮ ವಾದ್ಯವೃಂದ ಸಮೇತ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದರು.

Advertisement

ವಾರ್ಡ್‌ ಸಂಖ್ಯೆ 6ರ ಕಾಂಗ್ರೆಸ್‌ ಅಭ್ಯರ್ಥಿ ಗುಂಡಪ್ಪ ಹೊನ್ನಿಕೇರಿ ಬೆಳಗ್ಗೆ 10ಗಂಟೆ ಸುಮಾರು ಧನಗರ ಗಡ್ಡಾದಿಂದ ವಿವಿಧ ವೃತ್ತಗಳ ಮಾರ್ಗವಾಗಿ ಬುರಬುರೆ ವಾದ್ಯ, ಡೊಳ್ಳು, ನೃತ್ಯ ಸಮೇತ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಅತ್ಯಂತ ಕುತೂಹಲಕ್ಕೆ ಕಾರಣವಾದ ವಾರ್ಡ್‌ 15ರ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ(ಕಾಳಪ್ಪ) ಪಾಟೀಲ, ವಾರ್ಡ್‌ 2ರ ಕಾಂಗ್ರೆಸ್‌ ಅಭ್ಯರ್ಥಿ ಓಂಪ್ರಕಾಶ ಅಗಡಿ, ವಾರ್ಡ್‌ 18ರ ಅಭ್ಯರ್ಥಿ ವಿನಾಯಕ ಯಾದವ್‌, ವಾರ್ಡ್‌ 20ರ ಪಾರ್ವತಿಬಾಯಿ ಶೇರಿಕಾರ, ವಾರ್ಡ್‌ 5ರ ಅಶೋಕ ಹತ್ತಿ, ವಾರ್ಡ್‌ 12ರ ರಾಜಶೇಖರ, ವಾರ್ಡ್‌ 13ರ ಮಹೇಶ ಪಾಟೀಲ, ಅನೀಲ ಪಲ್ಲರಿ ಇನ್ನೂ ಅನೇಕರು ವಾದ್ಯ ಸಮೇತ ನೂರಾರು ಜನ ಬೆಂಬಲಿಗರೊಂದಿಗೆ ಹುಮ್ಮಸ್ಸಿನಿಂದ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಪಟ್ಟಣದ ಪುರಸಭೆಯ 27 ವಾರ್ಡ್‌ಗಳ ಪೈಕಿ ಸೂಕ್ತ ಅಭ್ಯರ್ಥಿಗಳು ಲಭ್ಯವಾಗದ ಕಾರಣ 21 ವಾರ್ಡ್‌ಗಳಿಂದ ಮಾತ್ರ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ನಾಮಪತ್ರ ಸಲ್ಲಿಕೆ ವೇಳೆಯೂ ಇತರ ಪಕ್ಷಗಳಿಗೆ ಹೋಲಿಸಿದರೆ ಕೊಂಚ ಉತ್ಸಾಹವೂ ಕಡಿಮೆ ಅನ್ನಿಸಿತು.

ರಾಜ್ಯದಲ್ಲಿ ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಸರ್ಕಾರ ಇದ್ದರೂ ಸ್ಥಳೀಯ ಮಟ್ಟದಲ್ಲಿ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಲಾಯಿತು. ಬಿಜೆಪಿಯಂತೆ ಈ ಪಕ್ಷವೂ 27 ವಾರ್ಡ್‌ಗಳ ಪೈಕಿ 20 ವಾರ್ಡ್‌ಗಳಿಂದ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಸಿದ್ದು ವಿಶೇಷ. ಮತ್ತು ಇಲ್ಲೂ ನಾಮಪತ್ರ ಸಲ್ಲಿಕೆ ವೇಳೆ ಹೇಳಿಕೊಳ್ಳುವಂಥ ಹುಮ್ಮಸ್ಸು ಅಭ್ಯರ್ಥಿಗಳಲ್ಲಿ ಕಾಣಿಸಲಿಲ್ಲ.

ಪಕ್ಷೇತರರಾದ ಬಂಡಾಯ ಅಭ್ಯರ್ಥಿಗಳು: ಜೆಡಿಎಸ್‌ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಎಂ.ಡಿ.ಯಾಸೀನಲಿ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತೆಯೂ ಆದ ಪುರಸಭೆ ಮಾಜಿ ಅಧ್ಯಕ್ಷೆ ಗುಜ್ಜಮ್ಮ ನಾಗರೆಡ್ಡಿ ಅವರು ವಾರ್ಡ್‌ 27ರಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಅವಕಾಶದಿಂದ ವಂಚಿತ ಅಗಡಿ: 2007 ಮತ್ತು 2014ರ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಈ ಬಾರಿ ಹ್ಯಾಟ್ರಿಕ್‌ ಸಾಧನೆಗೆ ಅಗತ್ಯ ಸಿದ್ಧತೆ ಮಾಡಿಕೊಂಡ ಜೆಡಿಎಸ್‌ ತಾಲೂಕು ಘಟಕದ ಹಾಲಿ ಅಧ್ಯಕ್ಷ ಮಹೇಶ ಎಂ.ಅಗಡಿ ಪಕ್ಷದ ವರಿಷ್ಠರ ಮನವಿಯ ಮೇರೆಗೆ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

Advertisement

ಹಳೆ ಹುಲಿಗಳು: ಈ ಬಾರಿ ಚುನಾವಣೆಯಲ್ಲಿ ಈ ಹಿಂದೆ ಎರಡು ಮೂರು ಬಾರಿ ಪುರಸಭೆಗೆ ಆಯ್ಕೆಯಾದ ಕೆಲವು ಹಳೆ ಅಭ್ಯರ್ಥಿಗಳಾದ ಅಹ್ಮದ್‌ ಮೈನೋದ್ದೀನ್‌, ವಿನಾಯಕ ಯಾದವ್‌, ಗುಜ್ಜಮ್ಮ ನಾಗರೆಡ್ಡಿ, ಪಾರ್ವತಿ ಶೇರಿಕಾರ, ಪಾರ್ವತಿಬಾಯಿ ಮಾಳಗೆ, ಅಬ್ದುಲ್ ರೆಹಮಾನ ಗೋರೆಮಿಯ್ನಾ, ಮುಕ್ರಂ ಈ ಬಾರಿ ಮತ್ತೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಟಿಕೆಟ್ ವಂಚಿತರು: ಕಳೆದ ಬಾರಿ ಪುರಸಭೆ ಸದಸ್ಯರಾಗಿ ಆಯ್ಕೆಗೊಂಡಿದ್ದ ಮಲ್ಲಿಕಾರ್ಜುನ ಸೀಗಿ, ಮಹೇಶ ಎಂ.ಅಗಡಿ, ತಿರುಮಲರೆಡ್ಡಿ ಮಂಡಾ, ರಾಧಾ ಮಾಳಪ್ಪ, ಸುರೇಶ ಗುರುದತ್ತ ಒಡೆಯರ್‌, ಸಿದ್ದು ಕೊಟ್ಟರಗಿ, ಕಲೀಂಸಾಬ್‌ ನೂರ, ನಯೂಮ್‌ ಬಾಗವಾನ್‌, ಎಂ.ಡಿ.ಇಸ್ಮಾಯಿಲ್, ರಾಮು ಚವಾಣ ಟಿಕೇಟ್ ವಂಚಿತರಾದ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next