Advertisement

ಮೈ ಮನ ತಂಪಾಗಿಸುವ ಕಿರು ಉದ್ಯಾನ!

01:40 PM May 23, 2019 | Naveen |

ಹುಮನಾಬಾದ: ಪಟ್ಟಣದ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಕಚೇರಿ ಪ್ರಾಂಗಣದಲ್ಲಿ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ನಿರ್ಮಿಸಿರುವ ಕಿರು ಉದ್ಯಾನ ಬಿಸಿಲ ಬೇಗೆಯಿಂದ ಬೇಸತ್ತ ಜನರಿಗೆ ಆಶ್ರಯ ತಾಣವಾಗಿದೆ.

Advertisement

ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಉಪವಿಭಾಗ ಕಚೇರಿಯಲ್ಲಿ ನೀರಿನ ಅಭಾವ ಉಂಟಾಗಿದ್ದರಿಂದ 2012ನೇ ಸಾಲಿನಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿದ್ದ ಸಿ.ಎಸ್‌. ಪಾಟೀಲ ಕೊಳವೆ ಬಾವಿ ತೋಡಿಸಿದ್ದರು. ನಿರೀಕ್ಷೆಗೂ ಮೀರಿ ನೀರು ಬಂತು. ಹಿಂದಿನ ದಿನಗಳಲ್ಲಿ ಹನಿ ನೀರಿಗೂ ಏನೆಲ್ಲ ತಾಪತ್ರಯ ಅನುಭವಿಸಿದ್ದ ಸಿಬ್ಬಂದಿಗೆ ಸಾಕಷ್ಟು ನೀರು ಇರುವುದು ಗಮನಿಸಿ, ಸಹಜವಾಗಿ ಅಭಿವೃದ್ಧಿಪರ ಆಲೋಚನೆಗಳು ಹೊಳೆಯತೊಡಗಿದವು. ಅಂದು ಸಿಬ್ಬಂದಿಗೆ ಹೊಳೆದ ಆಲೋಚನೆ ಪರಿಣಾಮ ಇಂದು ಅತ್ಯುತ್ತಮವಾದ ಉದ್ಯಾನ ನಿರ್ಮಾಣವಾಗಲು ಸಾಧ್ಯವಾಗಿದೆ.

150ಅಡಿ ಅಗಲ, 200ಅಡಿ ಉದ್ದದ ಪ್ರಾಂಗಣದಲ್ಲಿ ಸೌಂದರ್ಯ ವರ್ಧಕ, ಔಷಧಿ ಗುಣ ಹೊಂದಿರುವ ಮತ್ತು ಉತ್ತಮ ನೆರಳು ನೀಡುವ ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ಚಿಕ್ಕೂ, ಬಾದಾಮಿ, ಮಾವು, ನಿಂಬೆ, ಕರಿಬೇವು, ಪೇರಲ(ಜಾಪಳ), ನೆಲ್ಲಿಕಾಯಿ, ಹುಣಸೆ, ತೆಂಗು, ನೀಲಕಾಯಿ, ಹಣ್ಣು, ಸೌಂದರ್ಯ ವರ್ಧಕ, ಅಶೋಕ, ಬೇವಿನ ಮರ, ಗುಲಾಬಿ, ಉತ್ತಮ ನೆರಳು ನೀಡುವ ಗಿಡಗಳ ಜೊತೆಗೆ ನೆಲಹಾಸು (ಹುಲ್ಲು) ಸೇರಿದಂತೆ ಒಟ್ಟು 25ಕ್ಕೂ ಅಧಿಕ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ.

ಈ ಹಸಿರುಮಯ ಪರಿಸರದಲ್ಲಿ ವಿಶೇಷವಾಗಿ ಬೇಸಿಗೆಯ ರಣತಾಪದಿಂದ ತಪ್ಪಿಸಿಕೊಳ್ಳಲು ಮಧ್ಯಂತರ ಅವಧಿಯಲ್ಲಿ ಜನರು ಕೆಲಹೊತ್ತು ವಿಶ್ರಾಂತಿ ಪಡೆಯಲು ಆರಂಭಿಸಿದರು. ಅದನ್ನು ಕಂಡ ತಹಶೀಲ್ದಾರ್‌ ಮೊದಲಾದ ಕಚೇರಿಗಳಿಗೆ ವಿವಿಧ ಕೆಲಸಗಳಿಗಾಗಿ ಬರುವ ಜನ ಕೆಲಸ ಆಗುವ ವರೆಗೆ ಈ ಹಸಿರು ಹುಲ್ಲನ್ನೇ ತಮ್ಮ ಆಶ್ರಯತಾಣವಾಗಿಸಿಕೊಂಡರು. ಹೀಗೆ ಆಶ್ರಯ ಪಡೆಯಲು ಬರುವ ಯಾರೊಂದಿಗೂ ಬೇಸರ ಆಗುವಂತೆ ಮಾತನಾಡದೇ ಅತಿಥಿಗಳಂತೆ ಸ್ವಾಗತಿಸಲು ಆರಂಭಿಸಲಾಯಿತು. ನಂತರ ಅವರಿಗೆ ಹೇಳಿದ್ದಿಷ್ಟೇ, ಗಿಡಮರ ಹಾಳು ಮಾಡಬೇಡಿ, ಸ್ವಚ್ಛತೆ ಕಾಪಾಡಿ ಎಂದು.

ವನದ ಅನುಭವ: ಇಲ್ಲಿ ಬರುವ ಪ್ರತಿಯೊಬ್ಬ ವ್ಯಕ್ತಿಗೆ ಈ ಉದ್ಯಾನ ನೋಡಿದ ತಕ್ಷಣ ಹೇಳುವ ಮಾತು ಒಂದೆ, ನಾವು ಯಾವುದೊ ಬೃಹತ್‌ ವನದಲ್ಲಿ ಬಂದ ಅನುಭವ ಆಗುತ್ತಿದೆ ಎಂಬುದು. ಉದ್ಯಾನ ಇದ್ದೂ ಇಲ್ಲದಂತಾದ ಕಾರಣ ಹುಮನಾಬಾದ ಉದ್ಯಾನ ರಹಿತ ಪಟ್ಟಣವಾಗಿರುವ ಈ ಸಂದರ್ಭದಲ್ಲಿ ಪಟ್ಟಣ ಮತ್ತು ಗ್ರಾಮೀಣ ಭಾಗದಿಂದ ಪ್ರತಿನಿತ್ಯ ಬರುವ ಸಾವಿರಾರು ಜನರ ಪಾಲಿಗೆ ಸದ್ಯ ಇದುವೇ ಉದ್ಯಾನವಾಗಿ ಪರಿಣಮಿಸಿದೆ.

Advertisement

ಶ್ರಮ ಸ್ಮರಣೀಯ: ಉಪ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಸಿ.ಎಸ್‌. ಪಾಟೀಲ, ಮಲ್ಲಿಕಾರ್ಜುನ ಮೋಗಾ, ಬಸವರಾಜ ಬೈನೋರ್‌, ವಿಜಯರೆಡ್ಡಿ, ಶಿವಕುಮಾರ, ಲಕ್ಷ್ಮಣರಾವ್‌ ಕನಕಟಕರ್‌, ಪರಮೇಶ್ವರ ರೂಗನ್‌, ದಿ| ನಾಗನಥರಾವ್‌ ಕುಲಕರ್ಣಿ, ಧನರಾಜ ಪಾಟೀಲ, ಬಸವರಾಜ ರುದ್ರವಾಡಿ, ಪ್ರತಿನಿತ್ಯ ನೀರು-ನೈರ್ಮಲ್ಯಗಳ ಕುರಿತು ಅತ್ಯಂತ ಸೂಕ್ಷ್ಮವಾಗಿ ಮೇಲುಸ್ತುವಾರಿ ಮಾಡುವ ರೇವಣಸಿದ್ಧಯ್ಯಸ್ವಾಮಿ ಪತ್ರಿ ಮತ್ತಿತರರ ಶ್ರಮ ಅವಿಸ್ಮರಣೀಯ. ತಗುಲಿದ ಸಂಪೂರ್ಣ ವೆಚ್ಚವನ್ನು ಸಿಬ್ಬಂದಿಯೇ ಭರಿಸಿದ್ದು ವಿಶೇಷ.

ಕಚೇರಿಗೆ ನಿತ್ಯ ಬಂದು ತಾವು ಕುಳಿತುಕೊಳ್ಳುವ ಕುರ್ಚಿ ಸ್ವಚ್ಛಗೊಳಿಸಿ, ಪ್ರಾಮಾಣಿಕವಾಗಿ ಕೆಲಸ ಮಾಡುವುದೇ ದುರ್ಲಭವಾಗಿರುವ ಇಂದಿನ ದಿನಗಳಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಣೆ ಜೊತೆಗೆ ಕಚೇರಿ ಪ್ರಾಂಗಣವನ್ನು ತಮ್ಮ ಮನೆಗಿಂತಲೂ ಹೆಚ್ಚು ಕಾಳಜಿ ವಹಿಸಿ, ಕಾಪಾಡುತ್ತಿರುವುದು ನಿಜಕ್ಕೂ ಸ್ಮರಣೀಯ. ನಿತ್ಯ ಇಲ್ಲಿಗೆ ಬರುವ ಪ್ರತಿಯೊಬ್ಬರೂ ಇದಕ್ಕಾಗಿ ಶ್ರಮಿಸಿದವರಿಗೆ ಶುಭ ಕೋರದೇ ಇರುವುದಿಲ್ಲ.
•ಫಕೀರ ಅಹ್ಮದ್‌,
ನಿತ್ಯ ವಿಶ್ರಾಂತಿಗೆ ಬರುವ ನಿವೃತ್ತ ಶಿಕ್ಷಕ

ಸರ್ಕಾರ ನಮೆಲ್ಲರಿಗೂ ಕೈತುಂಬ ಸಂಬಳ ನೀಡುತ್ತದೆ. ಪಡೆಯುವ ಸಂಬಳಕ್ಕೆ ತಕ್ಕಂತೆ ಶ್ರದ್ಧೆಯಿಂದ ಕೆಲಸ ಮಾಡುವುದು ನಮ್ಮ ಕರ್ತವ್ಯ. ನಮ್ಮ ಹಿರಿಯರಾದ ಬಿ.ಎಸ್‌.ಪಾಟೀಲ ಅವರು ಮಾಡಿದ್ದನ್ನು ಕೇವಲ ನಿರ್ವಹಣೆ ಮಾಡುಕೊಂಡು ಬರುತ್ತಿದ್ದೇವೆ. ಎಷ್ಟು ವರ್ಷ ಬಾಳಿ ಬದುಕುತ್ತೇವೆ ಎಂಬುದಕ್ಕಿಂತ ಬದುಕಿರುವರೆಗೆ ಸಮಾಜಕ್ಕೆ ಏನು ಮಾಡುತ್ತೇವೆ ಎಂಬುದೇ ಮುಖ್ಯ. ಸಚಿವ ರಾಜಶೇಖರ ಪಾಟೀಲ ಅವರು ಯಾವತ್ತೂ ಹೇಳುವಂತೆ ಹುಟ್ಟು-ಸಾವಿನ ಮಧ್ಯ ಮಾಡಿ ಹೋಗಿದ್ದೇ ಶಾಶ್ವತ ಎಂದು ನಂಬಿದವವರು ನಾವು.
•ವಾಮನರಾವ್‌,
ಪಂಚಾಯತರಾಜ್‌ ಎಂಜಿನಿಯರಿಂಗ್‌ ಉಪವಿಭಾಗ ಎಇಇ

ಶಶಿಕಾಂತ ಕೆ.ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next