ಹುಮನಾಬಾದ್: ಕಾರ್ಮಿಕ ಶೋಷಣೆ ಶಿಕ್ಷಾರ್ಹ ಅಪರಾಧ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಂ.ಆರ್. ಗಗನ್ ಹೇಳಿದರು.
ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಸಾಹಿತಿ ಡ್ರಗ್ಸ್ ಮತ್ತು ಇಂಟರ್ ಮಿಡಿಯೆಟ್ಸ್ ಪ್ರೈವೇಟ್ ಲಿಮಿಟೆಡ್ ಸಂಯುಕ್ತವಾಗಿ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರಿಗೆ ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಹೆಲ್ಮೆಟ್, ಸಮವಸ್ತ್ರ ಮೊದಲಾದವುಗಳನ್ನು ಸಂಬಂಧಪಟ್ಟ ಕಾರ್ಖಾನೆ ಕಡ್ಡಾಯವಾಗಿ ವಿತರಿಸಬೇಕು. ಶುದ್ಧ ಕುಡಿಯುವ ನೀರು ಪೂರೈಕೆ, ಆರೋಗ್ಯ ತಪಾಸಣೆ ಸಂಬಂಧ ವೈದ್ಯಕೀಯ ಸೇವೆ, ನಿಯಮಾನುಸಾರ ರಜೆ, ವಿಶೇಷ ಭತ್ಯೆ ಜತೆಗೆ ನಿಯಮಾನುಸಾರ ಕಾರ್ಮಿಕರಿಗೆ ಸಂಬಳ ಪಾವತಿಸಲೇಬೇಕು. ನಿಯಮ ಉಲ್ಲಂಘಿಸಿದಲ್ಲಿ ಸಂಬಂಧಿಸಿದ ಕಾರ್ಖಾನೆ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಶೋಷಣೆ ಸಹಿಸದೇ ಯಾವುದೇ ರೀತಿಯಲ್ಲಿ ಸಮಸ್ಯೆ ಇದ್ದರೂ ಕಾನೂನು ನೆರವು ಪಡೆಯಲು ಅವಕಾಶವಿದೆ. ಕಾರ್ಮಿಕರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿ ಗೋರಖನಾಥ ದಾಡಗೆ, ಭಾರತದಲ್ಲಿ 1927ರ ಮೇ 1ರಂದು ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಸರ್ಕಾರ ಕಾರ್ಮಿಕರಿಗೆ ನೀಡಬೇಕಾದ ವಿವಿಧ ಸೌಲಭ್ಯ ಕುರಿತು ವಿವರಿಸಿದ ಅವರು, ಶೋಷಣೆ ಮಾಡುವವರಿಗಿಂತ ಸಹಿಸುವವರೇ ನೀಜವಾದ ಅಪರಾಧಿಗಳು. ಸಮಸ್ಯೆ ಬಂದರೆ ಸಹಿಸಿಕೊಳ್ಳದೇ ನ್ಯಾಯ ಪಡೆಯಲು ಕಾನೂನು ನೆರವು ಪಡೆಯುವ ವಿಷಯದಲ್ಲಿ ಹಿಂದೇಟು ಹಾಕಬಾರದು ಎಂದು ಹೇಳಿದರು.
ಕಾರ್ಮಿಕ ನಿರೀಕ್ಷಕಿ ಕವಿತಾ ಹೊನ್ನಳ್ಳಿ ಮಾತನಾಡಿ, ಕಾರ್ಮಿಕರ ಕಾರ್ಡ್ ಇಲ್ಲದವರಿಗೆ ಸರ್ಕಾರದ ಸೌಲಭ್ಯ ದಕ್ಕುವುದಿಲ್ಲ. ನಿಯಮಾನುಸಾರ ಪ್ರತಿಯೊಬ್ಬ ಕಟ್ಟಡ ಕಾರ್ಮಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಖಾನೆ ವ್ಯವಸ್ಥಾಪಕ ಕಾಮೇಶ್ವರ ಶರ್ಮಾ ಕೊರತೆ ಇರುವ ಸೌಲಭ್ಯಗಳನ್ನು ಸಾಧ್ಯವಾದಷ್ಟು ಶೀಘ್ರ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಶಂಭುಲಿಂಗ ಧುಮ್ಮನಸೂರೆ, ವಿಜಯಕುಮಾರ ನಾತೆ, ಭೀಮರಾವ್ ಓತಗಿ, ಚಂದ್ರಕಾಂತ, ಮಕ್ಕಳ ಸಹಾಯವಾಣಿ ಕೇಂದ್ರದ ಸಂಯೋಜಕ ರವಿ ಕೊಡ್ಡಿಕರ್ ಇದ್ದರು. ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಶರದಕುಮಾರ ನಾರಯಣಪೇಟಕರ್ ನಿರೂಪಿಸಿದರು.