Advertisement

ಮತದಾರರ ಋಣ ತೀರಿಸಲು ಯತ್ನಿಸುವೆ

10:19 AM Jul 01, 2019 | Naveen |

ಹುಮನಾಬಾದ: ಎರಡನೇ ಬಾರಿಗೆ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿದ ಕ್ಷೇತ್ರದ ಮಹಾಜನರ ಋಣ ತೀರಿಸಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಸಂಸದ ಭಗವಂತ ಖೂಬಾ ಹೇಳಿದರು.

Advertisement

ಪಟ್ಟಣದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ರವಿವಾರ ತಾಲೂಕು ಬಿಜೆಪಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿ ನೇತೃದ ಭ್ರಷ್ಟಾಚಾರಮುಕ್ತ ಆಡಳಿತ ಮೆಚ್ಚಿಕೊಂಡು ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಮಸ್ತ ಕಾರ್ಯಕರ್ತರು ಅವಿರತ ಶ್ರಮಿಸಿದ್ದರ ಪರಿಣಾಮ ಆಯ್ಕೆಯಾಗಲು ಸಾಧ್ಯವಾಯಿತು. ಆರೂವರೆ ದಶಕದ ಕಾಂಗ್ರೆಸ್‌ ಅಧಿಕಾರ ಅವಧಿಯಲ್ಲಿ ಕೈಗೊಳ್ಳಲು ಸಾಧ್ಯವಾಗದ ಅಭಿವೃದ್ಧಿ ಕಾರ್ಯವನ್ನು ನರೆಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇವಲ 5 ವರ್ಷಗಳಲ್ಲಿ ಮಾಡಿ ಅಸಾಮಾನ್ಯ ಸಾಧನೆ ಮಾಡಿದೆ ಎಂದು ಹೇಳಿದರು.

ವಿನೂತನ ಯೋಜನೆಗಳಿಂದ 6.5 ಲಕ್ಷ ಬಡ ಜನತೆ ಸೌಲಭ್ಯದ ಪ್ರಯೋಜನ ಪಡೆದಿದ್ದಾರೆ ಎಂದ ಅವರು, ತಮ್ಮ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ|ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಜಿಲ್ಲೆಯಲ್ಲಿ ಮೈತ್ರಿ ಸರ್ಕಾರದ ಮೂವರು ಸಚಿವರು, ಒಬ್ಬ ಅರಣ್ಯ ನಿಗಮ ಮಂಡಳಿ ಅಧ್ಯಕ್ಷರಿದ್ದರೂ ಲೋಕಸಭೆ ಚುನಾವಣೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಿನಾಯ ಸೋಲು ಅನುಭವಿಸಲು ಮೈತ್ರಿ ಸರ್ಕಾರದ ದುರಾಡಳಿತ ಕಾರಣ ಎಂದರು. ಪರಸ್ಪರ ಕಚ್ಚಾಟದಲ್ಲಿ ತೊಡಗಿರುವುದರಿಂದ ಮೈತ್ರಿ ಸರ್ಕಾರ ಇನ್ನೆರಡು ತಿಂಗಳಲ್ಲಿ ಪತನಗೊಂಡು ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಭವಿಷ್ಯ ನುಡಿದರು.

Advertisement

ಪಕ್ಷದ ಹಿರಿಯ ಮುಖಂಡ ಸುಭಾಷ ಕಲ್ಲೂರ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರಣರಾದ ಕಾರ್ಯಕರ್ತರನ್ನು ಸಂಸದರು ಯಾವುದೇ ಕಾರಣಕ್ಕೂ ಮರೆಯದೇ ಸೂಕ್ತ ಸ್ಥಾನಮಾನ ನೀಡಿ, ಗೌರವಿಸಬೇಕು. ಪಕ್ಷ ದ್ರೋಹಿಗಳನ್ನು ದೂರ ಇಡಬೇಕು ಎಂದು ಸಂಸದ ಭಗವಂತ ಖೂಬಾ ಅವರಿಗೆ ಸಲಹೆ ನೀಡಿದರು. ಖೂಬಾ ತಾಳ್ಮೆ ಶಕ್ತಿ ಕಳೆದ ಅವಧಿಗಿಂತ ಈ ಬಾರಿ ಹೆಚ್ಚಿದ್ದು ಆರೋಗ್ಯಪೂರ್ಣ ಬೆಳವಣಿಗೆ ಎಂದು ಶ್ಲಾಘಿಸಿದರು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮನಾಥ ಪಾಟೀಲ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷರನ್ನು ಸೋಲಿಸುವಲ್ಲಿ ಯಶಸ್ವಿಯಾದ ನಮ್ಮ ಕಾರ್ಯಕರ್ತರ ಕಾರ್ಯ ಪ್ರಶಂಸನಿಯ. ಜಿಲ್ಲೆಗೆ ಹೊಸದಾಗಿ ರೈಲ್ವೆ ಯೋಜನೆ ಅನುಷ್ಠಾನಗೊಳಿಸಿದ್ದು ಖೂಬಾ ಅವರ ಗೆಲುವಿಗೆ ಕಾರಣ ಎಂದರು.ನಿರುದ್ಯೋಗ ಸಮಸ್ಯೆ ಬಗೆಹರಿಸುವುದಕ್ಕಾಗಿ ಸಂಸದ ಖೂಬಾ ಅವರು ಜಿಲ್ಲೆಗೆ ಹೊಸ ಯೋಜನೆಯನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಿದ್ದಾರೆ ಎಂದರು.

ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವಾನಂದ ಮಂಠಾಳ್ಕರ್‌ ಮಾತನಾಡಿ, ರಾಜ್ಯ ಸರ್ಕಾರದ ಬೇಜವಾಬ್ದಾರಿ ಕಾರಣ ಕೇಂದ್ರದ ಅದೆಷ್ಟೊ ಯೋಜನೆಗಳು ಈಗಲೂ ರಾಜ್ಯದ ಜನತೆಗೆ ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಈ ಕ್ಷೇತ್ರದಲ್ಲೂ ಬಿಜೆಪಿ ಶಾಸಕರಿದ್ದರೆ ಅಭಿವೃದ್ಧಿ ಕಾರ್ಯ ತ್ವರಿತ ಗತಿಯಲ್ಲಿ ಸಾಗುತ್ತವೆ ಎಂದರು.

ರಾಜ್ಯ ಮುಖಂಡ ಪದ್ಮಾಕರ ಪಾಟೀಲ ಮಾತನಾಡಿದರು. ಪಕ್ಷದ ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಪಾಟೀಲ ಮಾಡ್ಗುಳ್‌ ಅರ್ಧಯಕ್ಷತೆ ವಹಿಸಿದ್ದರು. ಪಕ್ಷದ ರಾಜ್ಯ ಕಾರ್ಯಕಾರಿಣಿ ಬಸವರಾಜ ಆರ್ಯ, ವಿನಾಯಕ ಮಂಡಾ, ಬ್ಯಾಂಕ್‌ರೆಡ್ಡಿ, ಭೀಮಣ್ಣ ಕೊಳ್ಳೆ, ಮಲ್ಲಿಕಾರ್ಜುನ ಪ್ರಭಾ, ವಿಜಯಕುಮಾರ ದುರ್ಗದ, ರಮೇಶ ಕಲ್ಲೂರ, ಪ್ರಕಾಶ ತಾಳಮಡಗಿ, ಸೂರ್ಯಕಾಂತ ಮಠಪತಿ, ಗಜೇಂದ್ರ ಕನಕಟಕರ್‌, ಎಂ.ಡಿ.ಇಲಿಯಾಸ್‌, ಜಹಿರೋದದೀನ್‌, ಸತ್ತಾರಸಾಬ್‌, ರಮೇಶ ಹೋಗ್ತಾಪುರೆ ಇದ್ದರು. ಪಕ್ಷದ ತಾಲೂಖು ಪ್ರಧಾನ ಕಾರ್ಯದರ್ಶಿ ಪ್ರಭಾಕರ ನಾಗರಾಳೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next