Advertisement

ಪೊಲೀಸ್‌ ವಸತಿಗೃಹ ತ್ಯಾಜ್ಯದಿಂದ ರೋಗ ಭೀತಿ

03:29 PM Aug 02, 2019 | Naveen |

ಶಶಿಕಾಂತ ಕೆ.ಭಗೋಜಿ
ಹುಮನಾಬಾದ:
ಪಟ್ಟಣದ ಪೊಲೀಸ್‌ ವಸತಿಗೃಹದಿಂದ ಹೊರಬರುವ ತ್ಯಾಜ್ಯ ಹರಿಯಲು ಅಗತ್ಯ ವ್ಯವಸ್ಥೆ ಇಲ್ಲದ ಕಾರಣ ಪ್ರಾಂಗಣದಲ್ಲಿ ಸಂಗ್ರಹಗೊಳ್ಳುತ್ತಿದೆ. ಇದರಿಂದ ಇಲಾಖೆ ನೌಕರರ ಪರಿವಾರ ಮಾತ್ರವಲ್ಲದೇ ವಸತಿಗೃಹಕ್ಕೆ ಹೊಂದಿಕೊಂಡ ಬಸವನಗರ ಬಡಾವಣೆ ನಿವಾಸಿಗಳು ರೋಗಭೀತಿ ಎದುರಿಸುತ್ತಿದ್ದಾರೆ.

Advertisement

ನಾಲ್ಕೈದು ದಶಕಗಳ ಹಿಂದೆ ಪೊಲೀಸ್‌ ಠಾಣೆ ಅಸ್ತಿತ್ವಕ್ಕೆ ಬಂದ ಆರಂಭದಲ್ಲೇ ಅಧಿಕಾರಿ ಮತ್ತು ಸಿಬ್ಬಂದಿಗಾಗಿ ಕಲ್ಪಿಸಲಾದ ವಸತಿಗೃಹದಲ್ಲಿ ಸುಮಾರು 24 ಮನೆಗಳನ್ನು ನಿರ್ಮಿಸಲಾಗಿತ್ತು. ಒಂದೂವರೆ ದಶಕದಿಂದ ಶಿಥಿಲಗೊಂಡು ಮಳೆಗಾಲದಲ್ಲಿ ಸೋರುತ್ತಿದ್ದ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು, ಅಗತ್ಯ ಅನುದಾನ ಬಿಡುಗಡೆ ಮಾಡಿಸಿಕೊಂಡ ನಂತರ ಅಲ್ಲಿ ಈಗ ಅತ್ಯಾಧುನಿಕ ಸೌಲಭ್ಯ ಉಳ್ಳ 36 ಮನೆಗಳನ್ನು ನಿರ್ಮಿಸಲಾಗಿದೆ.

ಹರಿದು ಹೋಗದ ತ್ಯಾಜ್ಯ: ಉತ್ತಮವಾದ ಮನೆಗಳನ್ನೇನೋ ನಿರ್ಮಿಸಲಾಗಿದೆ. ಆದರೆ ಅಲ್ಲಿ ಉತ್ತಮ ರಸ್ತೆ ಸೇರಿದಂತೆ ಯಾವುದೇ ಮೂಲ ಸೌಲಭ್ಯಗಳಿಲ್ಲದ ಕಾರಣ ಇಲಾಖೆ ಸಿಬ್ಬಂದಿ ತೀವ್ರ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲಕ್ಕೂ ವಿಶೇಷ ಎಂದರೆ ಆ ಬೃಹತ್‌ ಕಟ್ಟಡಗಳಿಂದ ನಿತ್ಯ ಹರಿದು ಬರುವ ತ್ಯಾಜ್ಯ ಸರಾಗವಾಗಿ ಹರಿದು ಹೋಗಲು ಅಗತ್ಯ ಪೈಪ್‌ಲೈನ್‌ ಅಳವಡಿಸದಿರುವುದು. ಇದರಿಂದ ವಸತಿಗೃಹದ ಇಡೀ ತ್ಯಾಜ್ಯದಿಂದ ಇಲಾಖೆ ಸಿಬ್ಬಂದಿ ಹಾಗೂ ಇಡೀ ಪರಿವಾರದ ಸ‌ದಸ್ಯರು ರೋಗಭೀತಿ ಎದುರಿಸುತ್ತಿದ್ದಾರೆ.

ಪರಿಸರದಲ್ಲಿ ದುರ್ವಾಸನೆ: ವಸತಿಗೃಹದಿಂದ ಹೊರ ಬರುವ ತ್ಯಾಜ್ಯ ಬಸವನಗರ ಪ್ರವೇಶಿಸುವ ರಸ್ತೆ ಬದಿ ಸಂಗ್ರಹ ಆಗುತ್ತಿರುವುದರಿಂದ ಆ ಬಡಾವಣೆ ಮಾತ್ರವಲ್ಲದೇ ಆ ಮೂಲಕ ಹಾದು ಹೋಗುವ ಶಿವನಗರ, ಬಸವೇಶ್ವರ, ಕುಪ್ಗೀರ್‌ ನಗರ ಸೇರಿದಂತೆ ಮತ್ತಿತರ ಬಡಾವಣೆಗಳಿಂದ ನಿತ್ಯ ತೆರಳುವ ವಿದ್ಯಾರ್ಥಿಗಳು, ಮಹಿಳೆಯರು ದುರ್ವಾಸನೆ ಸಹಿಸಲಾಗದೇ ನಿತ್ಯ ಮೂಗು ಮುಚ್ಚಿಕೊಂಡೇ ಸಂಚರಿಸುವುದು ಅನಿವಾರ್ಯವಾಗಿದೆ.

ಈ ಕುರಿತು ಒಂದೂವರೆ ದಶಕದಿಂದ ಇಲಾಖೆಯ ಹಿರಿ-ಕಿರಿಯ ಅಧಿಕಾರಿಗಳಿಗೆಲ್ಲ ಈ ವರೆಗೆ ಸುಮಾರಿ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತೀ ಬಾರಿ ಕೇಳಿದಾಗಲೊಮ್ಮೆ ಪುರಸಭೆ ನೈರ್ಮಲ್ಯ ವಿಭಾಗದವರಿಗೆ ತಿಳಿಸಿದ್ದೇವೆ. ಶೀಘ್ರ ಸ್ವಚ್ಛಗೊಳಿಸುತ್ತಾರೆ ಎಂಬ ಸಬೂಬು ಹೇಳಿಕೊಂಡು ಬರುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಗಳಾದರೆ ಹೇಗೋ ತಿಳಿಸಿ ಹೇಳಬಹುದು. ಅವರು ಪೊಲೀಸರು ಅವರ ಮೇಲೆ ಹೆಚ್ಚು ಒತ್ತಡ ಹಾಕುವುದು ನಮ್ಮಂಥವರಿಂದ ಕಷ್ಟಸಾಧ್ಯ ಎಂಬುದನ್ನರಿತು ಈಗ ಮೌನಕ್ಕೆ ಶರಣಾಗಿದ್ದೇವೆ. ಈ ದುರ್ವಾಸನೆ ಮನೆ ಹತ್ತಿರ ಸುಳಿಯಬಾರದು ಎಂಬುದು ನಮ್ಮ ಆಶಯ ಎನ್ನುತ್ತಾರೆ ವಿವಿಧ ಬಡಾವಣೆ ನಿವಾಸಿಗಳು.

Advertisement

ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಪೊಲೀಸರ ಬಗ್ಗೆ ನಮಗೆ ಅಪಾರ ಗೌರವವಿದೆ. ಈ ಒಂದು ಸಮಸ್ಯೆಯನ್ನು ಅವರು ಗಂಭೀರವಾಗಿ ಪರಿಗಣಿಸಬೇಕು. ಪೊಲೀಸ್‌ ಅಧಿಕಾರಿಗಳ ಮಾತಿಗೆ ಪುರಸಭೆ ನೈರ್ಮಲ್ಯ ವಿಭಾಗದ ಸಿಬ್ಬಂದಿ ಈಗಲಾದರೂ ಎಚ್ಚೆತ್ತುಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ಬಡಾವಣೆ ನಿವಾಸಿಗಳ ಒತ್ತಾಯ.

ಹುಮನಾಬಾದ ಪೊಲೀಸ್‌ ವಸತಿಗೃಹದಿಂದ ಹರಿದು ಬರುತ್ತಿರುವ ತ್ಯಾಜ್ಯದಿಂದಾಗಿ ಬಸವೇಶ್ವರ ಬಡಾವಣೆ ನಿವಾಸಿಗಳು ಆ ಮೂಲಕ ಸಂಚರಿಸುವುದು ಕಷ್ಟಸಾಧ್ಯವಾಗಿದೆ. ತ್ಯಾಜ್ಯದಿಂದಾಗಿ ಮನೆಯಲ್ಲಿ ಸೊಳ್ಳೆಕಾಟ ಹೆಚ್ಚಿ, ಮಕ್ಕಳು ಟೈಫಾಯಿಡ್‌ನ‌ಂತ‌ಹ ಕಾಯಿಲೆಯಿಂದ ನರಳುತ್ತಿದ್ದಾರೆ. ಸಂಬಂಧಪಟ್ಟವರು ಸಮಸ್ಯೆಗೆ ಶೀಘ್ರದಲ್ಲಿ ಶಾಶ್ವತ ಪರಿಹಾರ ಕಲ್ಪಿಸಬೇಕು.
ಬಸವನಗರ ಬಡಾವಣೆ ನಿವಾಸಿಗಳು

ಬಡಾವಣೆಯಲ್ಲಿ ಸಮಸ್ಯೆ ಇದೆ ಎಂದು ಕೇಳಿದ್ದೆ. ಆದರೆ ಇಷ್ಟೊಂದು ಗಂಭೀರ ಇರುವುದು ಗಮನಕ್ಕೆ ಬಂದಿರಲಿಲ್ಲ. ನೈರ್ಮಲ್ಯ ವಿಭಾಗದ ಸಿಬ್ಬಂದಿ ಮೂಲಕ ಸಾಧ್ಯವಾದಷ್ಟು ಶೀಘ್ರದಲ್ಲಿ ಪೈಪ್‌ಲೈನ್‌ ಸೇರಿದಂತೆ ಏನೇ ಅಗತ್ಯವಿದ್ದರೂ ಅನುದಾನ ಬಿಡುಗಡೆ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುತ್ತೇವೆ.
ಶಂಭುಲಿಂಗ ದೇಸಾಯಿ,
ಪುರಸಭೆ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next