Advertisement

ಹಿಂದುಳಿದವರ ಪಾಲಿನ ದೇವರು: ಕಾಶೀನಾಥರೆಡ್ಡಿ

01:52 PM Aug 21, 2019 | Naveen |

ಹುಮನಾಬಾದ: ಡಾ|ಬಿ.ಆರ್‌.ಅಂಬೇಡ್ಕರ್‌ ಅವರು ದಲಿತರ ಪಾಲಿನ ದೇವರು ಹೇಗೂ ಹಾಗೆ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಹಿಂದುಳಿದ ವರ್ಗದವರ ಪಾಲಿನ ದೇವರು. ಹಿಂದುಳಿದ ವರ್ಗದವರು ಸರ್ಕಾರದಿಂದ ಇಂದು ಏನೆಲ್ಲ ಸೌಲಭ್ಯ ಪಡೆಯುತ್ತಿದ್ದರೆ ಅದಕ್ಕೆ ಅರಸು ಅವರ ಶ್ರಮವೇ ಕಾರ‌ಣ ಎಂದು ಹಿರಿಯ ಸಾಹಿತಿ ಎಚ್.ಕಾಶೀನಾಥರೆಡ್ಡಿ ಹೇಳಿದರು.

Advertisement

ಪಟ್ಟಣದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 104ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ದೇವರಾಜ ಅರಸು ಅವರ ದೂರದೃಷ್ಟಿಯ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು. ಗೇಣಿ ಶಾಸನ, ಹಾವನೂರು ಆಯೋಗದಂತಹ ಪ್ರಮುಖ ನಿರ್ಧಾರ ತೆಗೆದುಕೊಂಡ ಹಿನ್ನೆಲೆಯಲ್ಲಿ ಅದರ ಪ್ರತಿಫಲ ಇಂದಿನ ಪೀಳಿಗೆಗೆ ಲಭಿಸುತ್ತಿದೆ. ಗೇಣಿ ಹೋರಾಟದ ಅನುಷ್ಠಾನ ಆಗದಿದ್ದರೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆರೋಗ ರಚಿಸದಿದ್ದರೆ ಈವರೆಗೂ ಬಹುಸಂಖ್ಯಾತರಿಗೆ ನ್ಯಾಯ ಸಿಗುತ್ತಿರಲಿಲ್ಲ. ಆದರೆ ದೇವರಾಜ ಅರಸು ಅವರು ತಮ್ಮ ಕಟು ನಿರ್ಧಾರದಿಂದ ಮುಂದಿನ ಪೀಳಿಗೆಯ ಬದುಕಿನ ದೂರದೃಷ್ಟಿಯಿಂದ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟಿದ್ದರು ಎಂದು ಹೇಳಿದರು.

1976ರಲ್ಲಿ ಎಲೆಕ್ಟ್ರಾನಿಕ್‌ ಸಿಟಿ ನಿರ್ಮಾಣ ಮಾಡಲು ಅರಸು ಅವರೇ ಶಿಲಾನ್ಯಾಸ ನೆರವೇರಿಸಿದರು. ಮೈಸೂರು ರಾಜ್ಯ 1973ರ ನವೆಂಬರ್‌ 1ರಂದು ಕರ್ನಾಟಕ ಎಂದು ನಾಮಕರಣಗೊಂಡ ಅವಧಿಯಲ್ಲಿ ಅವರು ಮುಖ್ಯಮಂತ್ರಿಯಾಗಿದ್ದರು. ತಮ್ಮ ಅವಧಿಯಲ್ಲಿ ಭೂಸುಧಾರಣಾ ಕಾಯ್ದೆ ಜಾರಿ ಸೇರಿದಂತೆ ಅನೇಕ ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು ಎಂದು ವಿವರಿಸಿದರು.

ಹಿಂದುಳಿದ ವರ್ಗದಗಳ ವಸತಿ ನಿಲಯ ನಲಯ ಮುಖ್ಯಸ್ಥ ಸುರೇಶ ಪ್ರಾಸ್ತಾವಿಕ ಮಾತನಾಡಿ, ಡಿ.ದೇವರಾಜ ಅರಸು ಕೃಪಾಕಟಾಕ್ಷದಿಂದಾಗಿ ಇಂದು ರಾಜ್ಯದಲ್ಲಿ 1,360 ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ವಸತಿ ನಿಲಯದಲ್ಲಿ 70 ಸಾವಿರ ವಿದ್ಯಾರ್ಥಿಗಳು ಸೌಲಭ್ಯ ಪಡೆಯುತ್ತಿದ್ದಾರೆ. 1,040 ಮೆಟ್ರಿಕ್‌ ನಂತರದ 1,10,000 ವಿದ್ಯಾರ್ಥಿಗಳು ಸೌಲಭ್ಯ ಪಡೆಯುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಆಯೋಜನೆ, ವಿವಿಧ ಶೈಕ್ಷಣಿಕ ಹಂತಕ್ಕಾಗಿ ಶಿಷ್ಯ ವೇತನ, ಶುಲ್ಕ ವಿನಾಯಿತಿ ಸೇರಿದಂತೆ ಸರ್ಕಾರದಿಂದ ಅನೇಕ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ವಿವರಿಸಿದರು.

Advertisement

ತಹಶೀಲ್ದಾರ್‌ ನಾಗಯ್ಯಸ್ವಾಮಿ ಹಿರೇಮಠ ಮಾತನಾಡಿ, ನಾವೇನು ಉಳ್ಳ ಶ್ರೀಮಂತ ಮನೆತನದಲ್ಲಿ ಹುಟ್ಟಿ ಬೆಳೆದವರಲ್ಲ. ನಿಮ್ಮಂತೆ ಸರ್ಕಾರಿ ವಸತಿ ನಿಲಯದಲ್ಲಿ ಉಳಿದುಕೊಂಡೇ ಸತತ ಪರಿಶ್ರಮಪಟ್ಟು ಇಡೀ ಶಿಕ್ಷಣ ಪೂರೈಸಿದ್ದೇವೆ. ಶಿಕ್ಷಕನಾಗಿ ಸೇವೆ ಸಲ್ಲಿಸಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ತಹಶೀಲ್ದಾರ್‌ ಹುದ್ದೆ ಪಡೆಯಲು ಸಾಧ್ಯವಾಯಿತು ಎಂದರು. ವಿದ್ಯಾರ್ಥಿಗಳು ದೊಡ್ಡ ಕನಸು ಕಂಡು ನನಸಾಗಿಸಿಕೊಳ್ಳಲು ನಿರಂತರ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ ಮಾತನಾಡಿ, ಹಿಂದುಳಿದ ವರ್ಗದವರಿಗೆ ಡಿ.ದೇವರಾಜ ಅರಸು ಅವರು ಸಾಕಷ್ಟು ಸೌಲಭ್ಯ ಕಲ್ಪಿಸಿದ್ದಾರೆ. ಆದರೆ ವಿದ್ಯಾರ್ಥಿಗಳು ಅವುಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಉನ್ನತ ಹುದ್ದೆ, ಸ್ಥಾನಮಾನ ಗಿಟ್ಟಿಸಿಕೊಂಡರೆ ಮಾತ್ರ ಅರಸು ಅವರ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ ಎಂದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಡಾ|ಗೋವಿಂದ, ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಸುಗಂಧಾ ಅಣ್ಯಪ್ಪ, ಶಿವರಾಚಪ್ಪ ವಾಲಿ, ಸಾಮಾಜಿಕ ಕಾರ್ಯಕರ್ತ ಸುಭಾಷ ಆರ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಪ್ಸರಮಿಯ್ಯ ಇತರರು ಇದ್ದರು. ಗುರುಶಾಂತಯ್ಯಸ್ವಾಮಿ ಹಿರೇಮಠ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಬಿಸಿಎಂ ವಿಸ್ತೀರ್ಣಾಧಿಕಾರಿ ವಿಠ್ಠಲ್ ಸೇಡಂಕರ್‌ ಸ್ವಾಗತಿಸಿದರು. ಕುಲರ್ಣಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next