ಹುಮನಾಬಾದ: ಮಹಾತ್ಮ ಗೌತಮ ಬುದ್ಧರ ಸಿದ್ಧಾಂತ ಭಾರತ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಆದರ್ಶವಾಗಿದೆ ಎಂದು ಹಿರಿಯ ಲೇಖಕಿ ಡಾ|ಜಯದೇವಿ ಗಾಯಕವಾಡ ಹೇಳಿದರು.
ಪಟ್ಟಣದ ಡಾ|ಅಂಬೇಡ್ಕರ್ ವೃತ್ತದ ಬಳಿ ಮಹಾತ್ಮ ಗೌತಮ ಬುದ್ಧ ಜಯಂತಿ ಆಚರಣೆ ಸಮಿತಿ ಶನಿವಾರ ಏರ್ಪಡಿಸಿದ್ದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಪೀರಪ್ಪ ಸಜ್ಜನ್ ವಿರಚಿತ ‘ಸಮಾಜ ಮುಖೀ ಮಂಥನ’ ಕೃತಿ ಲೋಕಾರ್ಪಣಗೊಳಿಸಿ ಅವರು ಮಾತನಾಡಿದರು.
ಆಸೆಯೇ ದುಃಖಕ್ಕೆ ಮೂಲ ಎಂಬ ಅವರ ಅನುಭವದ ಮಾತು ಸಾರ್ವಕಾಲಿಕ. ಯಾವುದೇ ದೇಶ ಈ ತತ್ವವನ್ನು ಅಲ್ಲಗಳೆಯಲಾಗದು. ಸಾಮಾಜಿಕ ಅಂಧಶ್ರದ್ದೆ, ಪುರೋಹಿತಶಾಹಿತನ, ಮೂಢ ನಂಬಿಕೆ, ಜಾತೀಯತೆ, ಅರಾಜಕತೆ, ಅಧರ್ಮ, ಅಸಮಾನತೆ ಹೋಗಲಾಡಿಸಲು ಗೌತಮ ಬುದ್ಧ ನಡೆಸಿದ ಪ್ರಯತ್ನ ಅಸಾಮಾನ್ಯವಾದದ್ದು ಎಂದರು.
ಹಿರಿಯ ಸಾಹಿತಿ ಡಾ|ಗವಿಸಿದ್ದಪ್ಪ ಪಾಟೀಲ ಮತ್ತಿತರರು ಮಾತನಾಡಿದರು. ಬೌದ್ಧಧರ್ಮ ಪ್ರಚಾರಕ ಧರ್ಮರಾಯ್ ಘಾಂಗ್ರೆ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಉತ್ಸವ ಸಮಿತಿ ಅಧ್ಯಕ್ಷ ಪ್ರಾಧ್ಯಾಪಕ ಡಾ|ಜಯಕುಮಾರ ಸಿಂಧೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಸಮಿತಿ ಗೌರವಾಧ್ಯಕ್ಷ ವೀರಪ್ಪ ಧುಮ್ಮನಸೂರ, ಉಪಾಧ್ಯಕ್ಷ ಗಜೇಂದ್ರ ಎಂ.ಕನಕಟಕರ್, ಕೋಶಾಧ್ಯಕ್ಷ ಝರೆಪ್ಪ ಬೆಲ್ದಾಳೆ, ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಜಂಜೀರ, ಸಹ ಕಾರ್ಯದರ್ಶಿ ಗೌತಮ್ ಚವ್ಹಾಣ, ವೇದಿಕೆ ಸಮಿತಿ ಅಧ್ಯಕ್ಷ ಸುದರ್ಶನ ಮಾಳಗೆ, ಪ್ರಚಾರ ಸಮಿತಿ ಅಧ್ಯಕ್ಷ ಸುರೇಶ ಘಾಂಗ್ರೆ, ಮಾಣಿಕರಾವ್ ಬಿ.ಪವಾರ ಹಿರಿಯರಾದ ಕೆ.ಬಿ.ಹಾಲ್ಗೋರ್ಟಾ, ಶರಣಪ್ಪ ದಂಡೆ, ವಕೀಲ ಅಶೋಕ ಸಜ್ಜನ ಇದ್ದರು. ಇದೇ ಸಂದರ್ಭದಲ್ಲಿ ಬೀದರ್‌ನ ಶಶಿರಾವ್ ಮತ್ತು ಬಳಗದವರು ಬೌದ್ಧ ಭಜನೆ ನಡೆಸಿಕೊಟ್ಟರು. ಇದಕ್ಕೂ ಮುನ್ನ ಬೆಳಗ್ಗೆ ಡಾ|ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಪಂಚಶೀಲ ಧ್ವಜಾರೋಹಣ ನೆರವೇರಿಸಲಾಯಿತು