ಹುಮನಾಬಾದ: ಪರಿಶಿಷ್ಟ ಜಾತಿ-ಪಂಗಡ ಗುಂಪಿನ ಜನರನ್ನು ಕಡೆಗಣಿಸುವ ಏಕೈಕ ಉದ್ದೇಶದಿಂದ ಶ್ರೇಷ್ಠ ಕೀರ್ತನಕಾರ ಕನಕರು ಸೇರಿದಂತೆ ಇನ್ನುಳಿದ ಕೀರ್ತನಕಾರರ ಹಿಂದೆ ಮನುವಾದಿಗಳು ದಾಸ ಪದ ಬಳಸಿದ್ದಾರೆ. ಎಲ್ಲರೂ ಅದನ್ನು ತೀವ್ರವಾಗಿ ಖಂಡಿಸಿ, ಕನಕ ನಾಯಕ ಎಂದೇ ಹೇಳಬೇಕು ಎಂದು ಪ್ರೊ| ಅಂಬಿಕಾ ಭೋಜಗೊಂಡ ಹೇಳಿದರು.
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಮನ್ವಯ ಸಮಿತಿ ಹುಮನಾಬಾದ ಬಿಆರ್‌ಸಿ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕನಕ ನಾಯಕರ 53ನೇ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಟೀಕೆ ಸಲ್ಲದು: ಸಾಹಿತಿ ಮಾಣಿಕಪ್ಪ ಬಕ್ಕನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಶಿಷ್ಟ ಜಾತಿ-ಪಂಗಡ ಸಮುದಾಯದವರು ಇಲ್ಲದಿದ್ದರೆ ಸ್ವಸ್ಥ ಸಮಾಜ ನಿರ್ಮಾಣ ಕಷ್ಟಸಾಧ್ಯ. ಸಂವಿಧಾನ ಬದ್ಧವಾಗಿ ಸರ್ಕಾರ ಎಲ್ಲ ಸಮುದಾಯಗಳಿಗೂ ಮೀಸಲಾತಿ ಕಲ್ಪಿಸಿದೆ. ಆದರೆ ಏಳ್ಗೆ ಸಹಿಸದ ಮೇಲ್ವರ್ಗದವರು ಪ.ಜಾತಿ-ಪಂಗಡ ಸಮುದಾಯಕ್ಕೆ ನೀಡಿದ ಮೀಸಲಾತಿ ವಿಷಯ ಗುರಿಯಾಗಿರಿಸಿಕೊಂಡು ಟೀಕೆ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ಸಮಾಜ ಬಾಂಧವರು ಎಚ್ಚೆತ್ತುಕೊಳ್ಳಬೇಕು ಎಂದರು.
ಸಮಾಜೋದ್ಧಾರಕ: ಉಪನ್ಯಾಸಕ ತಿಪ್ಪಣ್ಣ ಕೆಂಪೆನೋರ್ ಮಾತನಾಡಿ, ಬಸವ-ಬುದ್ಧ-ಡಾ| ಅಂಬೇಡ್ಕರ್ ಸಮಾನತೆ ಸಮಾಜ ನಿರ್ಮಾಣ ಕನಸು ಕಂಡಿದ್ದರು. ಸಮಾಜೋದ್ಧಾರಕ್ಕಾಗಿ ಕೀರ್ತನಕಾರರು ಸ್ವತಃ ವಿಷ ಉಂಡಿದ್ದರು ಎಂದರು.
ಆನಂದ ಶಿವನಾಯಕ ಮಾತನಾಡಿ, ತಿರುಚಿರುವ ಕೀರ್ತನಕಾರರ ಮೂಲ ಇತಿಹಾಸ ಪುನಃಶ್ಚೇತನಕ್ಕೆ ನಮ್ಮವರು ಕಂಕಣಬದ್ಧರಾಗಬೇಕು ಎಂದರು. ಜಗದೀಶ ಸೇಡೋಳ್ಕರ್ ಸೇರಿದಂತೆ ಇತರರು ಮಾತನಾಡಿದರು. ಡಿ.8ಕ್ಕೆ ಸಂವಿಧಾನ ಸಮರ್ಪಣಾ ದಿನ: ಸಮನ್ವಯ ಸಮಿತಿ ಅಧ್ಯಕ್ಷ ವಿಜಯಕುಮಾರ ಚಾಂಗ್ಲೇರಿ ಅಧ್ಯಕ್ಷತೆವಹಿಸಿ ಮಾತನಾಡಿ, ತಾಲೂಕಿನಲ್ಲಿ ಈ ಗುಂಪಿಗೆ ಸೇರಿದ 400 ಜನರ ಪೈಕಿ ಕೇವಲ 40 ಜನ ಮಾತ್ರ ಬಂದಿರುವುದು ತರವಲ್ಲ. ಸಮಿತಿ ವತಿಯಿಂದ ಡಿ.8ಕ್ಕೆ ಸಂವಿಧಾನ ಸಮರ್ಪಣಾ ದಿನ ಆಚರಿಸಲು ನಿರ್ಧರಿಸಲಾಗಿದ್ದು, ಆ ದಿನ ಕನಿಷ್ಠ 300 ಜನರಾದರೂ ಭಾಗವಹಿಸಬೇಕು ಎಂದರು. ಶಿವರಾಜ ಮೇತ್ರೆ, ಶಶಿಕಾಂತ ಘಾವಲ್ಕರ್, ರಮೇಶ ಕಲ್ಯಾಣಿ, ಗೌತಮ್ ಕೀರ್ತಿಕರ್, ಮಾರ್ತಾಂಡ ಕೆಳಗೇರಿ, ಮಾಣಿಕಪ್ಪ ಗೋಖಲೆ, ಮೋಜಸ್, ಲೋಕೇಶ, ಝೆರೆಪ್ಪ, ಕಂಟೆಪ್ಪ, ರಮೇಶ ಬಾಗವಾಲೆ, ಗಣಪತಿ ಇತರರು ಇದ್ದರು. ಶರದ್‌ಕುಮಾರ ಸ್ವಾಗತಿಸಿದರು. ಅರವಿಂದ ಹುಡಗೀಕರ್ ವಂದಿಸಿದರು.