ಹುಮನಾಬಾದ: ಪಾಲಕರು ತಮ್ಮ ಮಕ್ಕಳನ್ನು ಕೇವಲ ಡಾಕ್ಟರ್, ಎಂಜಿನಿಯರ್‌ಗಳಾಗಿಸಲು ಪ್ರೋತ್ಸಾಹಿಸದೇ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ಕೇಂದ್ರ ಸಂಸ್ಕೃತಿ ಇಲಾಖೆ ಸಲಹಾತಜ್ಞ ಡಾ| ಜಿ.ಕೆ.ಹರಿತ್ ಸಲಹೆ ನೀಡಿದರು.
ಪಟ್ಟಣದ ಶಿಕ್ಷಕರ ಬಡಾವಣೆಯ ಅಶೋಕ ಸಭಾ ಮಂಟಪದಲ್ಲಿ ಸೋಮವಾರ ರಾತ್ರಿ ನಡೆದ “ಶ್ರೀ ಕೃಷ್ಣವಂದನ’ ನೃತ್ಯ ರೂಪಕ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ವಿದೇಶಿ ಸಂಸ್ಕೃತಿ ಪ್ರಭಾವಕ್ಕೊಳಗಾಗಿ ದೇಸಿ ಸಂಸ್ಕೃತಿ ಮರೆಯುತ್ತಿರುವ ಈ ದೇಶದ ಯುವಜನಾಂಗವನ್ನು ಮತ್ತೆ ದೇಸಿ ಕಲೆ-ಸಂಸ್ಕೃತಿಯತ್ತ ಕರೆ ತರುವುದು ಹಿಂದೆಂದಿಗಿಂತ ಈಗ ಅವಶ್ಯವಾಗಿದೆ ಎಂದರು.
ಕೇಂದ್ರದ ಸಂಸ್ಕೃತಿ ಇಲಾಖೆ ದೇಸಿ ಕಲೆಗಳ ಪೋಷಣೆಗಾಗಿ ನಗರ ಜಾಗೂ ಗ್ರಾಮೀಣ ಪ್ರದೇಶಗಳಿಗಾಗಿ ನೂರಾರು ಯೋಜನೆ ಜಾರಿಗೆ ತಂದಿದೆ. ಆದರೆ ಕಲಾವಿದರ ಕೊರತೆ ಕಾರಣ ಕೇಂದ್ರ ಬಹುಪಾಲು ಸ್ಪರ್ಧೆಗಳಲ್ಲಿ ತಮಿಳುನಾಡು, ತೆಲಂಗಾಣ ರಾಜ್ಯಗಳ ಕಲಾವಿದರು ತಪ್ಪದೇ ಭಾಗವಹಿಸಿ ಲಕ್ಷಾಂತರ ಮೊತ್ತದ ಬಹುಮಾನ, ಪ್ರಮಾಣಪತ್ರ ಗಿಟ್ಟಿಸಿಕೊಂಡು ಹೋಗುತ್ತಿದ್ದಾರೆ ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ನೃತ್ಯರೂಪಕ ಉದ್ಘಾಟಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಂಗೀತ, ನೃತ್ಯ ಇತ್ಯಾದಿ ಕಲೆಗಳ ಮಹತ್ವ ಬಗ್ಗೆ ನಿರೀಕ್ಷಿತ ಪ್ರಮಾಣದಲ್ಲಿ ಅರಿವಿಲ್ಲದ ಕಾರಣ ಪಾಲಕರು ಇವುಗಳ ಬಗ್ಗೆ ಆಸಕ್ತಿ ತೋರಿಸದೇ ಕೇವಲ ಓದಿಗೆ ಒತ್ತು ನೀಡುತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾ ಪ್ರತಿಷ್ಠಾನ ಈ ಭಾಗದಲ್ಲಿ ಮೇಲಿಂದ ಮೇಲೆ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜೊತೆ ಈ ಭಾಗದಲ್ಲಿ ತರಬೇತಿ ಶಾಲೆ ಆರಂಭಿಸಿದಲ್ಲಿ ಖಂಡಿತ ನೂರಾರು ಪ್ರತಿಭೆ ಬೆಳಕಿಗೆ ಬರುತ್ತವೆ ಎಂದರು.
ಪತ್ರಕರ್ತ ದುರ್ಯೋಧನ್ ಹೂಗಾರ, ರಮೇಶ ರಾಜೋಳೆ, ಇಸಿಒ ಮಾಧವ, ಪತ್ರಕರ್ತ ಸಂಜಯ್ ದಂತಕಾಳೆ, ಪ್ರಾಧ್ಯಾಪಕ ಬಿ.ಶಶಿಧರ ಮಾತನಾಡಿದರು. ಭಾರತೀಯ ಮಾತಂಗ ಸಾಮಾಜಿಕ ಸಾಂಸ್ಕೃತಿಕ ಅಕಡೆಮಿ ಅಧ್ಯಕ್ಷ ಅನೀಲ ಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೋವಿಂದ ನಿನ್ನ ನಾಮವೇ ಚಂದ, ಬಣ್ಣಿಸಿ ಗೋಪಿ, ಎಲ್ಲಿ ಬೆಣ್ಣೆಯ ಬಚ್ಚಿಡಲಿ ಮೊದಲಾದ ಕೃತಿಗಳಿಗೆ ಡಾ| ಜಿ.ಕೆ.ಅಶ್ವತ ಹರಿತ್, ಸಂತೋಷ ಪ್ರಸಾದ್, ಅಶ್ವಿನಿಕುಮಾರಿ ಎನ್. ಗಗನ್, ಜೆ.ಪ್ರಿಯಾಂಕಾ, ಎಚ್.ಕೆ.ರಕ್ಷಿತಾ ತಂಡ ನೃತ್ಯರೂಪಕ ಪ್ರದರ್ಶಿಸಿದರು. ಪುರಸಭೆ ಮಾಜಿ ಅಧ್ಯಕ್ಷೆ ಶಾಂತಾಬಾಯಿ ಮರಗೇಂದ್ರ ಕಟ್ಟಿ ಇದ್ದರು. ಸಂಸ್ಥೆ ಕಾರ್ಯದರ್ಶಿ ವೆಂಕಟೇಶ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪಟ್ಟಣದ ಭಾರತೀಯ ಮಾತಂಗ ಸಾಮಾಜಿಕ ಸಾಂಸ್ಕೃತಿಕ ಅಕಾಡೆಮಿ, ವಿದ್ಯಾ ಪ್ರತಿಷ್ಠಾನ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.