ಹುಮನಾಬಾದ: ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಂದಿಲ್ಲ ಒಂದು ವಿಶಿಷ್ಟ ಕಲೆ ಇದ್ದೇ ಇರುತ್ತದೆ. ವಿದ್ಯಾರ್ಥಿಗಳಿಗೆ ಇದನ್ನೇ ಮಾಡಿ, ಹೀಗೇ ಮಾಡಿ ಎಂದು ಒತ್ತಡ ಹೇರದೇ ಅವರ ಆಸಕ್ತಿಗನುಗುಣವಾಗಿ ಕೈಗೊಳ್ಳುವ ಪ್ರಯೋಗಕ್ಕೆ ಅಗತ್ಯ ಪ್ರೋತ್ಸಾಹ ನೀಡಿ, ಅವರ ಸರ್ವಾಂಗೀಣ ಪ್ರಗತಿಗೆ ಮಾರ್ಗದರ್ಶಕರಾಗಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಸಲಹೆ ನೀಡಿದರು.
ಹಳ್ಳಿಖೇಡ(ಕೆ) ಹತ್ತಿರದ ಮೊರಾರ್ಜಿ ದೇಸಾಯಿ ವಸತಿ ಸಹಿತ ಶಾಲೆಯಲ್ಲಿ ಶನಿವಾರ ಅಟಲ್ ಟೆಂಕರಿಂಗ್ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗಾಗಿ ಸರ್ಕಾರ ಲಕ್ಷಾಂತರ ರೂ. ಅನುದಾನ ನೀಡುತ್ತದೆ. ಪ್ರಯೋಗಾಲಯಕ್ಕೆ ನೀಡಿದ ಎಲ್ಲ ಉಪಕರಣಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿ, ಸರ್ಕಾರದ ಯೋಜನೆ ಸಾರ್ಥಕಗೊಳಿಸಬೇಕು. ಈ ಯೋಜನೆಯ ಲಾಭ ಪಡೆದುಕೊಳ್ಳಲು ದೇಶದ 16 ಸಾವಿರ ಶಾಲೆಗಳು ಅರ್ಜಿ ಹಾಕಿದ್ದವು. ಆ ಪೈಕಿ ಕೇವಲ 700 ಉತ್ತಮ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದೆ. ಅವುಗಳ ಸಾಲಲ್ಲಿ ಮೊರಾರ್ಜಿ ದೇಸಾಯತಿ ವಸತಿ ಶಾಲೆ ಸಹ ಸೇರಿರುವುದು ಹೆಮ್ಮೆಯ ವಿಷಯ ಎಂದರು.
ಕೇಂದ್ರ ಸರ್ಕಾರ ಒಟ್ಟು ರೂ.20 ಲಕ್ಷದ ಸಾಧನಗಳನ್ನು ನೀಡಿದೆ. ಇವುಗಳ ನಿರ್ವಹಣೆಗಾಗಿ ಪ್ರತೀ ವರ್ಷಕ್ಕೆ ರೂ.2ಲಕ್ಷದಂತೆ ಐದು ವರ್ಷಕ್ಕೆ ಒಟ್ಟು ರೂ.10 ಲಕ್ಷ ಅನುದಾನ ನೀಡುತ್ತದೆ. ಈ ಎಲ್ಲವನ್ನು ಸಮರ್ಪಕ ಬಳಸಿಕೊಳ್ಳುವ ಮೂಲಕ ಶಾಲೆಯ ಸಮಸ್ತ ಸಿಬ್ಬಂದಿ ಈ ವಸತಿ ಸಹಿತ ಶಾಲೆಯ ಕೀರ್ತಿ ಹಬ್ಬುವಂತೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ನಾಗಯ್ಯಸ್ವಾಮಿ ಹಿರೇಮಠ, ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವೇಂದ್ರಪ್ಪ ಪೋಲಾ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಸಕ ರಾಜಶೇಖರ ಪಾಟೀಲ ಅವರು ಸರ್ಕಾರದಿಂದ ಬಿಡುಗಡೆಯಾದ ಸಾಧನಗಳನ್ನು ಪರಿಶೀಲಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಷ ವಾರದ್, ಗ್ರಾಮದ ಮುಖಂಡ ಅಣ್ಯಪ್ಪ ರಟಕಲ್, ಸುಭಾಶ ಚಿಲಶೆಟ್ಟಿ, ರಾಜಕುಮಾರ ರಾಜೋಳೆ, ಬಿಇಒ ಶಿವರಾಚಪ್ಪ ವಾಲಿ, ವಿಠuಲ್ ಸೇಡಂಕರ್, ಶಿವಕುಮಾರ ಪಾಟೀಲ, ಸಾಗರ್ ಭೂರೆ, ಶಂಕರ ಕೊರವಿ, ಗೋವಿಂದರಾವ್ ದೊಡ್ಮನಿ, ರೇವಣಸಿದ್ದಪ್ಪ ಮೇಲಿನಕೇರಿ ಇದ್ದರು.
ಟೆಂಕರಿಂಗ್ ನೋಡಲ್ ಅಧಿಕಾರಿ ಎಸ್.ಕೆ.ಮಹಾದೇವಪ್ಪ ಸ್ವಾಗತಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಮೇಶ ದೇವಮಾನೆ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಮಲ್ಲಿಕಾರ್ಜುನ ಬಿರಾದಾರ ವಂದಿಸಿದರು.