ಹುಮನಾಬಾದ: ಉಪನೋಂದಣಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗಿದ ಸಿಬ್ಬಂದಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ತಾಲೂಕು ವಕೀಲರ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ನ್ಯಾಯಾಲಯ ಆವರಣದಿಂದ ತಹಶೀಲ್ದಾರ್ ಕಚೇರಿವರೆಗೆ ಬೈಕ್ ರಾಲಿ ನಡೆಸಿದ ವಕೀಲರು, ತಹಶೀಲ್ದಾರ್ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲರು, ಸ್ಥಳೀಯ ಉಪ ನೋಂದಣೆ ಇಲಾಖೆಯಲ್ಲಿ ಎಸ್.ಡಿ.ಎ ಮಹಮದ್ ಜಹೋರ್ ಅಹ್ಮದ್ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಪ್ರತಿಯೊಂದಕ್ಕೂ ಹಣ ಬೇಡಿಕೆ ಇಡುತ್ತಿದ್ದಾರೆ. ಸರ್ಕಾರಕ್ಕೆ ಸೇರಬೇಕಾದ ತೆರಿಗೆ ಹಣ ಅವರು ಸ್ವಂತಕ್ಕೆ ಮಾಡಿಕೊಳ್ಳುತ್ತಿದ್ದಾರೆ. ಉಪ ನೋಂದಣೆ ಇಲಾಖೆಗೆ ವಕೀಲರು ಬರದಂತೆ ತಾಕಿತ್ತು ಮಾಡುತ್ತಿದ್ದು, ಯಾವ ನಿಯಮಗಳ ಅಡಿಯಲ್ಲಿ ಸಾರ್ವಜನಿಕ ಕಚೇರಿಗೆ ಬರಬಾರದು ಎಂದು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮದುವೆ ನೋಂದಣಿಗೂ ಲಂಚ ಕೇಳುತ್ತಿದ್ದಾರೆ. ದಿನಕ್ಕೆ ಸರಾಸರಿ ಎರಡು ಲಕ್ಷ ಹಣ ಲಂಚಪಡೆದು ಸಂಜೆಗೆ ಪರಸ್ಪರ ಹಂಚಿಕೊಳ್ಳುತ್ತಾರೆ ಎಂದು ವಕೀಲರು ಗಂಭೀರವಾಗಿ ಆರೋಪಿಸಿದರು. ಕೂಡಲೇ ಭ್ರಷ್ಟ ಸಿಬ್ಬಂದಿಗಳನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ ಅವರು, ಮುಂದಿನ 8 ದಿನಗಳಲ್ಲಿ ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ ಮತ್ತೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಇದನ್ನೂ ಓದಿ:ಲೋಕಸಭೆ ಬಳಿಕ ರಾಜ್ಯಸಭೆಯಲ್ಲೂ ಕೃಷಿ ಕಾಯ್ದೆ ರದ್ದು ಮಸೂದೆ ಪಾಸ್; ಹೋರಾಟ ಮುಂದುವರಿಕೆ
ವಕೀಲ ಸಂಘದ ಅಧ್ಯಕ್ಷರಾದ ಉದಯಕುಮಾರ ಶಿಲವಂತ, ಉಪಾಧ್ಯಕ್ಷೆ ಪುಷ್ಪಾ ಚಾಂಗಲೇರಿ, ಕಾರ್ಯದರ್ಶಿ ಹರೀಶ ಅಗಡಿ, ಮಂಜುನಾಥ ರೆಡ್ಡಿ, ಎ.ಜಿ ಭಾಲ್ಕಿಕರ್, ವಿ.ಕೆ ಪಾಟೀಲ, ಸತೀಶ್ ರಾಂಪೂರೆ, ಡಿ.ಮಹಾದೇವಪ್ಪ, ಕೆ.ವೀರಶೆಟ್ಟಿ, ಪ್ರಭಾಕರ ನಾಗರಾಳೆ, ಅಶೋಕ ವರ್ಮಾ, ಭೀಮರಾವ, ದಯಾನಂದ ಪಾರಶೆಟ್ಟಿ, ವಿಜಯಕುಮಾರ ಜೊತಗೊಂಡ, ಎಂಡಿ ಇಸ್ಮಾಯಿಲ್, ಕರಬಸಪ್ಪಾ, ರವಿಕಾಂತ ಹೂಗಾರ, ಶಂಭೂಲಿಂಗ ನಂದಗಾಂವ, ಸಂದೀಪ ಜಾಜಿ ಸೇರಿದಂತೆ ಅನೇಕ ವಕೀಲರು ಇದ್ದರು.