Advertisement

ವಿದೇಶಕ್ಕೆ ಹೋಗುವುದು ಸುಲಭ, ಮರಳುವುದೇ ಕಷ್ಟ

11:58 AM Oct 15, 2018 | Team Udayavani |

ಉಡುಪಿ: ವಿದೇಶಗಳಿಗೆ ಕಾರ್ಮಿಕರನ್ನು ಕಳುಹಿಸಿಕೊಡುವ ಏಜೆನ್ಸಿಗಳು ಸರಕಾರದ “ಮದತ್‌’ ವೆಬ್‌ಸೈಟ್‌ನಲ್ಲಿ ನೋಂದಾಯಿಸಿರಬೇಕು. ದ. ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಯಾವುದೇ ನೋಂದಾಯಿತ ಏಜೆಂಟರಿಲ್ಲ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ ಶಾನುಭಾಗ್‌ ತಿಳಿಸಿದರು.

Advertisement

ರವಿವಾರ ನಗರದ ಡಾನ್‌ ಬಾಸ್ಕೋ ಸಭಾಂಗಣದಲ್ಲಿ ಕೆಥೋಲಿಕ್‌ ಸಭಾ ನಡೆಸಿದ ವಿದೇಶಗಳಿಗೆ ತೆರಳುವ ಜನರು ಅಲ್ಲಿ ಎದುರಿಸುವ ಸಮಸ್ಯೆಗಳು ಮತ್ತು ಪರಿಹಾರ – ನೆರವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಾನವ ಕಳ್ಳಸಾಗಣೆ
ಮುಂಬಯಿಯಲ್ಲಿ ಶಾಬಾಝ್ ಖಾನ್‌ ಎಂಬ ಮಾನವ ಕಳ್ಳಸಾಗಾಣೆದಾರ ಇದ್ದಾನೆ. ಆತ ಈ ಭಾಗದಲ್ಲಿ ಕೆಲವು ಏಜೆಂಟರನ್ನು ಮಾಡಿ ಒಬ್ಬನಿಗೆ ಇಷ್ಟು ಎಂದು ಕಮಿಶನ್‌ ನೀಡುತ್ತಾನೆ. ಎಷ್ಟೋ ಜನರಿಗೆ ಆತ ಮಾನವ ಕಳ್ಳ ಸಾಗಣೆದಾರ ಎಂಬುದು ತಿಳಿದಿಲ್ಲ. ಜನರನ್ನು ರೈಲಿನಲ್ಲಿ ಮುಂಬಯಿಗೆ ಕಳುಹಿಸಿ ಶಾಬಾಝ್ ಖಾನ್‌ನ ಹಾಸ್ಟೆಲ್‌ನಲ್ಲಿ ಉಳಿಸಿಕೊಳ್ಳುತ್ತಾರೆ. ಅಲ್ಲಿಂದ ನೇಪಾಲದ ಮೂಲಕ ದುಬಾೖಗೆ ಕಳುಹಿಸಲಾಗುತ್ತದೆ. ಅಲ್ಲಿ ಏಕಮುಖ ಪಾರದರ್ಶಕ ಗಾಜಿನ ಹಾಸ್ಟೆಲ್‌ ಇದೆ. ಅಲ್ಲಿ ಹೊರಗಿರುವವರಿಗೆ ಒಳಗಿನದು ಕಾಣುತ್ತದೆ, ಆದರೆ ಒಳಗಿನವರಿಗೆ ಹೊರಗಿನದು ಕಾಣುವುದಿಲ್ಲ. ಅಲ್ಲಿ ಕೆಲಸಕ್ಕಾಗಿ ಬಂದವರನ್ನು ಏಲಂ ಮಾಡಲಾಗುತ್ತದೆ. 5ರಿಂದ 10 ಲಕ್ಷ ರೂ.ವರೆಗೆ ದರ ಇರುತ್ತದೆ. ವೀಸಾ ಅವಧಿಯವರೆಗೆ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಬಳಿಕ ಅವರ ಪರಿಸ್ಥಿತಿ ಚಿಂತಾಜನಕವಾಗುತ್ತದೆ ಎಂದು ಶಾನುಭಾಗ್‌ ತಿಳಿಸಿದರು.

ಶಿರ್ವದ ನರ್ಸ್‌ ಹೆಝಲ್‌ ಪ್ರಕರಣದಲ್ಲಿ ಕೂಡ ಇದೇ ರೀತಿಯದ್ದು, ಕಳ್ಳಹಾದಿಯಲ್ಲಿ ತೆರಳಿದ ಹಿನ್ನೆಲೆಯಲ್ಲಿ ಸರಕಾರ ಕೂಡ ಆಕೆಯ ಸಹಾಯಕ್ಕೆ ಬರಲಾಗಲಿಲ್ಲ. ಬಳಿಕ ನಾವು ಆಕೆಯನ್ನು ಖರೀದಿಸಿದ ವ್ಯಕ್ತಿಗೆ 5 ಲಕ್ಷ ರೂ. ಕೊಟ್ಟು ಆಕೆಯ ಶವ ಬಿಡಿಸಿಕೊಂಡು ಬರಬೇಕಾಯಿತು. ನೋಂದಾಯಿತ ಏಜೆಂಟ್‌ಗಳ ಮೂಲಕವೇ ವಿದೇಶಕ್ಕೆ ತೆರಳಿ ಎಂದು ಸರಕಾರ ಹಲವು ಬಾರಿ ಹೇಳುತ್ತದೆ. ಆದರೆ ಜನರಿಗೆ ಈ ಕುರಿತು ಮಾಹಿತಿ ಇಲ್ಲ. ಇಂತಹ ವಿಚಾರಗಳಲ್ಲಿ ಸಮುದಾಯಗಳು ಜಾಗೃತಿ ಮೂಡಿಸಬೇಕು ಎಂದರು.

ಕೆಥೊಲಿಕ್‌ ಸಭಾ ಕಾರ್ಯದರ್ಶಿ ಮ್ಯಾಕ್ಸಿನ್‌ ಡಿ’ಸೋಜಾ, ನಿಯೋಜಿತ ಅಧ್ಯಕ್ಷೆ ಮೇರಿ ಡಿ’ಸೋಜಾ, ಮಾಜಿ ಅಧ್ಯಕ್ಷ ವಲೇರಿಯನ್‌ ಫೆರ್ನಾಂಡಿಸ್‌, ಖಜಾಂಚಿ ಜೆರಾಲ್ಡ್‌ ರೋಡ್ರಿಗಸ್‌ ಉಪಸ್ಥಿತರಿದ್ದರು. ಅಧ್ಯಕ್ಷ ಆಲ್ವಿನ್‌ ಕ್ವಾಡ್ರಸ್‌ ಸ್ವಾಗತಿಸಿ, ಫೈವನ್‌ ಡಿ’ಸೋಜಾ ನಿರೂಪಿಸಿದರು. ಆಲನ್‌ ಡಿ’ಕಾಸ್ಟಾ ಅವರು ಶಾನುಭಾಗ್‌ ಅವರನ್ನು ಪರಿಚಯಿಸಿದರು.

Advertisement

ಪೊಲೀಸರೂ ಶಾಮೀಲು
ಶಾಬಾಝ್ ಖಾನ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ಗೆ ಪತ್ರ ಬರೆದಾಗ ಅವರು ಮುಂಬಯಿ ಐಜಿಪಿಗೆ ಸೂಚನೆ ನೀಡಿದ್ದರು. ಅದರ ಪ್ರತಿಯನ್ನು ನನಗೆ ಕಳುಹಿಸಿದ್ದರು. ಆದರೆ ಯಾವುದೇ ಕ್ರಮ ಜರಗದಿರುವ ಹಿನ್ನೆಲೆಯಲ್ಲಿ ನಾನು ಸಚಿವರ ಪತ್ರದ ಪ್ರತಿ ಲಗತ್ತಿಸಿ ಐಜಿಪಿಗೆ ಪತ್ರ ಬರೆದಾಗ ಸಚಿವೆಯ ಪತ್ರವೇ ಸಿಕ್ಕಿಲ್ಲ ಎನ್ನುವ ಉತ್ತರ ಬಂತು. ಇದು ಪೊಲೀಸ್‌ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಉದಾಹರಣೆ ಎಂದರು.

ಎಚ್ಚರ ವಹಿಸಿ
ವಿದೇಶಕ್ಕೆ ಕೆಲಸಕ್ಕೆಂದು ತೆರಳಿದ ನೂರರಲ್ಲಿ 92 ಮಂದಿ ಇಂಥ ಸಮಸ್ಯೆಗೆ ಒಳಗಾಗುತ್ತಾರೆ. ಉನ್ನತ ಉದ್ಯೋಗಿಗಳು ಅಥವಾ ಸಂಬಂಧಿಕರು ಕರೆಸಿಕೊಂಡವರಿಗೆ ಸಮಸ್ಯೆ ಕಡಿಮೆ. ಏಜೆಂಟ್‌ನ ಪೂರ್ವಾಪರ ಪರಿಶೀಲಿಸಿ ಮುಂದುವರಿಯುವುದು ಉತ್ತಮ. ನೌಕರಿಗಾಗಿ ವಿದೇಶಕ್ಕೆ ಹೋಗುವುದು ಸುಲಭ, ಮರಳುವುದು ಬಹಳ ಕಷ್ಟ ಎಂದು ಶಾನುಭಾಗ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next