Advertisement
ವೆಬ್‌ಸೈಟ್ ಮೂಲಕ ಉದ್ಯೋಗ ಆಮಿಷವೊಡ್ಡುತ್ತಿದ್ದ ಈ ಜಾಲ ದೇಶದ ಪ್ರಮುಖ ನಗರಗಳಿಗೆ ಮಾನವ ಕಳ್ಳಸಾಗಣೆ ಮಾಡುತ್ತಿತ್ತು ಎಂಬ ಅಂಶವೂ ವಿಚಾರಣೆ ವೇಳೆ ತಿಳಿದುಬಂದಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಐಡಿ ಹಾಗೂ ಬೆಂಗಳೂರು ಪೊಲೀಸರು ಮೂರು ಪ್ರತ್ಯೇಕ ಪ್ರಕರಣದಲ್ಲಿ ಮುಂಬೈ ಮೂಲದ ಕಿಂಗ್‌ಪಿನ್ ಸೇರಿ 16 ಮಂದಿಯನ್ನು ಬಂಧಿಸಿದ್ದಾರೆ.
Related Articles
Advertisement
ಯಲಹಂಕದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಸುನೀಲ್ ಕೇಜ್ರಿವಾಲ್ ಅಲಿಯಾಸ್ ಪಂಡಿತ್, ಜಾಫರ್, ಷರೀಫ್ ಸರ್ಕಾರ್, ರೆಹಾನ್ ಷರೀಫ್, ಮೊಹಮದ್ ಬಿಲಾಲ್ ಶೇಖ್ ಎಂಬವರನ್ನು ವಶಕ್ಕೆ ಪಡೆದು ಯಲಹಂಕ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉಳಿದಂತೆ ರಾಮನಗರ ಕೊಲೆ ಪ್ರಕರಣ ಹಾಗೂ ಜಾಲದ ಕುರಿತ ಸಮಗ್ರ ತನಿಖೆ ಸಲುವಾಗಿ ರೆಹಮಾನ್ ಸೇರಿ ಮೂವರು ಆರೋಪಿಗಳನ್ನು ಸಿಐಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಉನ್ನತ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
ವೆಬ್‌ಸೈಟ್ ಮೂಲಕ ಯುವಕರಿಗೆ ಗಾಳ!ಜಾಲದ ಕಿಂಗ್‌ಪಿನ್ ಎನ್ನಲಾದ ರಾಹುಲ್ ಮೆಹ್ರಾ, ಸುನೀಲ್ ಕೇಜ್ರಿವಾಲ್ ಆರೋಪಿಗಳು www.abroadjobs.com ವೆಬ್‌ಸೈಟ್ ಮೂಲಕ ಅಮೆರಿಕಾ, ಕೆನಡಾ, ಬ್ರಿಟನ್ ದೇಶಗಳಲ್ಲಿ ಉತ್ತಮ ವೇತನದ ಕೆಲಸ ಕೊಡಿಸುತ್ತೇವೆ ಎಂದು ಜಾಹೀರಾತು ನೀಡಿದ್ದಾರೆ. ಅದನ್ನು ನಂಬುತ್ತಿದ್ದ ಭಾರತ, ಬಾಂಗ್ಲಾ ಸೇರಿ ಹಲವು ದೇಶಗಳ ಯುವಕರು ತಮ್ಮ ವಿವರಗಳನ್ನು ವೆಬ್‌ಸೈಟ್‌ನೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಅವರು ನಮೂದಿಸಿದ್ದ ದೂರವಾಣಿ ಸಂಖ್ಯೆಗಳನ್ನು ಪಡೆದುಕೊಂಡಿರುವ ವಂಚಕ ಜಾಲದ ಸದಸ್ಯರು ಏಜೆಂಟರ ಮೂಲಕ ಅವರನ್ನು ಸಂಪರ್ಕಿಸಿ ಮೊದಲು ಬೆಂಗಳೂರು ಮತ್ತು ಮುಂಬಯಿಗೆ ಕರೆಸಿಕೊಂಡಿದ್ದರು. ಅಲ್ಲಿ ಕರೆಸಿಕೊಂಡ ಬಳಿಕ ಅವರಿಗೆ ಪಾಸ್‌ಪೋರ್ಟ್ ಇನ್ನಿತರೆ ಪ್ರಕ್ರಿಯೆಗಳು ಆಗಬೇಕು ಎಂದು ಕೆಲದಿನಗಳ ಕಾಲ ಸುತ್ತಾಡಿಸಿ ಒಂಟಿ ಮನೆಯಲ್ಲಿ ಕೂಡಿಹಾಕಿದ್ದರು. ಈಗ ಬೆಳಕಿಗೆ ಬಂದಿರುವ ಪ್ರಕರಣದಲ್ಲಿ ಚಿಕ್ಕಜಾಲದ ಕೋಳಿಪುರ ಗ್ರಾಮದ ಸಮೀಪ ಬಳಿ ಒಂಟಿ ಮನೆಗೆ ತಂದು 8 ಮಂದಿ ಬಾಂಗ್ಲಾ ಯುವಕರನ್ನು ಕೂಡಿಹಾಕಿದ್ದರು. ಹಣ ದೋಚಲು ಪಿಸ್ತೂಲ್ ಬಳಕೆ
ಒಂಟಿ ಮನೆಯಲ್ಲಿ ಆರೋಪಿಗಳನ್ನು ಕೂಡಿಹಾಕಿದ ಬಳಿಕ ಅವರು ತಂದಿದ್ದ ಹಣ, ಚಿನ್ನಾಭರಣ ಪಡೆದು ಚಿತ್ರಹಿಂಸೆ ನೀಡುತ್ತಿದ್ದ ಈ ಜಾಲ, ಅವರಿಂದಲೇ ಪೋಷಕರಿಗೆ ಇಂಟರ್‌ನ್ಯಾಶನಲ್ ಕರೆ ಮಾಡಿಸುತ್ತಿದ್ದರು. ತಾವು ವಿದೇಶದಲ್ಲಿದ್ದು, ಒಳ್ಳೆ ಉದ್ಯೋಗ ಸಿಕ್ಕಿದೆ. ಸದ್ಯಕ್ಕೆ ಹಣದ ಅಗತ್ಯವಿದೆ ಎಂದು ನಂಬಿಸಿ ತಮ್ಮ ಅಕೌಂಟ್‌ಗಳಿಗೆ ಹಣ ಹಾಕಿಸಿಕೊಳ್ಳುತ್ತಿದ್ದರು. ಒಬ್ಬೊಬ್ಬರಿಂದಲೂ ಕನಿಷ್ಠ 5 ಲಕ್ಷ ರೂ.ಗಳಿಂದ 12 ಲಕ್ಷ ರೂ.ಗಳವರೆಗೆ ಹಣ ಹಾಕಿಸಿಕೊಂಡಿರುವುದು ಪತ್ತೆಯಾಗಿದೆ. ಪ್ರತಿರೋಧ ತೋರಿದರೆ ಮಾರಕಾಸ್ತ್ರಗಳಿಂದ ಥಳಿಸುತ್ತಿದ್ದರು. ಜತೆಗೆ, ಪಿಸ್ತೂಲ್ ತೋರಿಸಿ ಕೊಲ್ಲುವ ಬೆದರಿಕೆ ಒಡ್ಡುತ್ತಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವರ್ಷದ ಹಿಂದಿನ ಕೊಲೆ ಪ್ರಕರಣದಿಂದ ಸುಳಿವು!
ರಾಮನನಗರದ ಪಾದರಹಳ್ಳಿ ಸಮೀಪದ ರಸ್ತೆ ಸಮೀಪ ಕಳೆದ ವರ್ಷ ಡಿ.6ರಂದು ಅಪರಿಚಿತ ಪುರುಷನ ಶವ ಪತ್ತೆಯಾಗಿದ್ದು, ದುಷ್ಕರ್ಮಿಗಳು ಹಲ್ಲೆನಡೆಸಿ ಮುಖವನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಶವ ಬಿಸಾಡಿದ್ದರು. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಬೆಂಗಳೂರಿನ ಬಾಗಲೂರಿನ ಪ್ರಿನ್ಸ್ ಇನ್ ಹೋಟೆಲ್‌ನಲ್ಲಿ ಇರುವ ಮಾಹಿತಿ ಖಚಿತಪಡಿಸಿಕೊಂಡ ಸಿಐಡಿ ಅಧಿಕಾರಿಗಳು ಅಶ್ವಾಕ್, ರಾಹುಲ್ ಮೆಹ್ರಾ, ಸುನೀಲ್ ಕೇಜ್ರಿವಾಲ್, ಜಾಫರ್ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಆಗ, ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕರನ್ನು ಕರೆತಂದು ಅಕ್ರಮವಾಗಿ ಹಣ ವಸೂಲಿ ಮಾಡಲಾಗಿದೆ ಎಂದು ಬಾಯ್ಬಿಟ್ಟಿದ್ದಾರೆ. – ಮಂಜುನಾಥ್ ಲಘುಮೇನಹಳ್ಳಿ