ಮಹಾನಗರ: ಮಾನವ ಹಕ್ಕುಗಳ ರಕ್ಷಣೆಯ ಮನೋಭಾವ ಹೃದಯದಿಂದ ಹುಟ್ಟಬೇಕು. ನಮ್ಮ ಮನೆ, ಪರಿಸರದಲ್ಲಿ ನಮ್ಮ ಹಕ್ಕುಗಳನ್ನು ಸರಿಯಾಗಿ ನಿಭಾಯಿಸಿದರೆ ಬೇರೆಯವರ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಪ್ರಮೇಯ ಬರುವುದಿಲ್ಲ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಕೆ.ಎಸ್. ಬೀಳಗಿ ಹೇಳಿದರು.
ರಾಜ್ಯ ಮಾನವ ಹಕ್ಕು ಆಯೋಗ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರ, ಸರಕಾರೇತರ ಸಂಸ್ಥೆಗಳ
ಸಹಭಾ ಗಿತ್ವದಲ್ಲಿ ನಗರದ ಎಸ್‌ಡಿಎಂ ಲಾ ಕಾಲೇಜಿನಲ್ಲಿ ಬುಧವಾರ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಹಕ್ಕುಗಳನ್ನು ಇನ್ನೊಬ್ಬರು ಪ್ರಶ್ನಿಸಿದಾಗ ನಮಗೆ ಆಗುವ ನೋವನ್ನು ಅರಿತುಕೊಂಡೇ ಇನ್ನೊಬ್ಬರೊಂದಿಗೆ ಸಂವಹಿಸಬೇಕು. ಪ್ರೀತಿ, ತ್ಯಾಗ, ಸೋದರ ಭಾವನೆಯಿಂದ ನಡೆದುಕೊಳ್ಳುತ್ತಾ ಇನ್ನೊಬ್ಬರ ಮಾನವ ಹಕ್ಕುಗಳನ್ನು ರಕ್ಷಿಸಿದಾಗ ಅವರ ಪಾಲಿಗೆ ನಾವು ದೇವರಾಗುತ್ತೇವೆ ಎಂದರು.
ಮಾನವ ಹಕ್ಕುಗಳ ಉಲ್ಲಂಘನೆಯ ಸನ್ನಿವೇಶಗಳು, ಅಪರಾಧ, ಅವಘಡಗಳನ್ನು ಕಂಡೂ ನಿರ್ಲಕ್ಷಿಸಿದರೆ ಅದು ಕೂಡ ಮಾನವ ಹಕ್ಕುಗಳ ಉಲ್ಲಂಘನೆಯೇ ಆಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಬೇಕು ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನ ಗೌಡ ಮಾತನಾಡಿ, ಈಗಿನ ಜೀವನ ಶೈಲಿ, ಸ್ವಾರ್ಥ ಮನುಷ್ಯರನ್ನು ಸ್ವಾರ್ಥಿಯನ್ನಾಗಿಸುತ್ತಿದೆ. ಇದರಿಂದಲೇ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳೂ ಹೆಚ್ಚುತ್ತಿವೆ. ಇನ್ನೊಬ್ಬರ ಹಕ್ಕುಗಳನ್ನು ಗೌರವಿಸುವ ಬಗ್ಗೆ ಸರಕಾರ ಸಂಘ ಸಂಸ್ಥೆಗಳು ಪಾಠ ಹೇಳಲು ಸಾಧ್ಯವಿಲ್ಲ. ಅವರೇ ಈ ಬಗ್ಗೆ ಅವಲೋಕನ ನಡೆಸಬೇಕು ಎಂದು ತಿಳಿಸಿದರು.
ಸಹಾಯಕ ಆಯುಕ್ತ ರೇಣುಕಾ ಪ್ರಸಾದ್, ಮಾನವ ಹಕ್ಕುಗಳ ಹೋರಾಟಗಾರ ಕೆ. ಬಾಲಕೃಷ್ಣ ರೈ, ಪ್ರಾಂಶುಪಾಲೆ
ಅರುಣಾ ಪಿ. ಕಾಮತ್, ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.