ಮಂಗಳೂರು: ದೇಶದ ಮಾನವ ಸಂಪನ್ಮೂಲದ ಸದ್ಬಳಕೆ ದೇಶೀಯವಾಗಿಯೇ ಆಗಬೇಕು. ಇಲ್ಲಿರುವ ಅವಕಾಶಗಳನ್ನು ಸದುಪಯೋಗಪಡಿಸಿ ಕೊಂಡು ಜೀವನದಲ್ಲಿ ಯಶಸ್ಸುಗಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ನಗರದ ಕುದು¾ಲ್ ರಂಗರಾವ್ ಪುರಭವನದಲ್ಲಿ ನಡೆದ ಶ್ರೀದೇವಿ ಫಿಸಿಯೋಥೆರಪಿ, ನರ್ಸಿಂಗ್, ಫಾರ್ಮೆಸಿ ಕಾಲೇಜಿನ ಪದವಿ ಪ್ರದಾನ ಹಾಗೂ ವಾರ್ಷಿಕೋತ್ಸವವನ್ನು ಅವರು ಶುಕ್ರವಾರ ಉದ್ಘಾಟಿಸಿದರು.
ಶ್ರೀದೇವಿ ಕಾಲೇಜ್ ಮೌಲ್ಯಯುತ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಹೆಸರು ವಾಸಿ. ಇಂತಹ ಸಂಸ್ಥೆಯ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಳಿಕ ವೃತ್ತಿ ಜೀವನಕ್ಕೆ ವಿದೇಶಕ್ಕೆ ಹೋಗದೆ, ದೇಶದೊಳಗೆ ಕೌಶಲವನ್ನು ಒರೆಗೆ ಹಚ್ಚಬೇಕು. ಇದರಿಂದ ನಮ್ಮ ದೇಶದ ಮಾನವ ಸಂಪನ್ಮೂಲ ನಮ್ಮಲ್ಲೇ ಉಳಿದು, ಅನೇಕ ಹೊಸತುಗಳನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಗೌರವ ಅತಿಥಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಸಿಂಡಿಕೇಟ್ ಮತ್ತು ಸೆನೆಟ್ ಸದಸ್ಯ ಡಾ| ಭಗವಾನ್ ಬಿ.ಎಸ್. ಮಾತನಾಡಿ, ಮಾನವೀಯತೆಯಿಂದ ಸಮಾಜ ಸೇವಾ ಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರ ಎಂದರು.
ಶ್ರೀದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ ಮೈನಾ ಎಸ್. ಶೆಟ್ಟಿ, ಉಪಾಧ್ಯಕ್ಷ ನಿಧೀಶ್ ಎಸ್. ಶೆಟ್ಟಿ, ಫಾರ್ಮಸಿ ಕಾಲೇಜ್ ಪ್ರಾಂಶುಪಾಲ ಡಾ| ಜಗದೀಶ್ ವಿ. ಕಾಮತ್, ನರ್ಸಿಂಗ್ ಕಾಲೇಜ್ ಪ್ರಾಂಶುಪಾಲೆ ಡಾ| ಬಿಬಿನಾ ವಿಜಯ್, ಫಿಸಿಯೋಥೆರಪಿ ಕಾಲೇಜ್ ಪ್ರಾಂಶುಪಾಲ ಡಾ| ವಿಜಯ ಪಿ. ಮೊದಲಾದವರು ಉಪಸ್ಥಿತರಿದ್ದರು.
203 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ನರ್ಸಿಂಗ್ ಕಾಲೇಜ್ ಪ್ರಾಧ್ಯಾಪಕಿ ಡಾ| ಎಡ್ವಿನಾ ಮೋನಿಸ್ ಸ್ವಾಗತಿಸಿದರು. ಡಾ| ದಿಶಾ ಜಗದೀಶ್ ಮತ್ತು ಸಂಗೀತಾ ಮುರಳಿ ನಿರೂಪಿಸಿದರು.