Advertisement
ಒಂದು ದೊಡ್ಡ ಗ್ಯಾಪ್ ಬಳಿಕ ಬಂದರೂ, ನಿರ್ದೇಶಕ ಸುರೇಶ್ ಹೆಬ್ಳೀಕರ್‌ಗೆ ಒಂದು ಸ್ಪಷ್ಟತೆ ಇದೆ. ಕಥೆಯ ಆಯ್ಕೆ, ನಿರೂಪಣೆ, ಯುವಕರಲ್ಲಿರುವ ತಳಮಳ, ಒತ್ತಡಗಳಿಂದ ಉಂಟಾಗುವ ಸಮಸ್ಯೆಗಳನ್ನು ನಿಗಧಿತ ಅವಧಿಯಲ್ಲಿ ಏನೆಲ್ಲಾ ಹೇಳಬೇಕು ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಒಂದು “ಸಿಂಪಲ್’ ಸಿನಿಮಾವನ್ನು ಮುಂದಿಟ್ಟಿದ್ದಾರೆ. ಹಾಗಂತ, ಅವರ “ಮಂಥನ’ದಲ್ಲಿ ವಿಶೇಷತೆ ಹುಡುಕುವಂತಿಲ್ಲ. ಒಂದು ಸಣ್ಣ ಎಳೆಯನ್ನೇ ಅಂದವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿರುವುದು ಸಮಾಧಾನಕರ.
Related Articles
Advertisement
ಉಳಿದಂತೆ, ಇಲ್ಲಿ ಅಬ್ಬರದ ಡೈಲಾಗ್‌ಗಳಿಲ್ಲ, ಹೊಡಿ-ಬಡಿ ಎಂಬ ಸನ್ನಿವೇಶವೂ ಇಲ್ಲ, ನಾಯಕನ ಹಿಂದೆ ನಾಯಕಿ ಸುತ್ತುವ ಹಾಡುಗಳೂ ಕಾಣಸಿಗಲ್ಲ. ಆದರೂ, ವಾಸ್ತವತೆಗೆ ಹತ್ತಿರ ಎನಿಸುವ ಅಂಶಗಳು ಒಂದಷ್ಟು ಭಾವುಕತೆಗೆ ದೂಡುತ್ತವೆ. ಹಾಗಾಗಿ “ಮಂಥನ’ ಒಂದರ್ಥದಲ್ಲಿ ಮನಸ್ಸಿನ ಸಮಸ್ಯೆಗೆ ಉತ್ತರವಾಗಿಯೂ ನಿಲ್ಲುತ್ತದೆ. ವಿನಾಕಾರಣ ಒತ್ತಡ ಎಂಬುದು ಮಾನಸಿಕ ಹಿಂಸೆಗೆ ಹೇಗೆ ಕಾರಣವಾಗುತ್ತೆ ಎಂಬುದನ್ನಿಲ್ಲಿ ಅತೀ ಸೂಕ್ಷ್ಮವಾಗಿ ಹೇಳಲಾಗಿದೆ. ಎಷ್ಟೇ ಮಾನಸಿಕ ತೊಳಲಾಟಗಳಿದ್ದರೂ ಭಾವನಾತ್ಮಕ ಸಂಬಂಧ ಅದನ್ನು ದೂರ ಮಾಡಬಲ್ಲದು ಎಂಬುದೇ “ಮಂಥನ’ದ ತಿರುಳು.
ಇಲ್ಲೂ ಅಪ್ಪ-ಮಗನ ಗಾಢವಾದ ಸಂಬಂಧವಿದೆ, ತಾಯಿ-ಮಗಳ ವಾತ್ಸಲ್ಯವೂ ಇದೆ. ಹುಡುಗ, ಹುಡುಗಿ ನಡುವಿನ ಚಿಗುರು ಪ್ರೀತಿಯ ನಿರ್ಬಂಧಕ್ಕೆ ಅವರವರ ಅಪ್ಪ, ಅಮ್ಮನ ಮತ್ತೂಂದು “ಸಂಬಂಧ’ ಕಾರಣವಾಗುತ್ತೆ. ಇದು ಎಷ್ಟರ ಮಟ್ಟಿಗೆ ಅವರ ಮೇಲೆ ಪರಿಣಾಮ ಬೀರುತ್ತೆ ಎಂಬ ಬಗ್ಗೆ ತಿಳಿಯಬೇಕಾದರೆ, ಒಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ. ಹೆಬ್ಳೀಕರ್ ಶೈಲಿಯ ಸಿನಿಮಾ ಇಷ್ಟಪಡೋರಿಗೆ, ಮಲೆನಾಡಿನ ಸೌಂದರ್ಯ ಸವಿಯಬೇಕೆನ್ನುವವರಿಗೆ ಈ ರೀತಿಯ ಪ್ರಯತ್ನ ಸಾರ್ಥಕ ಎನಿಸಬಹುದೇನೋ?
ಕಿರಣ್ ರಜಪೂತ್ ಹಾಗೂ ಅರ್ಪಿತ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ರಮೇಶ್ ಭಟ್ ಪಾತ್ರದಲ್ಲಿ ಜೀವಿಸಿದ್ದಾರೆ. ಸಂಗೀತ ಅಸಹಾಯಕ ಅಮ್ಮನಾಗಿ ಗಮನಸೆಳೆಯುತ್ತಾರೆ. “ಸಿದ್ಲಿಂಗು’ ಶ್ರೀಧರ್ ಕಾಣಿಸುವಷ್ಟು ಕಾಲ ಇಷ್ಟವಾಗುತ್ತಾರೆ. ಉಳಿದ ಪಾತ್ರಗಳಾವೂ ಗಮನಸೆಳೆಯುವುದಿಲ್ಲ. ಪ್ರವೀಣ್ ಡಿ.ರಾವ್ ಸಂಗೀತ, ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಪಿ. ರಾಜನ್ ಕ್ಯಾಮೆರಾದಲ್ಲಿ ಮಲೆನಾಡ ಸೊಬಗಿದೆ.
ಚಿತ್ರ: ಮನ ಮಂಥನನಿರ್ಮಾಣ: ಡಾ.ಕೆ.ಎ. ಅಶೋಕ್ ಪೈ
ನಿರ್ದೇಶನ: ಸುರೇಶ್ ಹೆಬ್ಳೀಕರ್
ತಾರಾಗಣ: ಕಿರಣ್ ರಜಪೂತ್, ಅರ್ಪಿತ, ರಮೇಶ್ ಭಟ್, ಸಂಗೀತ, ಕೆ.ಎಸ್.ಶ್ರೀಧರ್, ಸುರೇಶ್ ಹೆಬ್ಳೀಕರ್, ಸುಮನ್ ಇತರರು. * ವಿಜಯ್ ಭರಮಸಾಗರ