Advertisement

ಭೂಕುಸಿತಕ್ಕೆ ಮಾನವ ಹಸ್ತಕ್ಷೇಪವೇ ಕಾರಣ: ಭೂ ವಿಜ್ಞಾನಿಗಳ ಅಭಿಪ್ರಾಯ

01:17 AM Sep 11, 2019 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಸಂಭವಿಸಿರುವ ಭೂಕುಸಿತಕ್ಕೆ ಮಾನವ ಹಸ್ತಕ್ಷೇಪ ಹಾಗೂ ಅವೈಜ್ಞಾನಿಕ ಕಾಮಗಾರಿಗಳೇ ಕಾರಣ ಎಂದು ಭೂ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Advertisement

ಆಗಸ್ಟ್‌ ತಿಂಗಳ ಭಾರೀ ಮಳೆಗೆ ಭಾಗಮಂಡಲ ಸಮೀಪದ ಕೋರಂಗಾಲ, ವೀರಾಜಪೇಟೆ ಸಮೀಪದ ತೋರಾ ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿ 15 ಮಂದಿ ಭೂ ಸಮಾಧಿಯಾಗಿದ್ದರೆ, ವೀರಾಜ ಪೇಟೆಯ ಮಲೆತಿರಿಕೆ ಬೆಟ್ಟ ಹಾಗೂ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಗಳಲ್ಲಿ ಭಾರೀ ಬಿರುಕು ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು. ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರ ಸೂಚನೆಯಂತೆ ಪರಿಶೀಲನೆ ನಡೆಸಿದ ಭೂ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳಾದ ಸುನಂದನ್‌ ಬಸು ಮತ್ತು ಕಪಿಲ್‌ಸಿಂಗ್‌ ಅವರು ಸ್ಥಳ ಪರಿಶೀಲಿಸಿ 27 ಪುಟಗಳ ವರದಿಯನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿದ್ದಾರೆ.

ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿ ಮನೆಗಳ ನಿರ್ಮಾಣದ ಸಂದರ್ಭ ಯಾವುದೇ ತಡೆಗಳನ್ನು ನಿರ್ಮಿಸದೆ ಯದ್ವಾತದ್ವಾ ಮನೆ ಗಳನ್ನು ನಿರ್ಮಿಸಲಾಗಿದ್ದು, ಇದರಿಂದಾಗಿ ಬೆಟ್ಟದಲ್ಲಿ ಬಿರುಕು ಮತ್ತು ಕುಸಿತ ಸಂಭವಿಸಿದೆ. ಈ ಬೆಟ್ಟದಲ್ಲಿ ಬಿರುಕುಗಳನ್ನು ಅಗತ್ಯ ಸಾಮಗ್ರಿಗ ಳನ್ನು ಬಳಸಿ ಮುಚ್ಚಬೇಕಾಗಿದ್ದು, ಇದರಿಂದ ಆ ಸ್ಥಳದ ತೇವಾಂಶ ಕಡಿಮೆ
ಯಾಗಲಿದೆ. ಮಳೆಗಾಲ ಮುಗಿವ ತನಕ ಆ ಪ್ರದೇಶದ ಕೆಲವು ಮನೆಗಳನ್ನು ತೆರವುಗೊಳಿಸುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ವರದಿಯಲ್ಲೇನಿದೆ?
ಭೂಕುಸಿತ ಮತ್ತು ಭೂಮಿಯಲ್ಲಿನ ಬಿರುಕಿಗೆ ಮಾನವ ಹಸ್ತಕ್ಷೇಪವೇ ಪ್ರಮುಖ ಕಾರಣ ಎಂದು ವರದಿ ಉಲ್ಲೇಖೀಸಿದೆ. ಅದರಲ್ಲೂ ಅರಣ್ಯ ಇಲಾಖೆಯ ಅವೈಜ್ಞಾನಿಕ ಇಂಗುಗುಂಡಿ ನಿರ್ಮಾಣ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಬಿರುಕಿಗೆ ಕಾರಣ ಎಂದು ಬೊಟ್ಟು ಮಾಡಲಾಗಿದ್ದು, ವೀರಾಜಪೇಟೆಯ ತೋರ ಗ್ರಾಮದಲ್ಲಿ ಭೂಕುಸಿತಕ್ಕೆ ಅಲ್ಲಿನ ಕಲ್ಲುಗಣಿಗಾರಿಕೆ, ವೀರಾಜಪೇಟೆಯ ಮಲೆತಿರಿಕೆ ಬೆಟ್ಟದ ಬಿರುಕಿಗೆ ಬೆಟ್ಟದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಮನೆಗಳು ಕಾರಣ ಎಂದು ಗುರುತಿಸಲಾಗಿದೆ.

ಇಂಗು ಗುಂಡಿಗಳನ್ನು ಕಂದಕದ ರೀತಿಯಲ್ಲಿ ಕೊರೆದಿರುವ ಕಾರಣ ಮಳೆ ನೀರು ಸರಾಗವಾಗಿ ಹರಿಯುವುದಕ್ಕೆ ತಡೆಯುಂಟಾಗಿ ಆ ನೀರು ಭೂಮಿಯೊಳಗೆ ಅತಿಯಾಗಿ ಇಂಗಿ ಬಿರುಕು ಉಂಟಾಗಿದೆ ಎಂದು ವಿಶ್ಲೇಷಿಸಲಾಗಿದ್ದರೆ, ರಸ್ತೆ ವಿಸ್ತರಣೆ ಸಂದರ್ಭ ಇಳಿಜಾರನ್ನು ಸಮತಟ್ಟುಗೊಳಿಸುವ ಸಂದರ್ಭವೂ ಬೆಟ್ಟಕ್ಕೆ ಧಕ್ಕೆಯಾಗಿರುವುದು ಬಿರುಕಿಗೆ ಕಾರಣ ಎನ್ನಲಾಗಿದೆ.

Advertisement

ಕೋರಂಗಾಗಲ ಗ್ರಾಮದಲ್ಲಿನ ಭೂಕುಸಿತಕ್ಕೆ ಅಲ್ಲಿ ಮನೆಗಳನ್ನು ನಿರ್ಮಿಸುವ ಸಂದರ್ಭ ಇಳಿಜಾರು ಪ್ರದೇಶವನ್ನು ಸಮತಟ್ಟು ಮಾಡಿರುವುದು ಕಾರಣವೆಂದು ಬೊಟ್ಟು ಮಾಡಲಾಗಿದ್ದು, ಇಂತಹ ತೀರಾ ಇಳಿಜಾರು ಪ್ರದೇಶದಲ್ಲಿ ಭೂಮಿಯನ್ನು ಗಟ್ಟಿಗೊಳಿಸಬಲ್ಲ ಸಸ್ಯಗಳನ್ನು ಸಮೃದ್ಧವಾಗಿ ಬೆಳೆಸಬೇಕು ಎಂದು ಸಲಹೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next