Advertisement

ನಾಟಕಗಳಿಂದ ಮನ ಪರಿವರ್ತನೆ: ಭೋವಿ ಜಗದ್ಗುರು

11:44 AM Feb 22, 2020 | Suhan S |

ಬಾಗಲಕೋಟೆ: “ದೇಸಿ ಕಲೆಗಳಲ್ಲಿ ಒಂದಾದ ನಾಟಕವು, ಮನುಷ್ಯನ ಆತ್ಮ ನಿರೀಕ್ಷೆಯ ಕೇಂದ್ರವಾಗಿದ್ದು, ಅದು ಮನಪರಿವರ್ತನೆಯನ್ನು ಮಾಡುತ್ತದೆ’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

Advertisement

ನಗರದ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಶರಣಬಸವ ಅಪ್ಪಂಗಳ ಆಶ್ರಮದಲ್ಲಿ ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ನಡೆದ ಜಮುರಾ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವ ತನ್ನ ಜೀವನದಲ್ಲಿ ನಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡರೆ ಸಂಸ್ಕಾರ, ಸಂಸ್ಕೃತಿ ನಾಶವಾಗುತ್ತದೆ. ನಾಟಕ ಸಂಸ್ಕೃತಿಯ ಒಂದು ಭಾಗವಾಗಿದೆ ಎಂದರು.

ಮಹಾತ್ಮ ಗಾಂಧಿ ಅವರು “ಸತ್ಯ ಹರಿಶ್ಚಂದ್ರ’ ನಾಟಕವನ್ನು ನೋಡಿ ತಮ್ಮ ಮನಪರಿವರ್ತನೆ ಮಾಡಿಕೊಂಡರು. ಸ್ವಾತಂತ್ರ್ಯ ಹೋರಾಟವನ್ನು ಅವರು ಸತ್ಯಾಗ್ರಹ ಎಂದು ಕರೆದರು. ತಮ್ಮ ಜೀವನದುದ್ದಕ್ಕೂ ಸತ್ಯದ ಮಾರ್ಗದಲ್ಲಿಯೇ ನಡೆದು ಮಹಾತ್ಮರಾಗಿದ್ದಾರೆ ಎಂದರು.

“ನಮ್ಮ ಮನೆಯ ಮಕ್ಕಳು ಸಂಸ್ಕೃತಿ, ಸಂಸ್ಕಾರದ ಭಾಗವಾಗಬೇಕು. ಆಗ ದೇಶದಲ್ಲಿ ಅಪರಾಧಗಳು ಕಡಿಮೆಯಾಗುತ್ತದೆ. ಅಪರಾಧ ಮಾಡುವವರ ದೃಷ್ಟಿಯನ್ನು ಬದಲಾಯಿಸಲು ಶರಣರ ವಚನ, ತತ್ವ ಹಾಗೂ ನಾಟಕಗಳು ಸಹಕಾರಿಯಾಗುತ್ತವೆ’ ಎಂದರು. ಸರಳತೆ, ಆದರ್ಶ, ತತ್ವ, ಜೀವನ ಮೌಲ್ಯಗಳನ್ನು ನಾಟಕಗಳು ನಮಗೆ ಕಲಿಸುತ್ತವೆ. ಜೀವನ ಪರ್ಯಂತ ನಾಟಕ ಮಾಡುವವರು ಇಂದು “ಸಾಯೋ ಆಟ’ ನಾಟಕ ನೋಡಲೇ ಬೇಕು. ನಾಟಕಗಳು ಪ್ರತಿಯೊಬ್ಬ ಮನುಷ್ಯನಿಗೆ ಸಂಸ್ಕಾರ ಕಲಿಸುತ್ತದೆ. ಒಳ್ಳೆಯದು ಮತ್ತು ಕೆಟ್ಟದರ ಬಗೆಗಿನ ಆಲೋಚನೆಯನ್ನು ನಾಟಕಗಳು ತಿಳಿಸುತ್ತವೆ. ಸಂಗೀತ, ನೃತ್ಯ ವಿವಿಧ ಕಲೆಗಳನ್ನು ಮನುಷ್ಯ ಆಸ್ವಾದಿಸಬೇಕು. ಮೊಬೈಲ್‌ ಬಳಕೆ, ಟಿ.ವಿ ವೀಕ್ಷಣೆಯನ್ನು ಕಡಿಮೆ ಮಾಡಿ ಪುಸ್ತಕ, ವಚನ ಸಾಹಿತ್ಯದತ್ತ ಮನುಷ್ಯ ಗಮನ ಹರಿಸಬೇಕು’ ಎಂದರು.

ನಿಂಗರಾಜ ಮಬ್ರುಮಕರ ಅವರು, ಕಂಪ್ಯೂಟರ್‌ ಕಲಿಕೆ ಪುಸ್ತಕ ಬಿಡುಗಡೆ ಹಾಗೂ ವಿತರಣೆ ಕುರಿತು ಮಾತನಾಡಿದರು. ತಿಪ್ಪೇರುದ್ರ ಸ್ವಾಮೀಜಿ ಮಾತನಾಡಿದರು. ಸಮಾರಂಭದಲ್ಲಿ ಧಾರವಾಡದ ಮಂಜುನಾಥ ಭೋವಿ, ಬೆಳವಡಿಯ ಲಕ್ಷಣ, ಸುರೇಶ್‌ ಹಾಗೂ ಧರ್ಮದರ್ಶಿಗಳಾದ ಆಸಂಗಿ, ದುಂಡಯ್ಯ ಕೋಟಿಮಠ ಇದ್ದರು. ಮಲ್ಲಿಕಾರ್ಜುನ ಕೋಲ್ಹಾರ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next