Advertisement

ಶಾಲೆಯಲ್ಲಿ ಪುಸ್ತಕ ಪಾಠ ಹೇಳುವ ಶಿಕ್ಷಕರಿಗೆ ನೈಜ ಕಾರ್ಯರೂಪ

03:20 AM Jul 01, 2017 | Team Udayavani |

ಉಡುಪಿ: ಶಾಲೆಯ ತರಗತಿಯಲ್ಲಿ ಪಠ್ಯ ಪುಸ್ತಕ ಹಿಡಿದುಕೊಂಡು ಅದರಲ್ಲಿ ಅಚ್ಚಾಗಿರುವ ಮಾನವ ಶರೀರದ ಕುರಿತು ಥಿಯರಿ (ಕಲ್ಪನೆಯ) ಪಾಠ ಮಾಡುವ ಶಿಕ್ಷಕರಿಗೆ ಪ್ರಾಕ್ಟಿಕಲ್‌ (ಕಾರ್ಯರೂಪ) ಆಗಿ ನೈಜ ಮಾನವ ಶರೀರದ ಬಗ್ಗೆ ತಿಳಿದುಕೊಳ್ಳುವ ವಿಶೇಷ ಕಾರ್ಯಾಗಾರವು ಮಣಿಪಾಲ ವಿವಿಯ ಮಲೇಕಾ ಮಣಿಪಾಲ ಮೆಡಿಕಲ್‌ ಕಾಲೇಜಿನ ಅನಾಟಮಿ, ಫಿಸಿಯಾಲಜಿ ಮತ್ತು ಬಯೋಕೆಮಿಸ್ಟ್ರಿ ವಿಭಾಗದ ವತಿಯಿಂದ ಮಣಿಪಾಲದಲ್ಲಿ ನಡೆಯಿತು. ಉಡುಪಿ ಜಿಲ್ಲೆಯ ಆಯ್ದ ಪ್ರೌಢಶಾಲೆ ಮತ್ತು ಪಿಯುಸಿಯ ಶಿಕ್ಷಕರಿಗೆ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

Advertisement

ಕಾರ್ಯಾಗಾರವನ್ನು ಮಣಿಪಾಲ ವಿವಿ ಕುಲಪತಿ ಡಾ| ಎಚ್‌. ವಿನೋದ್‌ ಭಟ್‌ ಅವರು ಉದ್ಘಾಟಿಸಿ, ಸಾಮಾಜಿಕವಾಗಿ ಸಂವೇದನಾಶೀಲತೆ ಹೊಂದಿರುವುದು ಪ್ರತಿ ವಿಶ್ವವಿದ್ಯಾನಿಲಯಗಳ ದೊಡ್ಡ ಕೆಲಸವಾಗಿದೆ. ಕಳೆದ 6 ದಶಕಗಳಿಂದ ಮಣಿಪಾಲ ಶಿಕ್ಷಣ ಸಂಸ್ಥೆಯು ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿದೆ ಎಂದರು.

ಮಾನವಾಂಗದ ವೀಡಿಯೋ ಪ್ರಸಾರ
ಹೃದಯ ಮತ್ತು ಶ್ವಾಸಕೋಶಗಳು ಹೇಗೆ ಕಾರ್ಯವನ್ನು ನಿರ್ವಹಿಸುತ್ತವೆ ಎನ್ನುವುದರ ಕುರಿತು ಮಾನವ ದೇಹದೊಳಗಿನ ಅವುಗಳ ಕಾರ್ಯನಿರ್ವಹಣೆಯನ್ನು ವೀಡಿಯೋ ರೆಕಾರ್ಡಿಂಗ್‌ ತೋರಿಸುವ ಮೂಲಕ ಪ್ರದರ್ಶಿಸಲಾಯಿತು. ಡಿಜಿಟಲ್‌ ಲ್ಯಾಬೊರೇಟರಿಯಲ್ಲಿ ಜೀವಶಾಸ್ತ್ರ ರಸಾಯನ ವಿಭಾಗದವರು ‘ಪೌಷ್ಟಿಕಾಂಶ ಮತ್ತು ಶರೀರ ವಿಜ್ಞಾನ’ದ ಕುರಿತು ವಿಷಯವನ್ನು ತಿಳಿಸಿದರು. ಆರೋಗ್ಯ, ಅನಾರೋಗ್ಯದ ಪರಿಕಲ್ಪನೆಗಳು, ವಿವಿಧ ಪೌಷ್ಟಿಕಾಂಶಗಳ ಕುರಿತ ಸಂಶಯವನ್ನು ನಿವಾರಿಸಿದರು. ಮಧುಮೇಹಿಗಳು, ಅವರ ಆಹಾರ ಕ್ರಮ, ಬೊಜ್ಜು ಕುರಿತು ಕೂಡ ತಜ್ಞ ಪ್ರೊಫೆಸರ್‌ಗಳು ವಿವರಿಸಿದರು.

ಶಿಕ್ಷಕರಿಗೆ ಸ್ವ-ಅನುಭವ
ಶಿಕ್ಷಕರನ್ನು ವಿವಿಧ ಗುಂಪುಗಳಾಗಿ ವಿಂಗಡಿಸಲಾಯಿತು. ಹೃದಯ ಬಡಿತ, ಬಿ.ಪಿ. ಟೆಸ್ಟಿಂಗ್‌, ಶ್ವಾಸಕೋಶಗಳ ಕಾರ್ಯಗಳ ಕುರಿತು ಸ್ವತಃ ಶಿಕ್ಷಕರೇ ಸ್ವಯಂ ಅನುಭವಗಳನ್ನು ಪಡೆಯುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಶಿಕ್ಷಕರು ಅವರವರೇ ಹೃದಯ ಬಡಿತ, ಬಿ.ಪಿ. ತಪಾಸಣೆಯಂತಹ ಕಾರ್ಯಗಳನ್ನು ಟೆಸ್ಟಿಂಗ್‌ ಮೀಟರ್‌ಗಳ ಮೂಲಕ ಮಾಡಿ ಸ್ವಅನುಭವ ಪಡೆದುಕೊಂಡರು.

ಲಿಟಲ್‌ ರಾಕ್‌ ಇಂಡಿಯನ್‌ ಶಾಲೆ ಮತ್ತು ಸೈಂಟ್‌ ಮೇರಿ ಶಾಲೆಯ ಶಿಕ್ಷಕರು ಕಾರ್ಯಾಗಾರದಿಂದ ಪಡೆದುಕೊಂಡ ಅನುಭವಗಳನ್ನು ವಿವರಿಸಿದರು. ಮಣಿಪಾಲ ವಿವಿ ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಅವರು ಭಾಗವಹಿಸಿದ ಶಿಕ್ಷಕರಿಗೆ ಪ್ರಮಾಣಪತ್ರ ವಿತರಿಸಿದರು. ಮಲೇಕಾ ಮಣಿಪಾಲ ಮೆಡಿಕಲ್‌ ಕಾಲೇಜಿನ ಡೀನ್‌ ಡಾ| ಉಲ್ಲಾಸ್‌ ಕಾಮತ್‌, ಅನಾಟಮಿ ವಿಭಾಗದ ಮುಖ್ಯಸ್ಥ ಡಾ| ಮೋಹನ್‌ದಾಸ್‌ ರಾವ್‌, ಫಿಸಿಯಾಲಜಿ ವಿಭಾಗ ಮುಖ್ಯಸ್ಥ ಡಾ| ಕಿರಣ್‌ಮಾಯಿ ರೈ, ಬಯೋಕೆಮಿಸ್ಟ್ರಿ ವಿಭಾಗ ಮುಖ್ಯಸ್ಥ ಡಾ| ಗುರುಪ್ರಸಾದ್‌ ರಾವ್‌ ಅವರು ಉಪಸ್ಥಿತರಿದ್ದರು.

Advertisement

ಕಣ್ಣಾರೆ ಕಂಡು ದಂಗಾದೆವು..!
ಅಂಗ ರಚನಾಶಾಸ್ತ್ರ ಹಾಲ್‌ನಲ್ಲಿ ಜೀವಶಾಸ್ತ್ರ ಶಿಕ್ಷಕರು ಮನುಷ್ಯ ದೇಹ‌ದ ವಿವಿಧ ಅಂಗಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು. ನಾವು ವಿಜ್ಞಾನ ಪುಸ್ತಕ ನೋಡಿ ಮನುಷ್ಯ ದೇಹದೊಳಗೆ 2-3 ಕವಾಟಗಳ ಬಗ್ಗೆ ಮಕ್ಕಳಿಗೆ ಪಠ್ಯ ಪುಸ್ತಕದಲ್ಲಿ ಅಚ್ಚಾಗಿರುವ ಚಿತ್ರಗಳ ಮೂಲಕ ಅದನ್ನು ವಿವರಿಸಿ ಪಾಠ ಮಾಡುತ್ತೇವೆ. ಆದರೆ ಇಲ್ಲಿ ಕಣ್ಣಾರೆ ಮನುಷ್ಯ ಜೀವದ ನೈಜ ಅಂಗಗಳನ್ನು ಕಂಡು ಸ್ವಲ್ಪ ದಂಗಾದೆವು. ಆದರೆ ಅದನ್ನು ನೋಡಿ ಕಲಿತದ್ದು ವಿಶೇಷ ಅನುಭವವನ್ನು ನೀಡಿದೆ ಎಂದು ಶಿಕ್ಷಕಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next