Advertisement

ಜೇನುಹುಳು ನಾಶವಾದರೆ ಮಾನವ ಸಂತತಿಗೆ ಅಪಾಯ

04:38 PM May 21, 2018 | |

ಕಲಬುರಗಿ: ಖ್ಯಾತ ವಿಜ್ಞಾನಿ ಅತುರ್ಟ ಎನಸ್ಸಿಗ್‌ ಹೇಳುವ ಪ್ರಕಾರ ಭೂಮಿಯಲ್ಲಿ ಜೇನುಹುಳುಗಳು ನಾಶವಾದರೆ ನಾಲ್ಕೇ ನಾಲ್ಕು ವರ್ಷದಲ್ಲಿ ಮಾನವ ಸಂತತಿ ನಾಶಕ್ಕೆ ನಾಂದಿ ಹಾಡಿದಂತಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಕೃಷಿ ವಿಜ್ಞಾನ ಕೇಂದ್ರದ ಪ್ರಾಣಿ ವಿಜ್ಞಾನಿ ಡಾ| ಮಂಜುನಾಥ ಪಾಟೀಲ ತಿಳಿಸಿದರು.

Advertisement

ನಗರದ ಆಳಂದ ರಸ್ತೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ರವಿವಾರ ಆಚರಿಸಲಾದ ವಿಶ್ವ ಜೇನುನೊಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೇನಿನಲ್ಲಿರುವ ವಿವಿಧ ಬಗೆಯ ಸಕ್ಕರೆಗಳು ಸುಲಭವಾಗಿ ಜೀರ್ಣ ಆಗುವುದರಿಂದ ಮಕ್ಕಳಿಗೆ, ವಯಸ್ಸಾದವರಿಗೆ ಹಾಗೂ ನಿಶಕ್ತಿ ಇದ್ದವರಿಗೆ ನೀಡಲಾಗುತ್ತದೆ. ಇದರಲ್ಲಿ ವಿವಿಧ ಲವಣಾಂಶಗಳು ಅಡಕ ಆಗಿರುವುದರಿಂದ ದೇಹಕ್ಕೆ ಉತ್ತಮ ಆಹಾರವೆನಿಸುತ್ತದೆ.

ಔಷಧಿ ಗುಣವುಳ್ಳ ಜೇನಿನ ರಸವನ್ನು ನರಗಳಿಗೆ ಸಂಬಂಧಿಸಿದ ನೋವು ನಿವಾರಣೆಗೂ ಉಪಯೋಗಿಸುತ್ತಾರೆ. ಇಂತಹ ಜೇನುಹುಳುಗಳು ನಶಿಸಿ ಹೋಗದಂತೆ ಉಳಿಸಿ ಜನರಲ್ಲಿ ಅರಿವು ಮೂಡಿಸುವುದಕ್ಕೆ ಮೇ 20 ರಂದು ವಿಶ್ವಜೇನು ನೊಣದ ದಿನವೆಂದು ಆಚರಿಸಲು ಜಗತ್ತಿನಾದ್ಯಂತ ನಿರ್ಧರಿಸಲಾಗಿದೆ ಎಂದರು.

ಕೃಷಿ ಕಾಲೇಜಿನ ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಮಹಾಂತೇಶ ಮಾತನಾಡಿ, ಕೃಷಿಯಲ್ಲಿ ಜೇನು ಸಾಕಾಣಿಕೆ ಮಾಡಿದಾಗ ವಿವಿಧ ಬೆಳೆಗಳಲ್ಲಿ ಜೇನುನೊಣಗಳು ತಮ್ಮ ಪರಾಗಸ್ಪರ್ಶದಿಂದ ಬೆಳೆಗಳ ಶೇ. 65 ರಷ್ಟು ಉತ್ಪಾದಕತೆ ಹೆಚ್ಚಿಸುತ್ತವೆ. ಅಲ್ಲದೇ ನಮ್ಮ ಪರಿಸರದಲ್ಲಿ ಜೀವ ವೈವಿಧ್ಯ ಕಾಪಾಡಿದಂತಾಗುತ್ತದೆ. ಹಾಗೆಯೇ, ಈ ಸಾಕಾಣಿಕೆಗೆ ಪ್ರತ್ಯೇಕವಾದ ಭೂಮಿ, ನೀರು ಹಾಗೂ ವಿದ್ಯುತ್ತಿನ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು.

Advertisement

ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದಂತಹ 50 ರೈತ ಹಾಗೂ ರೈತ ಮಹಿಳೆಯರಿಗೆ ಕೃಷಿಯಲ್ಲಿ ಜೋನುನೊಣಗಳ ಮಹತ್ವದ ಬಗ್ಗೆ ತರಬೇತಿ ನೀಡಲಾಯಿತು. ಜೇನುತುಪ್ಪ, ಜೇನುನೊಣದ ಪೆಟ್ಟಿಗೆ, ಜೇನು ತೆಗೆಯುವ ಯಂತ್ರ, ರಾಣಿ ತಡೆತಟ್ಟೆ ಹಾಗೂ ಜೇನು ಮೇಣ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ ಜೇನು ಕೃಷಿ ತಾಂತ್ರಿಕತೆಯ ಹಸ್ತಪ್ರತಿ ಬಿಡುಗಡೆಗೊಳಿಸಿ ರೈತರಿಗೆ ವಿತರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next