Advertisement
ಕಳೆದ 8 ವರ್ಷಗಳಲ್ಲಿ ದೇಶದ 7 ರಾಜ್ಯಗಳ, 17 ವಿವಿಧ ಸ್ಥಳಗಳಲ್ಲಿ ನಮ್ಮ ಸಂಶೋಧನಾ ಹಾಗೂ ಸಂರಕ್ಷಣಾ ತಂಡಗಳ ಜೊತೆಗೆ ನಾವು ಉತ್ತರ ಹುಡುಕಲು ಪ್ರಾರಂಭಿಸಿದ ಪ್ರಶ್ನೆಗಳೆಂದರೆ : ವನ್ಯಜೀವಿ ಸಂಬಂಧಿತ ಸಮಸ್ಯೆಗಳಿಂದಾಗುವ ನಷ್ಟದ ಬಗೆ ಹಾಗೂ ಮಟ್ಟವೇನು? ವನ್ಯಜೀವಿ ಸಮಸ್ಯೆಯಿಂದ ಬಾಧಿತರಾದ ಜನ ಹಾಗೂ ಸ್ಥಳಗಳನ್ನು ಗುರುತಿಸಿ ಸಹಾಯಮಾಡಬಹುದೇ? ನಷ್ಟದ ಪರಿಣಾಮವನ್ನು ತಗ್ಗಿಸಿ ಪರಿಹಾರವನ್ನು ಉತ್ತಮಗೊಳಿಸಬಹುದೇ? ಜನರ ಜೀವವ ಮತ್ತು ಜೀವನಾಧಾರ ನಾಶವಾಗದಂತೆ ಎಚ್ಚರ ವಹಿಸಲು ಸಾಧ್ಯವೆ? ಜೊತೆಗೆ ವನ್ಯಜೀವಿಗಳ ಬಗ್ಗೆ ಜನರಲ್ಲಿ ಪ್ರತೀಕಾರದ ಭಾವನೆಯ ಬದಲಾಗಿ ತಾಳ್ಮೆಯ ಮನೋಭಾವವನ್ನು ನಾವು ಹೇಗೆ ಉತ್ತೇಜಿಸಬಹುದು?- ಇವಿಷ್ಟು.
Related Articles
Advertisement
ದೇಶದ 11 ವಿವಿಧ ವನ್ಯಜೀವಿ ಸಂರಕ್ಷಿತ ಪ್ರದೇಶಗಳ ಸುತ್ತಮುತ್ತ ಜೀವಿಸುತ್ತಿರುವ ಸುಮಾರು 5 ಸಾವಿರ ಕುಟುಂಬಗಳ ಕುರಿತ ಅಧ್ಯಯನದಿಂದ ನಮಗೆ ಅನೇಕ ಸತ್ಯಗಳು ಕಂಡು ಬಂದವು. 32 ಜಾತಿಯ ವನ್ಯಪ್ರಾಣಿಗಳಿಂದ ಶೇ. 71 ಕುಟುಂಬಗಳು ಬೆಳೆ ಹಾಗೂ ಶೇ. 17 ಕುಟುಂಬಗಳು ಜಾನುವಾರುಗಳನ್ನು ಕಳೆದುಕೊಂಡಿದ್ದರೆ, ಶೇ.3ರಷ್ಟು ಕುಟುಂಬಗಳಲ್ಲಿ ಜನರಿಗೆ ಗಾಯ ಅಥವಾ ಜೀವಹಾನಿಯಾಗಿತ್ತು. ವನ್ಯಜೀವಿಗಳಿಂದ ಉಂಟಾಗುವ ಹಾನಿಯನ್ನು ತಗ್ಗಿಸಲು ಜನರು 12 ಬಗೆಯ ವಿವಿಧ ಉಪಾಯಗಳನ್ನು ಅಳವಡಿಸಿಕೊಂಡಿದ್ದು – ಇದರಲ್ಲಿ ರಾತ್ರಿಯೆಲ್ಲಾ ಬೆಳೆ ಕಾಯುವುದು, ಪ್ರಾಣಿಯನ್ನು ಬೆದರಿಸುವ ಸಾಧನಗಳು ಹಾಗೂ ಬೇಲಿಗಳು ಪ್ರಮುಖವಾಗಿದೆ. ಸ್ಥಳೀಯ ಮಧ್ಯಸ್ಥಿಕೆಯ ಮೂಲಕ ಪರಿಣಾಮಕಾರಿಯಾಗಿ ಜನರ ಜೀವ ಮತ್ತು ಜೀವನೋಪಾಯವನ್ನು ರಕ್ಷಿಸಲು ಸರ್ಕಾರವು ತುರ್ತಾಗಿ ಕಾರ್ಯೋನ್ಮುಖವಾಗಬೇಕಾಗಿದೆ.
ದಕ್ಷಿಣ ಭಾರತದ ಎರಡು ಪ್ರಮುಖ ರಾಷ್ಟ್ರೀಯ ಉದ್ಯಾನಗಳಾದ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ವೈಲ್ಡ್ ಲೈಫ್ ಕನ್ಸರ್ವೇಶನ… ಸೊಸೈಟಿಯು ವೈಲ್ಡ್ ಸೇವೆ ಕಾರ್ಯಕ್ರಮವನ್ನು 20 ತಿಂಗಳ ಹಿಂದೆ ಪ್ರಾರಂಭಿಸಿತು. ಶುಲ್ಕ ರಹಿತ ಮೊಬೈಲ… ಸಂಖ್ಯೆಗೆ ಸಂತ್ರಸ್ತರು ಪ್ರಕರಣವನ್ನು ವೈಲ್ಡ್ ಸೇವೆ ದತ್ತಸಂಚಯದಲ್ಲಿ ದಾಖಲಿಸುತ್ತಿದ್ದಂತೆ ತಂಡದ ಸ್ವಯಂಸೇವಕರು ಆ ಪ್ರಕರಣಕ್ಕೆ ಕೂಡಲೇ ಮರು ಪ್ರತಿಕ್ರಿಯಿಸುತ್ತಾರೆ. ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳ ಸುತ್ತಲಿನ ಸುಮಾರು 600 ಹಳ್ಳಿಗಳಲ್ಲಿ ವರದಿಯಾದ ಮಾನವ-ವನ್ಯಜೀವಿ ಸಂಘರ್ಷದ ಪ್ರಕರಣಗಳ ಸಕಾಲಿಕ ದಾಖಲೆ ಹಾಗೂ ಸರ್ಕಾರದಿಂದ ತುರ್ತು ವಿಲೇವಾರಿ ಪ್ರಕ್ರಿಯೆಯನ್ನು ಸುಗಮಗೊಳಿಸುವುದೇ ಈ ಕಾರ್ಯಕ್ರಮದ ಉದ್ದೇಶ.
ಈವರೆಗೆ 6,964 ಕುಟುಂಬಗಳಿಗೆ ವೈಲ್ಡ್ ಸೇವೆ ಸಹಾಯವನ್ನು ಒದಗಿಸಿದೆ. ಇದರಲ್ಲಿ 1,888 ಕುಟುಂಬಗಳಿಗೆ 53 ಲಕ್ಷ ರೂಪಾಯಿಗಳಷ್ಟು ಪರಿಹಾರ ಪಡೆದುಕೊಳ್ಳುವಲ್ಲಿ ಸಹಕರಿಸಿದೆ. ನಿರಂತರವಾಗಿ ಜಾನುವಾರುಗಳನ್ನು ಕಳೆದುಕೊಳ್ಳುತ್ತಿದ್ದ ಕುಟುಂಬಗಳಿಗಾಗಿ 22 ಮಾದರಿ ಕೊಟ್ಟಿಗೆಗಳನ್ನು ಕೂಡ ವೈಲ್ಡ… ಸೇವೆ ನಿರ್ಮಿಸಿದೆ.
ಮುನ್ಸೂಚನಾ ವ್ಯವಸ್ಥೆ ಹಾಗೂ ವಿಮಾ ಯೋಜನೆಗಳನ್ನೂ ಕೂಡ ಕೆಲವು ಪ್ರದೇಶಗಳಲ್ಲಿ ಕಲ್ಪಿಸಿಕೊಡಲಾಗಿದೆ. ಜೊತೆಗೆ ವೈಲ್ಡ… ಸೇವೆಯ ಈ ಕಾರ್ಯಕ್ರಮ ಮಿಶ್ರಫಲವನ್ನು ನೀಡಿದೆ. ಕಡಿಮೆ ಜನಸಾಂದ್ರತೆಯ ಏಕರೂಪದ ಜನವಸತಿ ಪ್ರದೇಶಗಳಲ್ಲಿ ಇದು ಯಶಸ್ಸನ್ನು ಕಂಡಿದೆ. ಹೆಚ್ಚು ಜನಸಾಂದ್ರತೆಯ ಬಹುಸಂಸ್ಕೃತಿ ಜನಪ್ರದೇಶಗಳಲ್ಲಿ ಈ ಕಾರ್ಯಕ್ರಮವು ಇನ್ನೂ ಹೆಚ್ಚು ಪರಿಣಾಮಕಾರಿಯಾಗಬೇಕಾಗಿದೆ.
ಗ್ರಾಮೀಣ ಜೀವನದಿಂದ ನಗರ ವ್ಯವಸ್ಥೆಯೆಡೆಗೆ ನಮ್ಮ ಸಮಾಜವು ಈಗ ಬದಲಾಗುತ್ತಿದೆ. ವನ್ಯಜೀವಿಗಳ ಜೊತೆಗಿನ ಸಂಘರ್ಷದ ಸಂತ್ರಸ್ತರಿಗೆ ನಾವು ನೀಡಬಲ್ಲ ಆಸರೆ ಹಾಗೂ ವನ್ಯಜೀವಿಗಳನ್ನು ಆಶ್ರಯಿಸುವ ಜೀವಿತ ಭೂಭಾಗಗಳನ್ನು ಹೇಗೆ ವ್ಯವಸ್ಥಿತವಾಗಿ ಕಟ್ಟಿ ಉಳಿಸಿಕೊಳ್ಳಬಹುದು ಎಂಬ ದೊಡ್ಡ ಸವಾಲೊಂದು ಈಗ ನಮ್ಮ ಮುಂದಿದೆ. ಅದನ್ನು ಎದುರಿಸಲು ರೆಡಿಯಾಗಿರಬೇಕು. ಲೇಖಕರು : ಡಾ. ಕೃತಿ ಕಾರಂತ ಮತ್ತು ಶ್ರೀ. ನರಸಿಂಹ ಮೂರ್ತಿ