Advertisement
ಪ್ರಕೃತಿ ಮುನಿದರೆ ನಮ್ಮ ಬದುಕು ಅಸಾಧ್ಯ. ಪ್ರಕೃತಿ ತನ್ನ ಮೇಲಿನ ದೌರ್ಜನ್ಯವನ್ನು ತಾಳಲಾರದೆ ಪದೇಪದೆ ಮೈಕೊಡವಿಕೊಳ್ಳುತ್ತಲೇ ಇದೆ. ವರ್ಷಗಳು ಕಳೆದಂತೆ ನೈಸರ್ಗಿಕ ವಿಕೋಪಗಳು ಹೆಚ್ಚುತ್ತಲೇ ಇದೆ. ಆದರೆ ಇವುಗಳಿಂದ ನಾವಿನ್ನೂ ಪಾಠ ಕಲಿತಿಲ್ಲ. ಭವಿಷ್ಯದಲ್ಲಿ ಇಂತಹ ಸಾಂಕ್ರಾಮಿಕಗಳಿಂದ ದೂರವಿರಬೇಕಾದರೆ ಪರಿಸರವನ್ನು ರಕ್ಷಿಸಲೇಬೇಕಿದೆ. ಮಾನವ ಪ್ರಕೃತಿಯ ಒಂದು ಭಾಗವೇ ಹೊರತು ಮಾನವನೇ ಪ್ರಕೃತಿಯಲ್ಲ ಎಂಬುದನ್ನು ನಾವೆಲ್ಲರೂ ಮೊದಲು ಮನಗಾಣಬೇಕು.
ಕೊರೊನಾ ಸಾಂಕ್ರಾಮಿಕ ತೀವ್ರಗೊಂಡ ಸಂದರ್ಭದಲ್ಲಿ ವಿಶ್ವದ ಹಲವೆಡೆ ಜಾರಿಗೊಳಿಸಲಾದ ಲಾಕ್‌ಡೌನ್ ವೇಳೆಯಲ್ಲಿ ನಗರಗಳಲ್ಲಿ ವಿವಿಧ ತೆರನಾದ ಮಾಲಿನ್ಯದ ಪ್ರಮಾಣವೇನೋ ಕಡಿಮೆಯಾಗಿದೆ. ಲಾಕ್‌ಡೌನ್‌ನ ಪರಿಣಾಮ ಜನರು ಹಳ್ಳಿಗಳತ್ತ ಮುಖ ಮಾಡಿದ್ದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಭೂ ಕಬಳಿಕೆ, ಅರಣ್ಯನಾಶ, ಅಕ್ರಮ ಗಣಿಗಾರಿಕೆ ಮತ್ತು ವನ್ಯ ಜೀವಿಗಳ ಬೇಟೆಯಾಡುವಿಕೆ ಹೆಚ್ಚಾಗಿದೆ ಮಾತ್ರವಲ್ಲದೆ ನೈಸರ್ಗಿಕ ಸಂಪನ್ಮೂಲದ ಅವಲಂಬನೆ ಅತಿಯಾಗಿದೆ. ಇದರ ಜತೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಿದೆ. ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಅರಣ್ಯ ನಾಶ ಅಧಿಕವಾಗಿದೆ. ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾ ಭಾಗದಲ್ಲಿ ಚಿನ್ನ ಮತ್ತು ಅಮೂಲ್ಯವಾದ ಕಲ್ಲುಗಳ ಅಕ್ರಮ ಗಣಿಗಾರಿಕೆ ಹೆಚ್ಚುತ್ತಿದೆ. ಹೀಗೆ ಸಂರಕ್ಷಿತ ಪ್ರದೇಶ ದಿನೇದಿನೆ ನಾಶವಾಗುತ್ತಿದೆ. ರೋಗ ಹರಡುವುದಕ್ಕೂ ಪ್ರಕೃತಿಗೂ ಏನು ಸಂಬಂಧ?
ಇಂತಹ ಪ್ರಶ್ನೆ ನಮ್ಮಲ್ಲಿ ಉದ್ಭವಿಸುವುದು ಸಹಜ. ಪ್ರಕೃತಿಯು ಮಾನವ ದೇಹದ ಹಾಗೆಯೇ ಕಾರ್ಯನಿರ್ವಹಿಸುತ್ತದೆ. ನಮ್ಮ ದೇಹದ ಪ್ರತಿಯೊಂದೂ ಅಂಗಾಂಗ ಸರಿಯಾಗಿ ಕಾರ್ಯನಿರ್ವಹಿಸಿದಲ್ಲಿ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ. ಹಾಗೆಯೇ ಪ್ರಕೃತಿಯೂ ಕೂಡ. ಇಲ್ಲಿನ ಪ್ರತಿಯೊಂದೂ ಜೀವಿಯೂ ತನ್ನ ನೈಸರ್ಗಿಕ ಜೀವನ ನಡೆಸಲು ಸಾಧ್ಯವಾದಾಗ ಮಾತ್ರ ಸಮತೋಲನ ಸಾಧ್ಯ. ಅರಣ್ಯ ನಾಶದಿಂದಾಗಿ ವಿವಿಧ ರೀತಿಯ ವನ್ಯಜೀವಿ ಪ್ರಭೇದಗಳು ನಾಶವಾಗುತ್ತಿರುವುದು ಕೂಡ ಮನುಷ್ಯನಿಂದಲೇ. ಕಾಡಿನಲ್ಲಿರಬೇಕಾದ ಪ್ರಾಣಿಗಳು ನಾಡಿನತ್ತ ಹೆಜ್ಜೆ ಇರಿಸಿದಾಗ ರೋಗಗಳು ತನ್ನಿಂತಾನೇ ಹರಡಲು ಆರಂಭವಾಗುತ್ತದೆ. ನಮ್ಮಿಂದ ಗಾಳಿ, ನೀರು, ಮಣ್ಣು ಎಲ್ಲವೂ ಕಲುಷಿತಗೊಂಡಿವೆ. ಅರಣ್ಯ ನಾಶದ ಜತೆಜತೆಗೆ ಕಾರ್ಖಾನೆಗಳ ಕಲುಷಿತ ನೀರನ್ನು ನದಿಗಳಿಗೆ ಬಿಟ್ಟು ನದಿ ನೀರನ್ನು ಕಲ್ಮಶಗೊಳಿಸುತ್ತಿದ್ದೇವೆ. ಇದೂ ಕೂಡ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡಲು ಕಾರಣವಾಗುತ್ತಿದೆ. ಪರಿಸರ ನಾಶ ಇದೇ ತೆರನಾಗಿ ಮುಂದುವರಿದದ್ದೇ ಆದಲ್ಲಿ ಪ್ರಾಣಿಜನ್ಯ ರೋಗಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎನ್ನುವುದು ಕೋವಿಡ್ ಬಳಿಕ ವಿಶ್ವದ ವಿವಿಧ ತಜ್ಞರು ನಡೆಸಿದ ಸಂಶೋಧನೆಗಳಲ್ಲಿ ಸಾಬೀತಾಗಿದೆ.
Related Articles
ಅರಣ್ಯ ಪ್ರದೇಶಗಳ ಅತಿಕ್ರಮಣ ಮತ್ತು ವನ್ಯಜೀವಿಗಳ ಅಕ್ರಮ ಬೇಟೆಗೆ ಕಡಿವಾಣ ಹಾಕಲೇಬೇಕಿದೆ. ಇಲ್ಲವಾದಲ್ಲಿ ವನ್ಯಜೀವಿ-ಮಾನವ ಸಂಘರ್ಷ ನಿತ್ಯ ನಿರಂತರವಾಗಲಿದೆ. ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡವರಿಗೆ ಜೀವನೋಪಾಯದ ಪರ್ಯಾಯ ಮಾರ್ಗಗಳನ್ನು ಸೂಚಿಸಿ ಈ ಅಕ್ರಮ ದಂಧೆಗೆ ಕಡಿವಾಣ ಹಾಕುವುದು ಅನಿವಾರ್ಯ. ಮಾನವನ ಆರೋಗ್ಯದ ದೃಷ್ಟಿಯಿಂದ ಇದು ಇಂದಿನ ತುರ್ತು.
Advertisement
ಹವಾಮಾನ ಬದಲಾವಣೆಯ ಮೇಲೆ ಪರಿಣಾಮಹವಾಮಾನ ಬದಲಾವಣೆಯು ಕೆಲ ವೊಂದು ರೋಗಗಳ ಹರಡುವಿಕೆಯನ್ನು ತೀವ್ರಗೊಳಿಸುತ್ತದೆ. ಋತು, ಹವಾಮಾನ ಫೂÉéನಂಥ ವೈರಸ್‌ಗಳ ನಿಯಂತ್ರಣದಲ್ಲಿ ಬಲುಮುಖ್ಯ ಪಾತ್ರ ವಹಿಸುತ್ತದೆ. ಜಾಗತಿಕ ತಾಪಮಾನ ಹೆಚ್ಚಳವು ಮುಂಬರುವ ದಿನಗಳಲ್ಲಿ ಸಾಂಕ್ರಾಮಿಕದ ಹರಡುವಿಕೆಯ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಬಯೋಮೆಡಿಕಲ್ ತ್ಯಾಜ್ಯ ಉತ್ಪಾದನೆಯಲ್ಲಿ ಹೆಚ್ಚಳ
ಕೋವಿಡ್‌ನಿಂದಾಗಿ ವೈದ್ಯಕೀಯ ತ್ಯಾಜ್ಯ ಉತ್ಪಾದನೆಯ ಪ್ರಮಾಣ ಏಕಾಏಕಿ ಹೆಚ್ಚಾಗಿದೆ. ಇದು ಪರಿಸರಕ್ಕೆ ಮುಂದೊಂದು ದಿನ ಭಾರೀ ಅಪಾಯ ತಂದೊಡ್ಡಬಹುದಾಗಿದೆ. ಶಂಕಿತ ಸೋಂಕಿತರ ಗಂಟಲ ದ್ರವ ಮಾದರಿ ಸಂಗ್ರಹಣೆಗೆ, ರೋಗ ನಿರ್ಣಯಕ್ಕೆ, ಅಪಾರ ಸಂಖ್ಯೆಯ ರೋಗಿಗಳ ಚಿಕಿತ್ಸೆಯ ಉದ್ದೇಶದಿಂದ ಬಳಸಲಾಗುತ್ತಿರುವ ವಿವಿಧ ತೆರನಾದ ಚಿಕಿತ್ಸಾ ಸಾಧನಗಳಿಂದಾಗಿ ಆಸ್ಪತ್ರೆಗಳಲ್ಲಿ ಅಧಿಕ ಪ್ರಮಾಣದ ತ್ಯಾಜ್ಯ ಸಂಗ್ರಹವಾಗುತ್ತಿದೆ. ಉದಾಹರಣೆಗೆ ಚೀನದ ವುಹಾನ್‌ನಲ್ಲಿ ಪ್ರತೀದಿನ 240 ಮೆಟ್ರಿಕ್ ಟನ್‌ಗಳಷ್ಟು ವೈದ್ಯಕೀಯ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದು ಸಾಮಾನ್ಯ ದಿನಕ್ಕಿಂತ ಸುಮಾರು 190 ಮೆ. ಟನ್‌ಗಳಷ್ಟು ಹೆಚ್ಚಾಗಿದೆ. ಅಲ್ಲದೆ ಜನರು ತಮ್ಮ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಫೇಸ್ ಮಾಸ್ಕ್, ಹ್ಯಾಂಡ್ ಗ್ಲೌಸ್ ಮತ್ತು ಇತರ ಆರೋಗ್ಯ ಸುರಕ್ಷತ ಸಾಧನ, ವಸ್ತುಗಳನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಮನೆ ಮನೆಗಳಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯದ ಪ್ರಮಾಣ ಹೆಚ್ಚಿದೆ. ಸರಕಾರದ ಆದ್ಯತೆಗಳೇನಾಗಬೇಕು?
ವಿಶ್ವದ ಸಂರಕ್ಷಿತ ಅರಣ್ಯ ಪ್ರದೇಶಗಳಿಗೆ ಇರುವ ಕಾನೂನಾತ್ಮಕ ರಕ್ಷಣೆ ಹಿಂಪಡೆಯುವುದನ್ನು ಎಲ್ಲ ರಾಷ್ಟ್ರಗಳೂ ತತ್‌ಕ್ಷಣದಿಂದ ನಿಲ್ಲಿಸಬೇಕು. ಅರಣ್ಯ ಪ್ರದೇಶಗಳಿಗೆ ನೀಡಲಾಗಿರುವ ಕಾನೂನಾತ್ಮಕ ರಕ್ಷಣೆಯನ್ನು ಹಿಂಪಡೆದದ್ದೇ ಆದಲ್ಲಿ ಇದು ಹವಾಮಾನ ಬದಲಾವಣೆಯ ತೀವ್ರತೆಯನ್ನು ಹೆಚ್ಚಿಸುವುದಲ್ಲದೆ ಸುಸ್ಥಿರ ಜೀವನೋಪಾಯದ ಮೂಲಗಳನ್ನು ಕಸಿದುಕೊಳ್ಳಲಿದೆ. ಅಲ್ಲದೆ ಜೀವ ವೈವಿಧ್ಯ ಹಾಗೂ ಅರಣ್ಯ ನಾಶಕ್ಕೆ ಕಾರಣವಾಗುತ್ತದೆ. ಇವೆರಡೂ ಸೋಂಕು ಹರಡಲು ಅತೀ ಮುಖ್ಯವಾದ ಕಾರಣಗಳಾಗಿವೆ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಸರಕಾರಗಳು ತುರ್ತು ಕ್ರಮ ಜಾರಿಗೊಳಿಸಬೇಕು. ಸರಕಾರ ಮತ್ತು ಸಂಸ್ಥೆಗಳು ಸೇರಿಕೊಂಡು ದೀರ್ಘ ಕಾಲಾವಧಿಯಲ್ಲಿ ಪರಿಣಾಮ ಬೀರಬಹುದಾದಂಥ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು. ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡಬಲ್ಲ ಯೋಜನೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಮುಖೇನ ಜೀವವೈವಿಧ್ಯ ರಕ್ಷಣೆಗೆ ಮುಂದಾಗಬೇಕು. ಇದರಿಂದ ಪ್ರಾಣಿಗಳಿಂದ ಹರಡಬಹುದಾದ ಸಾಂಕ್ರಾಮಿಕಗಳಿಗೆ ಕಡಿವಾಣ ಹಾಕಲು ಸಾಧ್ಯ. ಕಂಪೆನಿಗಳು ಏನು ಮಾಡಬಹುದು?
ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಪೂರಕ ವಾದ, ಹವಾಮಾನ ಸ್ಥಿರತೆ ಮತ್ತು ಪರಿಸರ ವ್ಯವಸ್ಥೆಯ ಪುನರ್ ಸ್ಥಾಪನೆಗೆ ಕಂಪೆನಿಗಳು ಮುಂದಾಗಬೇಕಿವೆ. ಜನರ ಆದಾಯ ಹೆಚ್ಚಳಕ್ಕೆ ನೆರವಾಗು ವುದರ ಜತೆಯಲ್ಲಿ ಪ್ರಕೃತಿಯ ರಕ್ಷಣೆಗೆ ಅದರಲ್ಲೂ ಮುಖ್ಯವಾಗಿ ಅರಣ್ಯ ಮತ್ತು ಜಲಮೂಲಗಳ ಸಂರಕ್ಷಣೆಗೆ ಕಂಪೆನಿಗಳು ತಮ್ಮ ಆದಾಯದಲ್ಲಿ ಒಂದಿಷ್ಟು ಹಣವನ್ನು ಮೀಸಲಿಡಬೇಕು. ಪ್ರಕೃತಿ ರಕ್ಷಣೆಯಲ್ಲಿ ಅಡಗಿದೆ ನಮ್ಮ ಹಿತ
ಮಾನವ ಆರೋಗ್ಯ ಮತ್ತು ಆರ್ಥಿಕ ಆರೋಗ್ಯ ಭೂಮಿಯ ಆರೋಗ್ಯದೊಂದಿಗೆ ಅಭೇದ್ಯವಾದ ನಂಟನ್ನು ಹೊಂದಿದೆ. ನಮ್ಮ ಬದುಕನ್ನು ಸಮೃದ್ಧಿಯಾಗಿಸಲು ಬೇಕಾಗಿರುವುದು ಪರಿಸರ. ನಾವು ಎಷ್ಟು ಪ್ರಕೃತಿಯನ್ನು ಪ್ರೀತಿಸುತ್ತೇವೆಯೋ ಅದು ನಮ್ಮನ್ನು ದುಪ್ಪಟ್ಟು ಪ್ರೀತಿಸುತ್ತದೆ ಎಂಬುದು ನೆನಪಿರಲಿ. ಪ್ರಕೃತಿಯ ರಕ್ಷಣೆ ಎಂದರೆ ನಿಜವಾಗಿಯೂ ನಮ್ಮನ್ನು ನಾವು ರಕ್ಷಿಸಿಕೊಂಡಂತೆ. ಈ ದಿಸೆಯಲ್ಲಿ ಎಲ್ಲರೂ ಬದ್ಧತೆ, ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಅಗತ್ಯವಿದೆ. ಇದರಿಂದ ಮಾತ್ರ ಈ ಭೂಮಿಯ ಮೇಲೆ ಕಾಣಿಸಿಕೊಳ್ಳಬಹುದಾದ ಯಾವುದೇ ತೆರನಾದ ವೈರಸ್, ಸಾಂಕ್ರಾಮಿಕಗಳಿಂದ ಜನರನ್ನು ಪಾರು ಮಾಡಬಹುದಾಗಿದೆ.