Advertisement

Canteen: ಕಾಂತಮ್ಮ ಕ್ಯಾಂಟೀನ್‌ನಲ್ಲಿ 1 ರೂ.ಗೆ 1 ಗುಂಡಿಡ್ಲಿ!

11:28 AM Aug 10, 2023 | Team Udayavani |

ಹುಳಿಯಾರು: “ಒಂದು ರೂ.ಗೆ ಒಂದು ಗುಂಡಿಡ್ಲಿ’ ಎಂದರೆ ಅಚ್ಚರಿಯಾಗಬಹುದು. ಹುಳಿಯಾರಿನ ಈ ಮಹಿಳೆ ಅತ್ಯಂತ ಕಡಿಮೆ ಬೆಲೆಗೆ ಗುಂಡಿಡ್ಲಿ ಕೊಡುವ ಮೂಲಕ ಬಡವರು, ಕೃಷಿ ಕೂಲಿ ಕಾರ್ಮಿ ಕರ ಹಸಿವು ನೀಗಿಸುತ್ತಿದ್ದಾರೆ. ಇದೊಂದು ರೀತಿ ಬಡವರ ಪಾಲಿನ “ಇಂದಿರಾ ಕ್ಯಾಂಟೀನ್‌’. ಅದರ ಜತೆಗೆ ಸಂಕಷ್ಟದಿಂದ ನೊಂದು ಬೆಂದು ಅರಳಿರುವ ಕಾಂತಮ್ಮ ಎಂಬ ಮಹಿಳೆಯ ಯಶೋಗಾಥೆಯೂ ಹೌದು.

Advertisement

ಹುಳಿಯಾರಿನ ಶ್ರೀ ಬನಶಂಕರಮ್ಮ ದೇವಸ್ಥಾನದ ಬಳಿ ಶಿಥಿಲಾವಸ್ಥೆಯಲ್ಲಿರುವ ತಮ್ಮ ಮನೆಯಲ್ಲೇ ಕಾಂತಮ್ಮ ಇಡ್ಲಿ ಮಾಡಿ, ಮನೆಮನೆಗೆ ಮಾರಿ ಬದುಕು ಕಟ್ಟಿಕೊಂಡಿದ್ದಾರೆ. ಬರೋಬ್ಬರಿ 20 ವರ್ಷದಿಂದ ಕಡಿಮೆ ಬೆಲೆಗೆ ಇಡ್ಲಿ ಹಾಗೂ ಶೇಂಗಾ, ಕಡ್ಲೆ ಚಟ್ನಿ  ಮಾರುತ್ತಿದ್ದರೂ, ಪ್ರಚಾರ ಬಯಸದೆ  ಕಾಯಕ ನಿಷ್ಠರಾಗಿದ್ದಾರೆ. ನಾಲ್ಕಾಣೆಗೆ ಒಂದರಂತೆ ಇಡ್ಲಿ ವ್ಯಾಪಾರ ಆರಂಭಿಸಿ, ಇತ್ತೀಚಿನವರೆವಿಗೂ 2 ರೂ.ಗೆ 3 ಇಡ್ಲಿ ಕೊಡುತ್ತಿದ್ದ ಕಾಂತಮ್ಮ, ಬೆಲೆ ಏರಿಕೆಯ ಹೊಡೆತ ತಾಳಲಾರದೆ 1 ರೂ.ಗೆ 1 ಇಡ್ಲಿ ಕೊಡುತ್ತಿದ್ದಾರೆ. ಆ ಮೂಲಕ ರೈತರು, ಕೂಲಿಕಾರ್ಮಿಕರು, ಬಡವರ ಹಸಿವು ನೀಗಿಸುತ್ತಿದ್ದಾರೆ.

ಕಾಂತಮ್ಮ ಅರಸೀಕೆರೆ ತಾಲೂಕಿನ ಕುರುವಂಕ ಗ್ರಾಮದವರು. ಹುಳಿಯಾರಿನ ತಮ್ಮಯ್ಯ ಎಂಬುವರನ್ನು 24 ವರ್ಷಗಳ ಹಿಂದೆ ಮದುವೆಯಾಗಿ ಹುಳಿಯಾರಿನಲ್ಲಿ ನೆಲೆಸಿದ್ದಾರೆ. ಗಂಡ ಕುಡಿತಕ್ಕೆ ದಾಸನಾಗಿ ಸಂಸಾರ ನಿರ್ವಹಣೆಗೆ ಅಸಹಕಾರ ತೋರಿದಾಗ, ಈಕೆ ಕಂಡು ಕೊಂಡ ಮಾರ್ಗವೇ ಇಡ್ಲಿ ವ್ಯಾಪಾರ.

ಕರೆ ಮಾಡಿದರೆ ಮನೆ ಬಾಗಿಲಿಗೇ ಇಡ್ಲಿ: 36 ಗುಂಡಿಡ್ಲಿ ಮಾಡುವ ಪಾತ್ರೆ ಖರೀದಿಸಿ ಸೌದೆ ಒಲೆಯಿಂದ ಇಡ್ಲಿ ಮಾಡಿ, ವ್ಯಾಪಾರ ಆರಂಭಿಸಿದರು. ಆರಂಭದಲ್ಲಿ ಬೀದಿ ಬೀದಿಗಳಲ್ಲಿ ತಲೆ ಮೇಲೆ ಇಡ್ಲಿ ಹೊತ್ತು ಕೂಗುತ್ತಾ ವ್ಯಾಪಾರ ಮಾಡಿದರು. ಕಾಂತಮ್ಮನ ಇಡ್ಲಿ ರುಚಿಗೆ ಫಿದಾ ಆಗಿ ಆರ್ಡರ್‌ ಕೊಟ್ಟು ಖರೀದಿಸುವ  ಗ್ರಾಹಕರು ಸೃಷ್ಟಿಯಾದರು.  8660080460, 7899363934 ನಂಬರ್‌ಗೆ ಕರೆ ಮಾಡಿ, ಕನಿಷ್ಟ 30 ಇಡ್ಲಿ ಆರ್ಡರ್‌ ಕೊಟ್ಟರೆ ಸಾಕು ಹತ್ತು  ನಿಮಿಷದಲ್ಲಿ  ಮನೆಗೆ ಬಿಸಿ ಇಡ್ಲಿ ತಲುಪುತ್ತದೆ!

ಮಕ್ಕಳನ್ನು ಸಾಕಿ, ಓದಿಸಿ, ಮದುವೆ: ಕಾಂತಮ್ಮನ ಕಾಯಕ ನಿಷ್ಠೆಗೆ ಇಡ್ಲಿ ವ್ಯಾಪಾರ ಕೈ ಹಿಡಿದಿದೆ. ಸ್ವಾವಲಂಬಿ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾದ ಕಾಂತಮ್ಮ  ಇಡ್ಲಿ ವ್ಯಾಪಾರದಿಂದಲೇ ಗಂಡ ಮಕ್ಕಳನ್ನು ಸಾಕಿದ್ದಾರಲ್ಲದೆ, ಮಕ್ಕಳನ್ನು ಓದಿಸಿ, ಮದುವೆ ಮಾಡಿ, ಬಾಣಂತನ ಸಹ ಮಾಡಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ  ಸ್ಟವ್‌ ಆರಿದ್ದು ಬಿಟ್ಟರೆ, ಇಲ್ಲಿಯವರೆಗೂ ಇಡ್ಲಿ ಬೇಯುತ್ತಲೇ ಇದೆ. ಕಡಿಮೆ ಬೆಲೆಗೆ ಗ್ರಾಹಕರ ಹೊಟ್ಟೆ ತುಂಬಿಸುತ್ತಲೇ ಇದೆ.

Advertisement

ಲಾಭದ ನಿರೀಕ್ಷೆ ಇಲ್ಲ :

“ಹಣ ಮಾಡಬೇಕು ಎಂದು ನಾನು ಇಡ್ಲಿ ವ್ಯಾಪಾರ ಆರಂಭಿಸಿಲ್ಲ. ಜೀವನ ನಿರ್ವಹಣೆ ಗಾಗಿ ಇಡ್ಲಿ ಮಾರುತ್ತಿದ್ದೇನೆ.  ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದರೂ ಅತ್ಯಂತ ಕಡಿಮೆ ಬೆಲೆಗೆ ಇಡ್ಲಿ ಕೊಡುತ್ತಿದ್ದೇನೆ. ಇದರಿಂದಲೇ ಮಕ್ಕಳ ಮದುವೆ ಮಾಡಿ, ಬಾಣಂತನ ಸಹ ಮಾಡಿ ದ್ದೇನೆ. ಈಗೇನಿದ್ದರೂ ಸೋರುವ ಮನೆ ಯನ್ನು ರೆಡಿ ಮಾಡಿಕೊಳ್ಳಬೇಕು ಅಷ್ಟೇ. 1 ರೂ.ಗೆ ಇಡ್ಲಿ ಕೊಟ್ಟರೂ ನನಗೆ ನಷ್ಟವಾಗುತ್ತಿಲ್ಲ. ಬದಲಾಗಿ ದಿನಕ್ಕೆ 300-400 ರೂ. ದುಡಿಯುತ್ತಿದ್ದೇನೆ’ ಎನ್ನುತ್ತಾರೆ ಕಾಂತಮ್ಮ.

ಕಾಂತಮ್ಮ ಮಾಡುವ ಇಡ್ಲಿ ರುಚಿಗೆ ಫಿದಾ ಆಗಿದ್ದೇವೆ. 10 ರೂ. ಕೊಟ್ಟು 10 ಇಡ್ಲಿ ತಿಂದರೆ ಹೊಟ್ಟೆ ತುಂಬುತ್ತದೆ. ಬಡವರ ಪಾಲಿಗಂತೂ ಇದು ಇಂದಿರಾ ಕ್ಯಾಂಟಿನ್‌ ಅನ್ನಬಹುದು. ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆವಿಗೂ ಬಿಸಿ ಬಿಸಿ ಇಡ್ಲಿ ಕೊಡುತ್ತಾರೆ.-ಎಚ್‌.ಆರ್‌.ಧನುಷ್‌, ಸ್ಥಳೀಯ ನಿವಾಸಿ

– ಎಚ್‌.ಬಿ.ಕಿರಣ್‌ ಕುಮಾರ್‌

 

Advertisement

Udayavani is now on Telegram. Click here to join our channel and stay updated with the latest news.

Next