ಹುಳಿಯಾರು: ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ ಗಡಿ ಗ್ರಾಮಗಳ ಲಕ್ಷಾಂತರ ಜನ ಸಾಮಾನ್ಯರಿಗೆ ಐದು ದಶಕಗಳಿಂದ ಆರೋಗ್ಯ ಸೇವೆ ಒದಗಿಸುತ್ತಿರುವ ಹುಳಿಯಾರು ಪ್ರಾಥಮಿಕಆರೋಗ್ಯ ಕೇಂದ್ರ ಸಮುದಾಯ ಆರೋಗ್ಯಕೇಂದ್ರವಾಗಿ ಮೇಲ್ದರ್ಜೆಗೇರುವುದು ಯಾವಾಗ ಎನ್ನುವ ಪ್ರಶ್ನೆ ಕಳೆದ ದಶಕಗಳಿಂದಲೂ ಕೇವಲ ಪ್ರಶ್ನೆಯಾಗಿಯೇ ಉಳಿದಿದೆ.
ಈಗ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಇತ್ತ ಗಮನ ಹರಿಸಿರುವುದು ಸಾರ್ವಜನಿಕವಲಯದಲ್ಲಿ ಆಶಾಭಾವನೆ ಚಿಗುರೊಡೆದಿದೆ. ಹುಳಿಯಾರು ಪಟ್ಟಣ ರಾಜ್ಯದಲ್ಲಿಯೇ ಅತೀವೇಗವಾಗಿ ಬೆಳೆಯುತ್ತಿರುವ ಹೋಬಳಿ ಕೇಂದ್ರಗಳಲ್ಲಿ ಒಂದಾಗಿದೆ. ಪ್ರಮುಖ ವ್ಯಾಪಾರ ಕೇಂದ್ರವಾಗಿ ಹೊರಹೊಮ್ಮಿ ಪ್ರತಿದಿನ ಸಾವಿರಾರು ಜನರು ಬಂದುಹೋಗುವ ಸ್ಥಳವಾಗಿದೆ. ಹಾಗಾಗಿ ಸಹಜವಾಗಿಯೇ ಇಲ್ಲಿನ ಆಸ್ಪತ್ರೆಗೆ ಹಿಂದೆಂದಿಗಿಂತಲೂ ಕಳೆದ ಐದಾರು ವರ್ಷಗಳಿಂದ ಹೊರ ರೋಗಿಗಳು ದಾಖಲಾಗು ತ್ತಿರುವ ಕಾರಣ ಇಲ್ಲಿನ ವೈದ್ಯಕೀಯ ಸಿಬ್ಬಂದಿ ಮೇಲೆ ಬೀಳುತ್ತಿರುವ ಒತ್ತಡವನ್ನು ಕಂಡ ಜನತೆ ಮೇಲ್ದರ್ಜೆಗೇರುವ ಜರುರತ್ತಿನ ಬಗ್ಗೆ ನಿರೀಕ್ಷೆಯಿಟ್ಟು ಕೊಂಡಿದ್ದಾರೆ. ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೋ ಅಥವಾ ಜನಪ್ರತಿನಿಧಿಗಳ ಮೌನವೋ ಏನೋ ಇಲ್ಲಿನ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಬೇಡಿಕೆ ಇನ್ನೂ ಈಡೇರಿಲ್ಲ. ಹೋಗಲಿ ಇಲ್ಲಿನ ರೋಗಿಗಳ ದಾಖಲಿಗೆ ಅಗತ್ಯವಾದ ಸಮರ್ಪಕ ಸಿಬ್ಬಂದಿ, ಔಷಧಿಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯವೂ ಸಹ ಇಲ್ಲದಾಗಿದ್ದು ಇಲ್ಲೊಂದು ಸರ್ಕಾರಿ ಆಸ್ಪತ್ರೆ ಇದೆಯೆಂಬುದೇ ಜನರು ಮರೆಯುವಂತ್ತಾಗಿದೆ. ಹಾಗಾಗಿಯೇ ಆಸ್ಪತ್ರೆ ಮೇಲ್ದರ್ಜೆಗೇರಿಸುವಂತೆ ಅನೇಕ ಧರಣಿ, ಪ್ರತಿಭಟನೆಗಳು ಸಹ ನಡೆದಿದೆ.
ಕಾಯಂ ವೈದ್ಯರಿಲ್ಲ: ಇಲ್ಲಿ ಎರಡು ರಾಷ್ಟೀಯ ಹೆದ್ದಾರಿ ಮೂರು ಜಿಲ್ಲೆಗಳ ಆಸ್ಪತ್ರೆಗಳಿದ್ದರೂ ಸಹಅಲ್ಲಿನ ವೈದ್ಯರು ಕೇಂದ್ರ ಸ್ಥಾನದಲ್ಲಿರದ ಕಾರಣ ರೋಗಿಗಳ ದಂಡು ಹುಳಿಯಾರು ಆಸ್ಪತ್ರೆ ಕಡೆಸಹಜವಾಗಿ ಮುಖಮಾಡುತ್ತಾರೆ. ಇಲ್ಲಿ ಗುತ್ತಿಗೆ ಆಧಾರದ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಿಬ್ಬಂದಿ ಸಮಸ್ಯೆ: ಒಬ್ಬರು ಎಂಬಿಬಿಎಸ್ ವೈದ್ಯ ಸೇರಿದಂತೆ ಲ್ಯಾಬ್ ಟೆಕ್ನಿಷಿಯನ್, ಸ್ಟಾಪ್ ನರ್ಸ್ ಗಳುಹಾಗೂ ಡಿ ಗ್ರೂಫ್ ನೌಕರರು ಸೇರಿದಂತೆ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ಕಫಾ, ಪರೀಕ್ಷೆ, ಮಲೇರಿಯ, ಟೈಫಾಯಿಡ್ ಸೇರಿದಂತೆ ತುರ್ತು
ಅಗತ್ಯ ಪರೀಕ್ಷಾ ಸೌಲಭ್ಯ ಇಲ್ಲದಾಗಿದೆ. ಸಿಬ್ಬಂದಿಯ ಕೊರತೆಯಿಂದ ಹೆರಿಗೆಗೆ ಬರುವವರೇ ಇಲ್ಲದಾಗಿ ದ್ದಾರೆ. ಇನ್ನೂ ಔಷಧಿಗಾಗಿ ವಾರ್ಷಿಕ ಬರುವ ಅನುದಾನ ತೀರಾ ಕಡಿಮೆಯಿದ್ದು ನಿತ್ಯ ಬರುವ ಸಾವಿರಾರು ಮಂದಿ ರೋಗಿಗಳಿಗೆ ಏನಕ್ಕೂ ಸಾಲದಾಗುತ್ತಿದೆ.ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಹುಳಿಯಾರು ಆಸ್ಪತ್ರೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಹುಳಿಯಾರು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಅನುದಾನ ಒದಗಿಸುವಂತೆಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ಸಾರ್ವಜನಿಕರಲ್ಲಿ ಹೊಸ ಭರವಸೆ ಮೂಡಿದೆ.