ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ತುಂಬಿದ ಹೂಳು ತೆಗೆಯುವ ಸಾಂಕೇತಿಕ ಹೂಳಿನ ಜಾತ್ರೆ ಗುರುವಾರ ನಡೆಯಿತು. ಗುಂಡಾ ಅರಣ್ಯ ಪಕ್ಕದ ಗಾಳೆಮ್ಮನ ಗುಡಿ ಗ್ರಾಮದ ಹಿಂದೆ ಹೂಳೆತ್ತುವ ಜಾತ್ರೆಗೆ ಚಾಲನೆ ನೀಡಲಾಯಿತು. ವಿವಿಧ ಮಠಾಧೀಶರು, ನೂರಾರು ರೈತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಐದು ಜೆಸಿಬಿ ಬಳಸಿ ಹೂಳನ್ನು ತೆಗೆಯಲಾಯಿತು. ನಂತರ ಸುಮಾರು 50 ಟ್ರ್ಯಾಕ್ಟರ್‌ಗಳಲ್ಲಿ ಹೂಳನ್ನು ರೈತರ ಜಮೀನುಗಳಿಗೆ ಸಾಗಿಸಲಾಯಿತು.
ಹೂಳೆತ್ತುವ ಜಾತ್ರೆಗೆ ಚಾಲನೆ ನೀಡಿದ ಲಿಂಗನಾಯಕನ ಹಳ್ಳಿಯ ಮಠದ ಚನ್ನವೀರ ಸ್ವಾಮೀಜಿ ಮಾತನಾಡಿ, ರಾಜಕಾರಣಿಗಳು ಕಾವೇರಿ ನೀರಿನ ಸಮಸ್ಯೆ ಬಗೆಹರಿಸಲು ಮುತುವರ್ಜಿ ವಹಿಸುತ್ತಾರೆ. ಆದರೆ ತುಂಗಭದ್ರಾ ಜಲಾಶಯದ ಕುರಿತು ಎಲ್ಲೂ ಮಾತನಾಡುವುದಿಲ್ಲ ಎಂದರು.
ಚಾನೆಕೋಟೆ ಮಠದ ಡಾ| ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸರಕಾರದ ಗಮನ ಸೆಳೆಯಲು ಈ ಕಾರ್ಯವನ್ನು ಮಾಡಲಾಗುತ್ತಿದೆ. ತುಂಗಭದ್ರಾ ಜಲಾಶಯ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಜೀವನಾಡಿಯಾಗಿದೆ. ಹೀಗಾಗಿ ಬಜೆಟ್‌ನಲ್ಲಿ ಹೂಳು ತೆಗೆಯಲು ಅನುದಾನ ಮೀಸಲಿಟ್ಟು ವೈಜ್ಞಾನಿಕ ಪದ್ಧತಿಯಿಂದ ಹೂಳನ್ನು ತೆಗೆಯಲು ಮುಂದಾಗಬೇಕೆಂದು ಆಗ್ರಹಿಸಿದರು. ಸರಕಾರ ಸರಿಯಾದ ಯೋಜನೆಯನ್ನು ಹಾಕಿಕೊಂಡರೆ ವರ್ಷಕ್ಕೆ ಒಂದು ಟಿಎಂಸಿ ಮಣ್ಣು ತೆರವು ಮಾಡಬಹುದು. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು. ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮಾತನಾಡಿ, ಜಲಾಶಯಕ್ಕೆ 65 ವರ್ಷ ಇತಿಹಾಸವಿದೆ. ನೀರಿನ ಮೂಲಕ ಹರಿದು ಮಣ್ಣು ಜಲಾಶಯದಲ್ಲಿ ಸಂಗ್ರಹವಾಗಿದೆ. ಹೀಗಾಗಿ 33 ಟಿಎಂಸಿ ನೀರಿನ ಮಟ್ಟ ಕುಸಿದು ಹೋಗಿದೆ ಎಂದು ತಿಳಿಸಿದರು.
ಜಲಾಶಯಕ್ಕೆ ತುಂಗಾದಿಂದ ನೀರು ಹರಿದು ಬರುತ್ತಿದೆ. ಆದರೆ, ಭದ್ರಾದಿಂದ ನೀರು ಹರಿದು ಬರುತ್ತಿಲ್ಲ. ಅಲ್ಲದೇ, ಜಲಾಶಯದ ನೀರು ಚಿತ್ರದುರ್ಗ ಜಿಲ್ಲೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಹೀಗಾಗಿ ನದಿ ಜೋಡಣೆ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಸ್ವಾಮೀಜಿ, ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಮಹೇಶ್ವರ ಸ್ವಾಮೀಜಿ, ಶಂಕರ ಸ್ವಾಮೀಜಿ, ವೀರಾಂಜನೇಯ ದೇವರು, ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಪ್ಪ ತಾತಾನವರು, ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ರೈತ ಮುಖಂಡರು ಇದ್ದರು.