ಬೆಂಗಳೂರು: ಭರ್ತಿಯಾಗಿದ್ದ ಹುಳಿಮಾವು ಕೆರೆ ಒಡೆದು ಸುತ್ತಲಿನ ನೂರಾರು ಕುಟುಂಬಗಳು ಜಲಾವೃತವಾದ ಘಟನೆ ರವಿವಾರ ಸಂಜೆ ನಡೆದಿದ್ದು, ಸದ್ಯ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.
ಕೆರೆ ಒಡೆದ ಕಾರಣ ಹುಳಿಮಾವು, ಅರೆಕೆರೆ ವಾರ್ಡ್ ಗಳು ದ್ವೀಪದಂತಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಕೆರೆ ಏರಿ ಒಡೆದ ಭಾಗವನ್ನು ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚಲಾಗಿದೆ. ಇದಕ್ಕೆ ಮೆಟ್ರೋ ಸಹಕಾರವೂ ನೀಡಿದ್ದರಿಂದ ಕಾರ್ಯಾಚರಣೆಗೆ ಸಹಕಾರವಾಯಿತು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಮೆಟ್ರೋ ಲಾರಿಗಳನ್ನು ಬಳಸಿಕೊಂಡು ಏರಿ ಒಡೆದ ಭಾಗದಲ್ಲಿ ಮಣ್ಣು ಮುಚ್ಚಲಾಗಿದೆ.
ಕೆರೆ ಏರಿ ಒಡೆದು ಉಂಟಾಗಿರುವ ನಷ್ಟ ಅಂದಾಜಿಸಲು ಬಿಬಿಎಂಪಿಯ ಕಂದಾಯ ಅಧಿಕಾರಿಗಳು, ಎಂಜಿನಿಯರ್ ಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಅನಾಹುತಕ್ಕೆ ಸಂಬಂಧಿಸಿದಂತೆ ಬಿಡಿಎ ಮತ್ತು ಬಿಬಿಎಂಪಿ ಅಧಿಕಾರಿಗಳ ಜತೆ ಮೇಯರ್ ಎಂ.ಗೌತಮ್ ಕುಮಾರ್ ಸಭೆ ನಡೆಸುವ ಸಾಧ್ಯತೆಯಿದೆ.