ಅಳ್ನಾವರ: ಅದೊಂದು ಮಧ್ಯರಾತ್ರಿ ಸಮಯ. ಒಂದೇ ಸಮನೆ ಏರುತ್ತಿರುವ ಹಳ್ಳದ ನೀರು. ಭೋರ್ಗರೆಯುತ್ತಿರುವ ನೀರಿನ ಸೆಳೆವಿನ ಸಪ್ಪಳ. ಇನ್ನೇನು ಮನೆಯೊಳಗೆ ನುಗ್ಗಲು ಹತ್ತಿರಕ್ಕೆ ಬರುತ್ತಿರುವ ನೀರು. ಹೇಗಾದರೂ ಮಾಡಿ ಜೀವ ಉಳಿಸಿಕೊಳ್ಳುವ ಚಡಪಡಿಕೆ. ನೆತ್ತಿಯ ಮೇಲೆ ಧೋ ಎಂದು ಸುರಿಯುತ್ತಿರುವ ಮಳೆ. ಕೈಯಲ್ಲಿ ಮಕ್ಕಳು ಮರಿಗಳು. ಜೀವ ಉಳಿದರೆ ಸಾಕು ಎನ್ನುವ ಅವಸರದಲ್ಲಿ ಸುರಕ್ಷಿತ ಸ್ಥಳಗಳಿಗೆ ಓಡುತ್ತಿರುವ ಜನರು..
ಇದು ಹಿಂದಿನ ವರ್ಷದ ಮಳೆಗಾಲದಲ್ಲಿ ಹುಲಿಕೇರಿ ಕೆರೆ ಒಡೆಯುವ ಭೀತಿಯಿಂದ ಅಳ್ನಾವರದಲ್ಲಿ ಕಂಡುಬಂದ ಆತಂಕದ ಕ್ಷಣಗಳು. ಮತ್ತೂಮ್ಮೆ ಇಂತಹ ಪರಿಸ್ಥಿತಿ ಮರುಕಳಿಸದಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿರುವ ಜನರು ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.
ಕಳೆದ ಮಳೆಗಾಲದಲ್ಲಿ ಭಾರೀ ಮಳೆಗೆ ಹುಲಿಕೇರಿ ಕೆರೆ ಹಾನಿಗೆ ಒಳಗಾಗಿದ್ದರಿಂದ ಕೆರೆ ಒಡೆಯುವ ಭೀತಿ ಪಟ್ಟಣದ ಜನರಲ್ಲಿ ಆವರಿಸಿ ಜೀವ ಉಳಿಸಿಕೊಳ್ಳಲು ಬೇರೆಡೆ ಸ್ಥಳಾಂತರಗೊಂಡಿದ್ದರು. ಆಗ ಹಾನಿಗೊಳಗಾಗಿ ಒಡೆದಿದ್ದ ಕೆರೆಯ ಒಡ್ಡನ್ನು ಮರು ನಿರ್ಮಾಣ ಮಾಡಿಲ್ಲ. ಇದರಿಂದಈಗ ಮತ್ತೂಂದು ಮಳೆಗಾಲ ಹತ್ತಿರಕ್ಕೆ ಬರುತ್ತಿದ್ದಂತೆ ಮತ್ತೇನು ಅನಾಹುತ ಕಾದಿದೆಯೋ ಎನ್ನುವ ಆತಂಕ ಪಟ್ಟಣ ಹಾಗೂ ತಾಲೂಕಿನ ಹುಲಿಕೇರಿ ಗ್ರಾಮಸ್ಥರಲ್ಲಿ ಕಾಡುತ್ತಿದೆ.
ಕಳೆದ ಮಳೆಗಾಲದಲ್ಲಿ ಉಂಟಾದ ನೆರೆ ಪ್ರವಾಹಕ್ಕೆ ಹುಲಿಕೇರಿ ಕೆರೆ ಒಡ್ಡು ಒಡೆಯುವ ಹಂತಕ್ಕೆ ತಲುಪಿ ಸ್ವಲ್ಪದರಲ್ಲಿಯೇ ಭಾರಿ ಅನಾಹುತ ತಪ್ಪಿ ಪಟ್ಟಣದ ಜನರು ನಿಟ್ಟುಸಿರು ಬಿಡುವಂತಾಗಿತ್ತು. ಆಗ ಕೆರೆಯ ಒಡ್ಡಿಗೆ ಉಂಟಾದ ಹಾನಿಯನ್ನು ಇನ್ನೂವರೆಗೂ ಸರಿ ಪಡಿಸಿಲ್ಲ. ಹೀಗಾಗಿ ಬರುವ ಮಳೆಗಾಲದಲ್ಲಿ ಕೆರೆ ಒಡೆಯುವುದು ಮಾತ್ರ ಶತಸಿದ್ಧವೆನ್ನುತ್ತಿರುವ ಜನರು ಕೂಡಲೇ ಇಲಾಖೆ ಇದರ ಬಗ್ಗೆ ಗಮನ ಹರಿಸಿ ದುರಸ್ತಿ ಕೆಲಸಕ್ಕೆ ಚಾಲನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗೆ ಶಿವಾಜಿ ಪತ್ರ : ಹೆಚ್ಚುವರಿ ನೀರು ಹರಿದು ಹೋಗಲು ನಿರ್ಮಿಸಿದ್ದ ಗೋಡೆ ಸಂಪೂರ್ಣ ಒಡೆದು ಹಾಳಾಗಿದೆ. ಕಳೆದ ಸಾಲಿನ ಪ್ರವಾಹದಲ್ಲಿ ಹಳ್ಳದ ನೀರು ಬಡಾವಣೆಗಳಿಗೆ ನುಗ್ಗಿ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳು ಇನ್ನೂ ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಅನೇಕರ ಜಮೀನುಗಳು ನೀರಿಗೆ ಕೊಚ್ಚಿ ಹೋಗಿದ್ದವು. ಕೆರೆ ದುರಸ್ತಿ ಕೆಲಸ ಮಳೆಗಾಲ ಪ್ರಾರಂಭಕ್ಕೂ ಮೊದಲು ಮುಗಿಸದಿದ್ದರೆ ಜನರ ಸ್ಥಳಾಂತರ ಮಾಡುವುದು ಅನಿವಾರ್ಯವಾಗಲಿದೆ ಎಂದು ಹುಲಿಕೇರಿ ಗ್ರಾಮದ ಶಿವಾಜಿ ಡೊಳ್ಳಿನ ಜಿಲ್ಲಾಧಿಕಾರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಹುಲಿಕೇರಿ ಕೆರೆಯ ಒಡ್ಡಿನ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಕೆಲವೊಂದು ತಾಂತ್ರಿಕ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ಆದಷ್ಟು ಶೀಘ್ರ ಕೆಲಸ ಮಾಡಿ ಮುಗಿಸಲು ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ.
-ಸಿ.ಎಂ. ನಿಂಬಣ್ಣವರ, ಶಾಸಕ
-ಎಸ್. ಗೀತಾ