ಕನಕಗಿರಿ: ಹಳೆ ವೈಷಮ್ಯ ಹಾಗೂ ಜಾತಿ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಈ ಹಿಂದೆ ಇಬ್ಬರು ಸಾವನ್ನೊಪ್ಪಿದ್ದು, ಓರ್ವ ಗಾಯಗೊಂಡಿರುವ ಘಟನೆ ಸುದ್ದಿಯಲ್ಲಿತ್ತು, ಗ್ರಾಮಕ್ಕೆ ಹಲವಾರು ಅಧಿಕಾರಿಗಳು ಸೇರಿದಂತೆ ರಾಜಕೀಯ ಮುಖಂಡರು ಭೇಟಿ ನೀಡುತ್ತಿದ್ದು, ಹಾಗೆಯೇ ಪ್ರಕರಣದ ಸತ್ಯ ಸತ್ಯತೆ ತಿಳಿದುಕೊಳ್ಳಲು ಪ್ರಗತಿಪರ ಚಿಂತಕರು,ಸತ್ಯ ಶೋಧನಾ ಸಮಿತಿ ಸೇರಿದಂತೆ ಹೋರಾಟಗಾರರ ತಂಡ ಶುಕ್ರವಾರ ಭೇಟಿ ನೀಡಿ ಮೃತ ಪಟ್ಟ ಕುಟುಂಬಗಳಿಗೆ ಸಾಂತ್ವನದ ಜೊತೆಗೆ ಗಲಾಟೆ ಕುರಿತು ಮಾಹಿತಿ ಪಡೆದುಕೊಂಡರು.
ಈ ಕುರಿತು ಮೃತ ಹಾಗೂ ಗಾಯಾಳುಗಳ ಕುಟುಂಬದ ಜೊತೆ ಮಾತುಕತೆ ನಡೆಸಿದ ಹೈಕೋರ್ಟ್ ವಕೀಲ ಕ್ಲಿಂಪ್ಟನ್ ರೋಜಾರೀಯಾ, ಪಿಯುಸಿಎಲ್ ಸಂಘಟನೆ ರಾಜ್ಯಾಧ್ಯಕ್ಷ ಅರವಿಂದ್ ನಾರಾಯಣ, ಎಆಯ್‌ಎಲ್‌ಜೆ ಸಂಘಟನೆ ರಾಷ್ಟೀಯ ಸಮಿತಿ ಖಚಾಂಚಿ ಮಹ್ಮದ್ ಆಸೀಫ್ ಮಾತನಾಡಿ, ತಪ್ಪು ಯಾರಿಂದಲೇ ಆಗಿರಲಿ ಪ್ರಾಣ ಹೋಗುವ ಮಟ್ಟಿಗೆ ದ್ವೇಷ ಬೆಳೆಸುವುದು ಮಾನವೀಯತೆಯ ಲಕ್ಷಣವಲ್ಲ. ಈ ಗ್ರಾಮದಲ್ಲಿ ಶಾಂತಿ ನೆಲೆಸಿ ಸೌಹಾರ್ದತೆಯಿಂದ ಜೀವನ ನಡೆಸುವ ಮೂಲಕ ಎಲ್ಲಾ ಸಮುದಾಯದ ಜನರು ಸಹೋದರರಂತೆ ಬಾಳಿ ಬದುಕಬೇಕು ಎಂದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಮೃತ ಕುಟುಂಬಗಳಿಗೆ ತಲಾ 50 ಲಕ್ಷ ಪರಿಹಾರ ಹಾಗೂ ಗಾಯಾಳು ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸಮುದಾಯಗಳ ನಡುವೆ ಮುಂಬರುವ ದಿನಗಳಲ್ಲಿ ವೈಷಮ್ಯ ಬೆಳೆಯದಂತೆ ವಿವಿಧ ಸಮುದಾಯಗಳ ಸ್ವಾಮೀಜಿಗಳು, ರಾಜಕೀಯ ಮುಖಂಡರು ಸೇರಿದಂತೆ ಪ್ರಮುಖರು ಸಾಮಾನ್ಯ ಜನರಿಗೆ ಮನವಿ ಮಾಡಲಾಗುವುದು ಎಂದರು.
ಕಾನೂನಿನ ಪ್ರಕಾರ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ಒದಗಿಸುವ ಕಾರ್ಯ ನಡೆದಿದೆ. ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಪೋಲಿಸ್ ಅಧಿಕಾರಿಗಳು ಗ್ರಾಮದಲ್ಲಿ ಶಾಂತಿ ಸಭೆಗಳನ್ನು ನಡೆಸುವ ಮೂಲಕ ನೈಜ ವಾತಾವರಣವನ್ನು ತರಲು ಪ್ರಯತ್ನಿಸಬೇಕು. ಗ್ರಾಮದ ಜನರು, ವಿಧ್ಯಾರ್ಥಿಗಳು, ಮಕ್ಕಳು , ವ್ಯಾಪ್ಯಾರಸ್ಥರು ಭಯಪಡದೆ ಜನಸಾಮಾನ್ಯವಾಗಿ ಜೀವನ ನಡೆಸಬೇಕು. ಎಂದು ಸಲಹೆ ನೀಡಿದರು.
ಮೃತ ಕುಟುಂಬದ ಸದಸ್ಯರು ಮಾತನಾಡಿ, ಈ ಹಿಂದೆ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಆಗಮಿಸಿದಾಗ ಆಹಾರ ಕಿಟ್ ನೀಡುವಂತೆ ಭರವಸೆ ನೀಡಿದ್ದರು. ಆದರೆ ನಮ್ಮ ಮನೆಗಳಿಗೆ ಇದುವರೆಗೂ ಯಾವುದೇ ರೀತಿಯ ಆಹಾರ ಸಾಮಾಗ್ರಿಗಳು ತಲುಪಿಲ್ಲ. ಹಾಗಾಗಿ ಅಧಿಕಾರಿಗಳ ಜೊತೆಗೆ ಚರ್ಚಿಸಿ ಆಹಾರ ಕಿಟ್‌ಗಳನ್ನು ನೀಡುವಂತೆ ಮನವಿ ಮಾಡಿಕೊಂಡರು.
ಈ ವೇಳೆಯಲ್ಲಿ ಮಹಿಳಾ ಸಂಘಟನೆ ಸದಸ್ಯೆ ಮನು, ಪಿಯುಸಿಎಲ್ ಸಂಘಟನೆ ಜಿಲ್ಲಾಧ್ಯಕ್ಷ ಮಹಾಂತೇಶ ಕೊತಬಾಳ, ವಿವಿಧ ಸಂಘಟನೆಗಳ ಮಖಂಡರಾದ ಬಸವರಾಜ ಶೀಲವಂತರ್, ಕ್ಲೀಪ್ಟನ್ ಕರಿಯಪ್ಪ, ಡಿಎಚ್ ಪೂಜಾರ, ಆನಂದ್ ಭಂಡಾರಿ, ಕನಕಪ್ಪ ದೊಡ್ಡಮನಿ, ರಾಮಣ್ಣ ಜೋಡಿ, ಭಾರದ್ವಾಜ್, ಪಾಮಣ್ಣ ಅರಳಿಗನೂರು, ಕೆಂಚಪ್ಪ ಸೇರಿದಂತೆ ಇತರರು ಇದ್ದರು.