Advertisement

ತಪೋ ಧಾಮವೀ ತಪ್ಪಲು…

09:59 AM Sep 22, 2019 | mahesh |

ಕೆಲವು ದೈವಿಕ ಕ್ಷೇತ್ರಗಳ ದರುಶನದಿಂದ ಎರಡು ರೀತಿಯ ನೆಮ್ಮದಿ ಸಿಗುತ್ತದೆ. ಒಂದು, ದೇವರ ಉಪಾಸನೆಯಿಂದ ಸಿಕ್ಕ ಸಂತೃಪ್ತಿ; ಮತ್ತೂಂದು, ಅಲ್ಲಿನ ರಮ್ಯ ಪರಿಸರದಲ್ಲಿ ಸಿಗುವಂಥ ಖುಷಿ ಅಥವಾ ಆತ್ಮತೃಪ್ತಿ. ಹಾಗೆ ಉಭಯ ಲಾಭ ನೀಡುವಂಥ ಪವಿತ್ರ ತಾಣಗಳಲ್ಲಿ ಒಂದು, ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ಹಾದಿಯಲ್ಲಿರುವ, ಹುಲಿಗೆಮ್ಮನ ಕೊಳ್ಳ. ಇದು, ಭಕ್ತಿಯ ಜತೆಗೆ, ಮನಸ್ಸಿಗೆ ನೆಮ್ಮದಿ ನೀಡುವ ತಾಣ.

Advertisement

ಏಕಶಿಲೆಯ ಬೃಹತ್‌ ಬಂಡೆ. ಮಳೆಗಾಲ ಬಂತೆಂದರೆ, ಇಲ್ಲಿ ಜಲಪಾತಗಳದ್ದೇ ಮಂತ್ರೋಚ್ಛಾರ. ಋಷಿ ಮುನಿಗಳು ತಪೋಗೈದ ಧಾಮವೆಂದು ಇದನ್ನು ನಂಬಲಾಗಿದೆ. 5ನೇ ಶತಮಾನದಲ್ಲಿ ಚಾಲುಕ್ಯರ ದೊರೆಗಳು ಇಲ್ಲಿಯ ತಂಗುತ್ತಿದ್ದರು ಎನ್ನುತ್ತದೆ, ಇತಿಹಾಸ. ಅವರೆಲ್ಲ ಇಲ್ಲಿಯೇ ವಾಸವಿದ್ದು, ಬಾದಾಮಿ, ಪಟ್ಟದಕಲ್ಲು, ಐಹೊಳೆಯ ದೇಗುಲಗಳನ್ನು ಕಟ್ಟಿಸಿದರೆಂದು ಹೇಳಲಾಗುತ್ತದೆ. ಚಾಲುಕ್ಯರ ಇಮ್ಮಡಿ ಪುಲಿಕೇಶಿಯ ಮನಸ್ಸಿಗೆ ನೆಮ್ಮದಿ ನೀಡುತ್ತಿದ್ದ ತಾಣಗಳಲ್ಲಿ ಇದೂ ಒಂದಾಗಿತ್ತು ಎಂಬ ಮಾತೂ ಇದೆ. ಬಂಡೆಯ ತಪ್ಪಲಾಗಿದ್ದರಿಂದ, ಇಲ್ಲಿ ಈ ಹಿಂದೆ ಹುಲಿಗಳು ಹೆಚ್ಚು ವಾಸವಿದ್ದವಂತೆ. ಆ ಕಾರಣ, ಇಲ್ಲಿಗೆ “ಹುಲಿಗೆಮ್ಮನ ಕೊಳ್ಳ’ ಎಂಬ ಹೆಸರು ಬಂತು.

ಹುಲಿಗೆಮ್ಮ, ಕೋಣಮ್ಮ ಹಾಗೂ ಲಕ್ಷ್ಮಮ್ಮ ದೇವಿಯರ ಸಂಗಮ ಸ್ಥಳವಿದು. ಕೊಳ್ಳದ ಎಡಬಲ ಸರೋವರದಲ್ಲಿ ಚಿಕ್ಕ, ಚಿಕ್ಕ ಗುಂಡಿಗಳಲ್ಲಿ 10 ಜ್ಯೋತಿರ್ಲಿಂಗಗಳಿವೆ. ಇದರಲ್ಲಿ 3 ಲಿಂಗಗಳು ನಾಶವಾಗಿವೆ.

ಇಲ್ಲಿಯ ಬೆಟ್ಟಗಳು ಭೌಗೋಳಿಕ ವೈಶಿಷ್ಟ್ಯತೆಯ ಜೊತೆಗೆ ದೈವಿಕ ಹಾಗೂ ಅಧ್ಯಾತ್ಮಿಕ ತಾಣವಾಗಿ ಮಾರ್ಪಟ್ಟಿವೆ. ಸುತ್ತಮುತ್ತಲಿನ ಗ್ರಾಮಗಳ ಭಕ್ತರು, ಇಲ್ಲಿ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ನಿತ್ಯ ಅನ್ನ ಸಂತರ್ಪಣೆಯು ಸದ್ಭಕ್ತರ ಪಾಲಿಗೆ ಪರಮಪ್ರಸಾದ. ಲಿಂಗಗಳಿಗೆ ನಡೆಯುವ ತ್ರಿಕಾಲ ಪೂಜೆಗಳನ್ನು ನೋಡುವುದೇ ಒಂದು ಚೆಂದ. ಲಜ್ಜಾಗೌರಿ, ನಟರಾಜ, ನಾಯಕ, ಬ್ರಹ್ಮ ಮಹೇಶ್ವರಿ, ಬ್ರಾಹ್ಮಿಣಿ, ವೈಷ್ಣವಿ, ಇಂದ್ರಾಣಿ, ವರಾಣಿ, ನಾಗರಸಿಂಹ ಮೂರ್ತಿಗಳು ಮನೋಹರ.

ಎತ್ತರ ಕಲ್ಲಿನ ಗುಡ್ಡಗಳು, ಆಳ ಕಣಿವೆಗಳು, ಸುತ್ತಲೂ ದಟ್ಟ ಗಿಡ-ಮರಗಳು, ಹೆಜ್ಜೆ ಹೆಜ್ಜೆಗೂ ಕಾಣುವ ಕಲ್ಲುಗಳಲ್ಲಿ ಅರಳಿದ ಕಲೆ, ಶಿಲಾಮಂಟಪ… ಇವೆಲ್ಲದರ ನಡುವೆ ನವಿಲು, ಕಿಂಗ್‌ ಫಿಶರ್‌ನಂಥ ಪಕ್ಷಿಗಳ ದರ್ಶನ ಕಣ್ಣಿಗೊಂದು ಹಬ್ಬವೇ ಸರಿ. ಇತಿಹಾಸದ ಗತ ವೈಭವವನ್ನು ನೆನಪಿಸುತ್ತಲೇ, ಭಕ್ತರನ್ನು ತನ್ನೆಡೆ ಸೆಳೆಯುತ್ತಿದೆ, ಈ ಹುಲಿಗೆಮ್ಮನ ಕೊಳ್ಳ. ಭಕ್ತರಿಗೆ ಭಕ್ತಿಯ ತೊಟ್ಟಿಲಾಗಿ, ಮಳೆಗಾಲದಲ್ಲಿ ನಿಸರ್ಗಪ್ರಿಯರಿಗೆ ಸ್ವರ್ಗವಾಗಿ, ಚಾರಣಿಗರಿಗೆ ಸಾಹಸ ವೇದಿಕೆಯಾಗಿ, ಸಂಶೋಧಕರಿಗೆ ಅಧ್ಯಯನ ಕೇಂದ್ರವಾಗಿ, ಕಲಾವಿದರಿಗೆ ಸ್ಫೂರ್ತಿಯ ಕಾರಂಜಿಯಾಗಿ, ಜನಸಮೂಹವನ್ನು ಸೆಳೆಯುತ್ತಿದೆ.

Advertisement

ಹಲವು ಅಚ್ಚರಿಗಳ ತಾಣವಾಗಿರುವ ಹುಲಿಗೆಮ್ಮನ ಕೊಳ್ಳದ ಪ್ರದೇಶವನ್ನು 1958ರಲ್ಲಿಯೇ “ರಾಷ್ಟ್ರೀಯ ಸ್ಮಾರಕ’ ಎಂದು ಘೋಷಿಸಿರುವುದು ವಿಶೇಷ. ಆದರೆ, ಇದಕ್ಕೆ ದೊರೆಯಬೇಕಾದ ಸ್ಥಾನಮಾನ ಇನ್ನೂ ಸಿಕ್ಕಿಲ್ಲ.

ದರುಶನಕೆ ದಾರಿ…
ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಪಟ್ಟದಕಲ್ಲಿಗೆ ಹೋಗುವ ದಾರಿಯಲ್ಲಿ ಕೆಂದೂರಿನ ಮೂಲಕ ಭದ್ರನಾಯಕನ ಜಾಲಿಹಾಳವನ್ನು (ಬಿ.ಎನ್‌. ಜಾಲಿಹಾಳ) ತಲುಪಿ, ಅಲ್ಲಿಂದ 2 ಕಿ.ಮೀ. ದೂರ ಕ್ರಮಿಸಿದರೆ, ಹುಲಿಗೆಮ್ಮನಕೊಳ್ಳ ಸಿಗುತ್ತದೆ.

– ಫಿರೋಜ ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next