ಕೊಟ್ಟಿಗೆಹಾರ: ಬಣಕಲ್ ಸುತ್ತಮುತ್ತ ಪಾಳು ಬಿದ್ದ ಗದ್ದೆಗಳಲ್ಲಿ ಹುಲ್ಲೇಡಿ ಶಿಕಾರಿ ಪ್ರಾರಂಭವಾಗಿದ್ದು ಸ್ಥಳೀಯರು ಗದ್ದೆಗೆ ಇಳಿದು ಹುಲ್ಲೇಡಿ ಹಿಡಿಯುತ್ತಿದ್ದ ದೃಶ್ಯ ಬಣಕಲ್, ಅತ್ತಿಗೆರೆ ಸುತ್ತಮುತ್ತ ಕಂಡು ಬರುತ್ತಿದೆ.
ಕೆಲ ಮನೆಗಳಲ್ಲಿ ಗೌರಿ- ಗಣೇಶ ಹಬ್ಬದಮರುದಿನ ಏಡಿ ಸಾರು ಮಾಡುವ ಕ್ರಮವಿದ್ದು ಹಬ್ಬದ ಹಿಂದಿನ ದಿನ ಪಾಳು ಬಿದ್ದ ಗದ್ದೆಗಳಲ್ಲಿ ಏಡಿ ಶಿಕಾರಿ ಮಾಡುವುದು ಸಾಮಾನ್ಯ. ಪಾಳುಬಿದ್ದ ಗದ್ದೆಗಳಲ್ಲಿ ಮಳೆಯಿಂದ ನಿಂತ ನೀರಿನಲ್ಲಿ ಹುಲ್ಲೇಡಿಗಳನ್ನು ಹುಡುಕುವ ಸ್ಥಳೀಯರು, ಮಳೆಗೆ ನೆನೆಯದಂತೆ ಬಣ್ಣದ ಪ್ಲಾಸ್ಟಿಕ್‌ನ್ನು ಹಾಕಿಕೊಂಡು ಗುಂಪು ಗುಂಪಾಗಿ ಹುಲ್ಲೇಡಿ ಹಿಡಿಯುತ್ತಿರುವುದು ಈ ಸಮಯದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಅಲ್ಪಾಯುಷಿಯಾದ ಹುಲ್ಲೇಡಿಗಳನ್ನು ಭತ್ತದ ಗದ್ದೆಗಳಲ್ಲಿ ಮಾತ್ರ ಕಾಣಲು ಸಾಧ್ಯ.
ಭತ್ತದ ಗದ್ದೆಗಳಲ್ಲಿಬೆಳೆಯುವ ಕಳೆಯನ್ನು ತಿಂದು ಬದುಕುವ ಹುಲ್ಲೇಡಿಗಳು ಕೇವಲ ಒಂದೂವರೆ ತಿಂಗಳು ಮಾತ್ರ ಬದುಕುತ್ತವೆ. ಭತ್ತದ ಗದ್ದೆಗಳಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಗದ್ದೆಗಳಲ್ಲಿಯೇ ತಮ್ಮ ಬದುಕಿನ ಪಯಣವನ್ನು ಮುಗಿಸುತ್ತವೆ. ಇದರ ನಡುವೆಯೇ ಗದ್ದೆಯ ಕಳೆ ಕೀಳುವ ಮಹಿಳೆಯರು ಹುಲ್ಲೇಡಿಗಳನ್ನು ಹಿಡಿದು ಹುಲ್ಲೇಡಿ ಹುರುಕಲು, ಹುಲ್ಲೇಡಿಗಳನ್ನು ಸಾರನ್ನು ತಯಾರಿಸುತ್ತಾರೆ.
ಕಳಲೆ ಅಥವಾ ಕೆಸವು ಹಾಕಿ ಮಾಡಿದ ಹುಲ್ಲೇಡಿಯ ಖಾದ್ಯ ಮಲೆನಾಡಿನ ವಿಶೇಷವಾಗಿದ್ದು 3 ರಿಂದ ದಿನಗಳ ಕಾಲ ಈ ಖಾದ್ಯವನ್ನು ಸೇವಿಸುತ್ತಾರೆ. ದಿನ ಕಳೆದಂತೆ ರುಚಿ ಹೆಚ್ಚುವುದು ಏಡಿ ಸಾರಿನ ವಿಶೇಷ.ಭತ್ತದ ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯಿಂದಾಗಿ ಏಡಿಗಳ ಸಂತತಿ ದಿನದಿಂದ ಕಡಿಮೆಯಾಗುತ್ತಿದ್ದು ಮುಂಚಿನಷ್ಟು ಏಡಿಗಳು ಗದ್ದೆಗಳಲ್ಲಿ ಕಂಡ ಬರುತ್ತಿಲ್ಲ. ಮಲೆನಾಡಿನಲ್ಲಿ ಕಲ್ಲೇಡಿ, ಹುಲ್ಲೇಡಿ, ಮುಂಡೇಡಿ ಎಂಬ ಮೂರು ತರದ ಏಡಿಗಳಿವೆ. ಹುಲ್ಲೇಡಿಯನ್ನು ಕಡೆದು ಸಾರು ಮಾಡಿದರೆ ಕಲ್ಲೇಡಿಯನ್ನು ಕೊಂಬು ಮುರಿದು ಸಾರು ಮಾಡುತ್ತಾರೆ. ಆದರೆ ಮುಂಡೇಡಿಯನ್ನು ಯಾರೂ ತಿನ್ನುವುದಿಲ್ಲ. ಮಲೆನಾಡಿನಲ್ಲಿ ಕ್ಲಲೇಡಿಗೆ ಭಾರೀ ಬೇಡಿಕೆ ಇದೆ. ಸಮುದ್ರದ ಏಡಿಯನ್ನು ಮಲೆನಾಡಿಗರು ಅಷ್ಟು ಇಷ್ಟ ಪಡುವುದಿಲ್ಲ. ಕಲ್ಲೇಡಿಯನ್ನು ಬೆಂಕಿಯಲ್ಲಿ ಸುಟ್ಟು ತಿಂದರೆ ಅದರ ರುಚಿಯೇ ಬೇರೆ ಎನ್ನುತ್ತಾರೆ ಸ್ಥಳೀಯರಾದ ಮಗ್ಗಲಮಕ್ಕಿ ಗಣೇಶ್.