ಚಿಕ್ಕಮಗಳೂರು: ಅತಿಯಾದ ರಾಸಾಯನಿಕ ಬಳಕೆಯಿಂದ ಅವಸಾನದತ್ತ ಸಾಗುತ್ತಿರುವ ಮಲೆನಾಡು ಭಾಗದಲ್ಲಿನ ಹುಲ್ಲೇಡಿಗೆ ಈಗ ಭಾರೀ ಡಿಮ್ಯಾಂಡ್ ಬಂದಿದೆ. ಹುಲ್ಲೇಡಿ ಶಿಕಾರಿ ಬಲು ಜೋರಾಗಿ ನಡೆಯುತ್ತಿದ್ದು ಸ್ಥಳೀಯರಿಗೆ ತಾತ್ಕಾಲಿಕ ಉದ್ಯೋಗ ಕಲ್ಪಿಸಿದೆ.
ಹೌದು, ಹುಲ್ಲೇಡಿಯಿಂದ ಬಗೆ ಬಗೆ ಖಾದ್ಯಗಳನ್ನು ತಯಾರಿಕೆಗೆ ಮಲೆನಾಡಿನಲ್ಲಿ ಹೆಸರುವಾಸಿಯಾಗಿದ್ದು, ಈ ಏಡಿಗೆ ಅಪಾರ ಬೇಡಿಕೆ ಉಂಟಾಗಿದೆ. ಮಳೆಗಾಲದಲ್ಲಿ ಮಾತ್ರ ಕಂಡು ಬರುವ ಈ ಏಡಿ ಪಾಳುಬಿದ್ದ ಜಮೀನುಗಳಲ್ಲಿ ಕಂಡು ಬರುತ್ತವೆ. ಸದ್ಯ ಹುಲ್ಲೇಡಿಗೆ ಬೇಡಿಕೆಹೆಚ್ಚಾಗಿದ್ದು, ಮೂಡಿಗೆರೆ ತಾಲೂಕು ಬಡವನದಿಣ್ಣೆ, ಹೊರಟ್ಟಿ, ಮುಗ್ರವಳ್ಳಿ, ಕಾರಮಗೆ, ಸಬ್ಬೇನಹಳ್ಳಿಯಲ್ಲಿ ಪಾಳು ಬಿಟ್ಟಿರುವ ಜಮೀನಿನಲ್ಲಿ ಏಡಿ ಶಿಕಾರಿ ಜೋರಾಗಿ ನಡೆಯುತ್ತಿದೆ.
ಗ್ರಾಮೀಣ ಪ್ರದೇಶದ ಜನರು ಏಡಿ ಹಿಡಿದು ವ್ಯಾಪಾರ ಮಾಡುವ ಕಾರ್ಯದಲ್ಲಿ ನಿರತರಾಗಿದ್ದು, ಪ್ರತಿನಿತ್ಯ 50 ರಿಂದ 60 ಜನರು ಬೆಳಗ್ಗೆ 7ರಿಂದ ಸಂಜೆ 4ಗಂಟೆ ವರೆಗೆ ಏಡಿ ಹಿಡಿದು ವ್ಯಾಪಾರ ಮಾಡುತ್ತಿದ್ದು, ಪ್ರತಿಜೋಡಿ ಏನಿಲ್ಲವೆಂದರೂ ದಿನಕ್ಕೆ 1 ಸಾವಿರ ರೂ. ಸಂಪಾದಿಸುತ್ತಿದ್ದಾರೆ. ಕಳೆದೊಂದು ವಾರದಿಂದ ಮಳೆ ಅಧಿ ಕವಾಗಿದ್ದು, ಕೂಲಿ ಕೆಲಸವಿಲ್ಲದೇ ಹುಲ್ಲೇಡಿ ಹಿಡಿದು ಮಾರಾಟ ಮಾಡುವ ಕಾಯಕಕ್ಕೆ ಸ್ಥಳೀಯರು ಮೊರೆ ಹೋಗಿದ್ದಾರೆ.
ತಾವು ಹಿಡಿದ ಹುಲ್ಲೇಡಿಯನ್ನು ಗಾತ್ರಕ್ಕೆ ಅನುಗುಣವಾಗಿ ವಿಂಗಡಿಸಿ 50ರಿಂದ 60 ಏಡಿ ಇರುವ ಚೀಲಕ್ಕೆ 300 ರಿಂದ 400 ರೂ. ಮಾರಾಟ ಮಾಡುತ್ತಿದ್ದಾರೆ. ಈ ಭಾಗಕ್ಕೆ ಬರುವ ಪ್ರವಾಸಿಗರು ಹುಲ್ಲೇಡಿಯನ್ನು ಖರೀದಿ ಮಾಡುತ್ತಿದ್ದಾರೆ. ಈ ಪ್ರದೇಶಕ್ಕೆ ಪ್ರವಾಸಕ್ಕೆ ಬರುವ ಹೊರ ಜಿಲ್ಲೆಯ ಪ್ರವಾಸಿಗರು ಖರೀದಿ ಮಾಡಿ ಕೊಂಡೊಯ್ಯುತ್ತಿದ್ದು ಭಾರೀ ಡಿಮ್ಯಾಂಡ್ ಬಂದಿದೆ.
ಹಿಂದೆ ಗದ್ದೆ ಬೇಸಾಯ ಸಮಯದಲ್ಲಿ ಹೇರಳವಾಗಿ ಸಿಗುತ್ತಿದ್ದ ಹುಲ್ಲೇಡಿ ರಾಸಾಯನಿಕ ಔಷ ಧ ಬಳಕೆಯಿಂದ ಇತ್ತೀಚಿನ ದಿನಗಳಲ್ಲಿ ಹುಲ್ಲೇಡಿಗಳು ಕಣ್ಮರೆಯಾಗುತ್ತಿವೆ. ಗದ್ದೆಗಳಲ್ಲಿ ಶುಂಠಿ ಬೆಳೆಯಲು ಮುಂದಾದ ಪರಿಣಾಮ ಬೆಳೆಗೆ ಅಧಿಕ ಪ್ರಮಾಣದಲ್ಲಿ ರಾಸಾಯನಿಕ ಸಿಂಪರಣೆ ಮಾಡುತ್ತಿರುವುದರಿಂದ ಹುಲ್ಲೇಡಿಗಳ ಸಂತತಿ ಅವಸಾನದ ಅಂಚು ತಲುಪಲು ಕಾರಣವಾಗಿದೆ.
ಮಲೆನಾಡಿನಲ್ಲಿ ಖಾದ್ಯಕ್ಕೆ ಹೆಸರುವಾಸಿಯಾಗಿರುವ ಮಳೆಗಾಲದಲ್ಲಿ ಮಾತ್ರ ಕಂಡು ಬರುವ ಹುಲ್ಲೇಡಿ ಸದ್ಯ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿದೆ. ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟವು ಜೋರಾಗಿರುವ ಕಾರಣ ಕೂಲಿ ಕೆಲಸವು ಇಲ್ಲದಂತಾಗಿದ್ದು ಹುಲ್ಲೇಡಿ ಶಿಕಾರಿ ಮಾಡಿ ಮಾರಾಟ ಕಾಯಕ ಜೋರಾಗಿ ನಡೆಯುತ್ತಿದೆ.