Advertisement

ಹುಲಿಕಟ್ಟಿ:ವರುಣನ ಕೃಪೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ

02:53 PM Jun 10, 2019 | Suhan S |

ಬಂಕಾಪುರ: ಪರಮಾತ್ಮನಿಂದ ವರವನ್ನು ಪಡೆದುಕೊಂಡಿರುವ ಕಪ್ಪೆ ಮತ್ತು ಕತ್ತೆಗಳು ತಮಗೆ ಕುಡಿಯಲು ನೀರಿನ ಕೊರತೆ ಕಂಡುಬಂದಾಗ ವರುಣನನ್ನು ಆಕರ್ಷಿಸುವ ಶಕ್ತಿ ಹೊಂದಿವೆ ಎಂದು ಫಕ್ಕೀರಸ್ವಾಮಿ ಹಿರೇಮಠ ಶಾಸ್ತ್ರೀಗಳು ಹೇಳಿದರು.

Advertisement

ಹುಲಿಕಟ್ಟಿ ಗ್ರಾಮದಲ್ಲಿ ಸಮೃದ್ಧ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಷ್ಟ ಬಂದಾಗ ಕತ್ತೆ ಕಾಲು ಹಿಡಿ ಎಂಬ ನಾಣ್ಣುಡಿಯಂತೆ ನಮ್ಮ ಪೂರ್ವಜರ ಕಾಲದಿಂದ ನಡೆದು ಬಂದ ಸಂಪ್ರದಾಯಗಳು ಇಂದಿಗೂ ಫಲ ನೀಡುತ್ತಿವೆ. ಆದ್ದರಿಂದ ಕಪ್ಪೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ವಿಶ್ವಾಸ ಸಾರ್ವಜನಿಕರಲ್ಲಿ ಪುರಾಣ ಕಾಲದಿಂದಲೂ ಮುಂದುವರೆದುಕೊಂಡು ಬಂದಿದೆ ಎಂದು ಹೇಳಿದರು.

ತನ್ನಿಮಿತ್ತ ಗ್ರಾಮದ ಹೊರವಲಯದಲ್ಲಿರುವ ಪ್ರಾಚೀನ ಕಾಲದ ಕಲ್ಮೇಶ್ವರ ದೇವರಿಗೆ ರೈತಾಪಿ ಕುಟುಂಬದವರಿಂದ ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಸಹಸ್ರ ನಾಮಾವಳಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಗ್ರಾಮಸ್ಥರು ಕಪ್ಪೆಗಳ ಮದುವೆಯನ್ನು ವಿಧಿ ವಿಧಾನಗಳ ಪ್ರಕಾರ ಕಪ್ಪೆಗಳಿಗೆ ಅರಿಷಿಣ ಕೊಂಬು ಕಟ್ಟಿ (ತಾಳಿ) ಹೂ ಮಾಲೆಗಳನ್ನು ಹಾಕಿ ಮದುವೆಯ ಗಟ್ಟಿ ಮೇಳ, ಮಂತ್ರೋಪದೇಶದೊಂದಿಗೆ ಅಕ್ಷತೆ ಹಾಕಿ ಮದುವೆ ಮಾಡಿದರು.

ಮುತ್ತೈದಿಯರು ಆರತಿ ಮಾಡಿ ಗಂಡಂದಿರ ಹೆಸರನ್ನು ವಡಪಿನೊಂದಿಗೆ ಹೇಳುವ ಮೂಲಕ ಮದುವೆಯ ಸೊಬಗನ್ನು ಹೆಚ್ಚಿಸಿದರು. ನಂತರ ಗ್ರಾಮದ ಯುವಕರು ಕಪ್ಪೆಗಳನ್ನು ತಲೆಯ ಮೇಲೆ ಹೊತ್ತು ಸಕಲ ವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಮದುವೆಯಾದ ಕಪ್ಪೆಗಳನ್ನು ಬಾವಿಯಲ್ಲಿ ಬಿಟ್ಟು ಸಮೃದ್ಧ ಮಳೆ ತರಸಿ ಒಳ್ಳೆಯ ಫಸಲು ನೀಡುವಂತೆ ಪ್ರಾರ್ಥಿಸಿದರು. ನಂತರ ಅನ್ನ ಸಂತರ್ಪಣೆ ನಡೆಯಿತು.

ಪೊಲೀಸ್‌ ಬೀಟ್ ಪೇದೆಗಳಾದ ತ್ರೀವೇಣಿ ಬೆಳ್ಳಿಗಟ್ಟಿ, ಟಿ.ಪಿ. ಬಂಡೇರ, ಮುಖಂಡರಾದ ಗಂಗಾಧರ ಗಡ್ಡೆ, ನಿಂಗಪ್ಪ ಬನ್ನೂರ, ಶಂಕರಗೌಡ ಪಾಟೀಲ, ಉಳವಯ್ಯ ಚಿಗರಿಮಠ, ಕಲ್ಲಪ್ಪ ಮೆಳ್ಳಳ್ಳಿ, ಬಸವರಾಜ ಕುಳೆನೂರ, ಶಿವಲಿಂಗಪ್ಪ ಕೊಳಲ, ರಮೇಶಗೌಡ ಪಾಟೀಲ, ನಾಗನಗೌಡ ಪಾಟೀಲ, ಬೀರಪ್ಪ ಹೆಗಡೆ, ಚಂದ್ರುಗೌಡ ಪಾಟೀಲ, ಸೋಮಪ್ಪ ಹೆಗಡೆ, ಹೊನ್ನಪ್ಪ ಹೊನ್ನತ್ತಿ ಸೇರಿದಂತೆ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next