ಹೊಸದಿಲ್ಲಿ : ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಗೆ ತನ್ನ ಅಭ್ಯರ್ಥಿಯಾಗಿ ದಿವಂಗತ ಸಂಸದ ಹುಕುಮ್ ಸಿಂಗ್ ಅವರ ಪುತ್ರಿ ಮೃಗಾಂಕಾ ಸಿಂಗ್ ಅವರ ಹೆಸರನ್ನು ಬಿಜೆಪಿ ಇಂದು ಮಂಗಳವಾರ ಪ್ರಕಟಿಸಿದೆ. ಈ ವರ್ಷ ಫೆಬ್ರವರಿಯಲ್ಲಿ ಬಿಜೆಪಿ ಸಂಸದ ಹುಕುಂ ಸಿಂಗ್ ಅವರ ನಿಧನದಿಂದಾಗಿ ಕೈರಾನಾ ಕ್ಷೇತ್ರ ಖಾಲಿ ಬಿದ್ದಿದೆ.
ರಾಷ್ಟ್ರೀಯ ಲೋಕ ದಳ ಕೈರಾನಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯಾಗಿ ತಬಸ್ಸಮ್ ಬೇಗಮ್ ಅವರನ್ನು ನಿಲ್ಲಿಸಿದೆ ಮತ್ತು ಇವರೇ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ಇದೇ ವೇಳೆ ಬಿಜೆಪಿ ತನ್ನ ದಿವಂಗತ ಶಾಸಕ ಲೋಕೇಂದ್ರ ಚೌಹಾಣ್ ಅವರಿಗೆ ತೆರವಾಗಿರುವ ನೂರ್‌ಪುರ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ದಿ| ಚೌಹಾಣ್ ಅವರ ಪತ್ನಿ ಅವನಿ ಸಿಂಗ್ ಅವರ ಹೆಸರನ್ನು ಪ್ರಕಟಿಸಿದೆ.
ಇದೇ ರೀತಿ ಜಾರ್ಖಂಡ್‌ನ ಗೋಮಿಯಾ ಕ್ಷೇತ್ರದಿಂದ ಮಾಧವ ಲಾಲ್ ಸಿಂಗ್, ಉತ್ತರಾಖಂಡದ ಥರಾಲಿ ಕ್ಷೇತ್ರದಿಂದ ಮುನ್ನಿ ದೇವಿ ಮತ್ತು ಪಶ್ಚಿಮ ಬಂಗಾಲದ ಮಾಹೇಸ್ಥಲ ಕ್ಷೇತ್ರದಿಂದ ಸುಜೀತ್ ಘೋಷ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.
ಒಂದು ಲೋಕಸಭೆ ಮತ್ತು ನಾಲ್ಕು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಇಂದು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಯು ಅಂತಿಮಗೊಳಿಸಿತೆಂದು ಬಿಜೆಪಿ ಹೇಳಿಕೆಯೊಂದರಲ್ಲಿ ತಿಳಿಸಿದೆ.