ಬೆಂಗಳೂರು: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುಬಾರಿ ಮೌಲ್ಯದ ಹ್ಯೂಬ್ಲೋಟ್ ವಾಚ್ ಉಡುಗೊರೆ ಪಡೆದ ಪ್ರಕರಣ ಮತ್ತೆ ಸುದ್ದಿಯಾಗಿದೆ. ಈ ಕುರಿತು ಸಲ್ಲಿಸಲಾಗಿದ್ದ ದೂರು ವಿಚಾರಣೆ ಮುಕ್ತಾಯಗೊಳಿಸಿದ ಎಸಿಬಿ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ.
ವಕೀಲ ನಟರಾಜ್ ಶರ್ಮಾ ಸಲ್ಲಿಸಿರುವ ರಿಟ್ ಅರ್ಜಿ ಗುರುವಾರ ನ್ಯಾಯಮೂರ್ತಿ ರಾಘವೇಂದ್ರ ಎಸ್.ಚೌಹಾಣ್ ಅವರಿದ್ದ ಏಕ ಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆ ಮುಂದೂಡಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡು ದುಬಾರಿ ಮೌಲ್ಯದ ವಾಚ್ ಉಡುಗೊರೆ ಪಡೆದುಕೊಂಡಿದ್ದರು. ಈ ಬಗ್ಗೆ ತನಿಖೆ ನಡೆಸಿ ವಾಚ್‌ನ ಮೂಲ ಪತ್ತೆಹಚ್ಚುವಂತೆ 2016ರಲ್ಲಿ ಎಸಿಬಿಗೆ ದೂರು ನೀಡಲಾಗಿತ್ತು. ಆದರೆ, ಸಮರ್ಪಕವಾಗಿ ತನಿಖೆ ನಡೆಸದೆಯೇ ಪ್ರಕರಣವನ್ನು ಎಸಿಬಿ ಮುಕ್ತಾಯಗೊಳಿಸಿ ಮಖ್ಯಮಂತ್ರಿಗಳಿಗೆ ಕ್ಲೀನ್ ಚಿಟ್ ನೀಡಿದೆ.
ಹೀಗಾಗಿ, ತನಿಖೆಯ ಕ್ರಮ, ಯಾವ ಅಂಶಗಳ ಆಧಾರದಲ್ಲಿ ಪ್ರಕರಣ ಮುಕ್ತಾಯಗೊಳಿಸಲಾಗಿದೆ ಎಂಬ ಬಗ್ಗೆ ದಾಖಲೆಗಳನ್ನು ಕೋರಿದರೆ ಎಸಿಬಿ ಉತ್ತರ ನೀಡಿಲ್ಲ. ಆದ್ದರಿಂದ ಯಾವ ನಿರ್ದಿಷ್ಟ ಕಾರಣಗಳ ಆಧಾರದಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂಬ ಬಗ್ಗೆ ದಾಖಲೆ ನೀಡಲು ಎಸಿಬಿಗೆ ನಿರ್ದೇಶಿಸುವಂತೆ ವಕೀಲ, ಅರ್ಜಿದಾರ ನಟರಾಜ್ ಶರ್ಮಾ ಕೋರಿದ್ದಾರೆ.
ರಿಟ್ ಅರ್ಜಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಗೃಹ ಇಲಾಖೆ, ಎಸಿಬಿ ಎಡಿಜಿಪಿ, ದೂರು ತನಿಖೆ ನಡೆಸಿದ್ದ ಎಸಿಬಿ ಇನ್ಸ್‌ಪೆಕ್ಟರ್ ಸಿ.ಬಾಲಕೃಷ್ಣ, ಡಾ.ಗಿರೀಶ್‌ಚಂದ್ರ ವರ್ಮಾ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.