ಹೂವಿನಹಡಗಲಿ: ನಾಡಿನ ಸುಪ್ರಸಿದ್ಧ ಮೈಲಾರ ಜಾತ್ರೆಗೆ ಅದ್ಧೂರಿ ತೆರೆ ಬಿತ್ತು. ಜಾತ್ರೆಗೆ ಬಂದಿದ್ದ ಲಕ್ಷಾಂತರ ಭಕ್ತರಿಗೆ ಜಿಲ್ಲಾಡಳಿತ ಕಳೆದ ವಾರದಿಂದಲೂ ಸಕಲ ಸಿದ್ಧತೆ ಕೈಗೊಂಡಿದ್ದು, ಬಂದಂತಹ ಭಕ್ತಾದಿಗಳಿಗೆ ಇದನ್ನೆಲ್ಲ ತಲುಪಿಸುವಲ್ಲಿ ಯಶಸ್ವಿಯಾಯಿತು.
ಭಕ್ತರಿಗೆ ಕುಡಿಯುವ ನೀರಿಗಾಗಿ 20 ಕಡೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, 7 ಹ್ಯಾಂಡ್‌ಪಂಪ್‌ಗ್ಳು ಅಲ್ಲದೆ ಜಾತ್ರೆಯಲ್ಲಿ ಬೀಡು ಬಿಟ್ಟಿದ್ದ ಭಕ್ತಾದಿಗಳ ಸವಾರಿ ಬಂಡಿಯ ಸಮೀಪದಲ್ಲಿ ಸಾಕಾಗುವಷ್ಟು ನೀರು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
ಇನ್ನು ಜಾತ್ರೆಯ ಪ್ರದೇಶದ ತುಂಬೆಲ್ಲಾ ವಿದ್ಯುತ್ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಜೆಸ್ಕಾಂ ಮೊದಲೆ ತಯಾರು ಮಾಡಿಕೊಂಡಿದ್ದ ಕ್ರಿಯಾ ಯೋಜನೆಯಂತೆ, ಕಾರ್ಣಿಕದ ಸ್ಥಳ ಡೆಂಕನ ಮರಡಿ, ಜಾತ್ರಾ ಪ್ರದೇಶ ಒಳಗೊಂಡಂತೆ ಒಟ್ಟು 140 ವಿದ್ಯುತ್ ಕಂಬ ಹಾಕಲಾಗಿದ್ದು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯವರು ಕೊರೆಯಿಸಲಾಗಿದ್ದ ಹಾಗೂ ನೂತನವಾಗಿ ಅಳವಡಿಸಲಾಗಿದ್ದ ಸಿಸ್ಟನಗಳಿಗೆ ಯಾವುದೇ ತೊಂದರೆಯಾಗದಂತೆ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಗ್ರಾಪಂನಿಂದಾಗಿ 2.50 ಲಕ್ಷ ಹಾಗೂ ದೇವಸ್ಥಾನ ಕಮಿಟಿಯಿಂದಾಗಿ 2.50 ಲಕ್ಷ ರೂ.ಗಳನ್ನು ಜೆಸ್ಕಾಂ ಇಲಾಖೆಗೆ ಪಾವತಿ ಮಾಡಲಾಗಿದ್ದು, ಒಟ್ಟಾರೆ ಸುಮಾರು 25 ಜನ ಸಿಬ್ಬಂದಿ ಹಗಲಿರುಳು ಕಾರ್ಯ ಮಾಡಿ ಯಾವುದೇ ಒಂದು ಸಣ್ಣ ತೊಂದರೆಯಾಗದಂತೆ ನೋಡಿಕೊಂಡಿರುವುದು ಶ್ಲಾಘನೀಯ.
ಇನ್ನೂ ಸ್ವತ್ಛತೆ ಕಡೆಗೂ ಸಹ ಅಷ್ಟೇ ಗಮನ ಹರಿಸಲಾಗಿದ್ದು, ಗ್ರಾಪಂ ಅಧಿಕಾರಿಗಳು ಜಾತ್ರಾ ಸ್ಥಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶೌಚಾಲಯ ನಿರ್ಮಾಣ ಒಳಗೊಂಡಂತೆ ದೇವಸ್ಥಾನದಲ್ಲಿ ಪ್ರತಿ ಗಂಟೆಗೊಮ್ಮೆ ಕಸ ಗುಡಿಸುವ ಮೂಲಕವಾಗಿ ಸ್ವತ್ಛತೆ ಕಡೆಗೂ ಹೆಚ್ಚಿನ ಗಮನಹರಿಸಲಾಗಿತ್ತು.
ಇನ್ನೂ ಜಾತ್ರೆಯಲ್ಲಿ ಜನ, ಜಾನುವಾರುಗಳ ಆರೋಗ್ಯದ ಕಡೆಗೂ ಸಹ ಹೆಚ್ಚಿನ ಗಮನ ನೀಡಲಾಗಿದೆ. ಜಾತ್ರೆಯ 4 ಕಡೆಯಲ್ಲಿ ಆಸ್ಪತ್ರೆ ಪ್ರಾರಂಭ ಮಾಡಲಾಗಿದ್ದು, ಸುಮಾರು 25 ಜನ ವೈದ್ಯರ ತಂಡ ಒಳಗೊಂಡಂತೆ ಇತರೆ ಸಿಬ್ಬಂದಿ ಸಹ ಭಕ್ತರ ಆರೋಗ್ಯ ಕುರಿತು ಕಾಳಜಿ ವಹಿಸಿದ್ದರು.
ಇನ್ನೂ ಈ ಬಾರಿ ವಿಶೇಷವಾಗಿದ್ದು, ಕಾರ್ಣಿಕದ ಗೊರವಯ್ಯ ಕಾರ್ಣಿಕ ನುಡಿ ಹೇಳಲು ವಿಶೇಷ ಭದ್ರತೆ ಒದಗಿಸಿ ಯಾವುದೇ ರೀತಿಯಲ್ಲಿ ಗೊಂದಲವಾಗದಂತೆ ಅಧುನಿಕವಾದ ಧ್ವನಿ ಪರಿಕರ ಅಳವಡಿಸಲಾಗಿತ್ತು. ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್, ಸಿಇಒ ಕೆ. ನಿತೀಶ್, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಮಹೇಶ್, ತಹಶೀಲ್ದಾರ್ ಕೆ.ರಾಘವೇಂದ್ರರಾವ್, ಇಒಯು.ಎಚ್. ಸೋಮಶೇಖರ್ ಸೇರಿದಂತೆ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳ ಸಹಕಾರದಿಂದಾಗಿ ಈ ವರ್ಷದ ಮೈಲಾರ ಜಾತ್ರೆ ಪ್ರತಿ ವರ್ಷದ ಜಾತ್ರೆಗಿಂತಲೂ ಕೆಲವೊಂದು ವಿಶೇಷತೆಗೆ ಸಾಕ್ಷಿಯಾಗಿತ್ತು.