Advertisement

ಚರಂಡಿ ವಿಚಾರಕ್ಕೆ ಭಾರಿ ವಾಕ್ಸಮರ!

03:49 PM Aug 03, 2022 | Team Udayavani |

ಸಿಂಧನೂರು: ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣದ ಸ್ಥಳದಲ್ಲಿ ಚರಂಡಿ ಅಗೆಯಲಾಗುತ್ತಿದೆ ಎಂದು ಶಾಸಕ ವೆಂಕಟರಾವ್‌ ನಾಡಗೌಡರ ಪುತ್ರ ಅಭಿಷೇಕ್‌ ನಾಡಗೌಡ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಪಿಡಬ್ಲ್ಯುಡಿ ಕ್ಯಾಂಪಿನಲ್ಲಿ ಕಾಂಗ್ರೆಸ್‌ ಆಡಳಿತ ಮಂಡಳಿ ಸದಸ್ಯರೊಂದಿಗೆ ತೀವ್ರ ವಾಗ್ವಾದ ನಡೆಯಿತು.

Advertisement

ಮಳೆಯಾಗಿದ್ದರಿಂದ ಪಿಡಬ್ಲ್ಯುಡಿ ಕ್ಯಾಂಪಿನಲ್ಲಿ ಬರುವ ಲಕ್ಷ್ಮೀಕ್ಯಾಂಪಿನ ಪ್ರದೇಶದಲ್ಲಿನ ನೀರು ಹರಿಯಲು ಅವಕಾಶ ಇಲ್ಲವಾಗಿದೆ ಎಂದು ನಗರಸಭೆಯಿಂದ ಜೆಸಿಬಿ ಬಳಸಿ ನೀರಾವರಿ ಇಲಾಖೆ ಜಾಗದಲ್ಲಿ ಚರಂಡಿ ತೆಗೆಯಲು ಆರಂಭಿಸಲಾಗಿತ್ತು. ಆದರೆ, ಈ ಜಾಗದಲ್ಲಿ ಈಗಾಗಲೇ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸುತ್ತಿರುವುದರಿಂದ ಕಾಮಗಾರಿಗೆ ಅಡ್ಡಿಯಾಗುತ್ತದೆ ಎಂದು ಶಾಸಕರ ಪುತ್ರ ವಿರೋಧ ವ್ಯಕ್ತಪಡಿಸಿದರು.

ಈ ನಡುವೆಯೂ ಜೆಸಿಬಿ ಅಗೆತ ಮುಂದುವರಿದ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ, ಮುರ್ತುಜಾಹುಸೇನ್‌ ಅವರೊಂದಿಗೆ ವಾಗ್ವಾದ ನಡೆಸಿ, ಜೆಸಿಬಿಯನ್ನು ನಿಲ್ಲಿಸಿದರು. ವಾದ-ವಿವಾದ: ಲಕ್ಷ್ಮೀಕ್ಯಾಂಪಿನಿಂದ ನೀರು ಹೋಗಬೇಕಾದರೆ, ಅದನ್ನು ನೇರವಾಗಿ ಸಿಂಧನೂರಿನ ಹಳ್ಳಕ್ಕೆ ಸಂಪರ್ಕ ಕಲ್ಪಿಸಬೇಕು. ಆದರೆ, ಮುನ್ನೆಚ್ಚರಿಕೆ ಇಲ್ಲದೇ ಚರಂಡಿ ಅಗೆಯುತ್ತಿದ್ದಾರೆ ಎಂದು ಜೆಡಿಎಸ್‌ ನವರು ಅಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ನವರು, ಕಲ್ವರ್ಟ್‌ ಕಿತ್ತು ಹಾಕಿ ತಾಯಿ-ಮಕ್ಕಳ ಆಸ್ಪತ್ರೆ ಕಾಮಗಾರಿಗಾಗಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು. ನಗರಸಭೆ ಆಡಳಿತ ಮಂಡಳಿ ಹಾಗೂ ಶಾಸಕರ ಪುತ್ರನ ವಾಗ್ವಾದ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next