ಬಾಗಲಕೋಟೆ: ಮಹಾ ಶಿವರಾತ್ರಿಯಂದು ದೇಶದೆಲ್ಲೆಡೆ ಶಿವ, ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲುತ್ತದೆ. ಆದರೆ, ಇಲ್ಲೊಂದು ಸಾವಿರ ತೂಕದ ಬೃಹತ್ ಶಿವಲಿಂಗ ಹಲವುವರ್ಷಗಳಿಂದ ಅನಾಥವಾಗಿದೆ. ಇದೊಂದು ಅದ್ಬುತ ಪ್ರವಾಸಿ ತಾಣವೂ ಆಗಿದ್ದು, ಅಭಿವೃದ್ಧಿಗಾಗಿ ಕಾದು ಕುಳಿತಿದೆ.
ಹೌದು, ಬಾದಾಮಿ ತಾಲೂಕಿನ ಪವಿತ್ರ ಸ್ಥಾನವೂ ಆಗಿರುವ ಪ್ರವಾಸಿ ಕೇಂದ್ರ ಮಹಾಕೂಟದಿಂದ ಶಿವಯೋಗ ಮಂದಿರಕ್ಕೆ ಹೋಗುವ ಮಾರ್ಗದ ಬಲ ಭಾಗದಲ್ಲಿ ಹಳೆಯ ಮಹಾಕೂಟವಿದೆ. ಇದನ್ನು ಹಿರೇಮಾಗಡ ಎಂದೂ ಕರೆಯುತ್ತಿದ್ದರು ಎಂಬುದು ಇತಿಹಾಸದಲ್ಲಿ ಉಲ್ಲೇಖವಿದೆ. ಈ ಕ್ಷೇತ್ರದ ಒಂದು ದೇವಾಲಯದಲ್ಲಿ ಸುಮಾರು 1 ಸಾವಿರ ಕೆ.ಜಿ. ತೂಕಕ್ಕೂ ಹೆಚ್ಚಿನ ಬೃಹತ್ ಶಿವಲಿಂಗವಿದ್ದು, ಅನಾಥವಾಗಿದೆ. ಸುಮಾರು 5-6ನೇ ಶತಮಾನದ ಎರಡು ಪ್ರಾಚೀನ ದೇವಸ್ಥಾನಗಳಿವೆ. ಒಂದು ಪುಷ್ಕರಣಿ, ಲಕುಲೀಶ ಶೈವಾಚಾರ್ಯರ ಭಿನ್ನವಾದ ಮೂರ್ತಿಗಳು ಇಲ್ಲಿವೆ. ಇಲ್ಲಿರುವ ಪ್ರಮುಖ ದೇವಾಲಯ, ದ್ರಾವಿಡ ಶಿಲ್ಪ ಪ್ರಾಚೀನವಾಗಿದೆ. ಗುಡಿಯ ಹಿಂಭಾಗದ ಪ್ರದಕ್ಷಿಣೆಯ ಭಾಗ ಬೌದ್ಧರ ಚೈತ್ಯಾಲಯದಂತಹ ಅರ್ಧ ಗೋಲಾಕಾರದಲ್ಲಿದೆ. ಬಾದಾಮಿ ಚಾಲುಕ್ಯರು, ಈ ಕ್ಷೇತ್ರದಲ್ಲಿ ದ್ರಾವಿಡ ಔತ್ತರೇಯ ನಾಗರ ಶೈಲಿಗಳ ಮಾದರಿಯಲ್ಲಿ ದೇವಾಲಯ ನಿರ್ಮಿಸಿದ್ದಾರೆ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಇತಿಹಾಸದ ದೇವಾಲಯಗಳು: ಹಳೆಯ ಮಹಾಕೂಟದ ಈ ದೇವಾಲಯಕ್ಕೆ ಹೊಂದಿಕೊಂಡೇ ಹಿಂಬದಿ ಬೃಹತ್ ಕೆರೆಯಿದೆ. ನಾಲ್ಕು ದಿಕ್ಕಿನಲ್ಲೂ ಬೃಹತ್ ಬೆಟ್ಟ-ಗುಡ್ಡಗಳಿದ್ದು, ಮಧ್ಯೆ ಹಳೆಯ ಮಹಾಕೂಟ, ಸುಂದರ ಕೆರೆಯ ಕೆಳ ಭಾಗದಲ್ಲಿ ಈ ಕ್ಷೇತ್ರವಿದ್ದು, ದೇವಾಲಯಗಳ ಎದುರು ಸುಮಾರು 500ಕ್ಕೂ ಹೆಚ್ಚು ವರ್ಷಗಳ ಇತಿಹಾಸದ ಬೃಹತ್ ಆಲದ ಮರವಿದೆ. ಈ ಆಲದ ಮರ ಹಾಗೂ ಹಳೆಯ ಮಹಾಕೂಟದ ಒಂದು ದೇವಾಲಯದಲ್ಲಿರುವ ಶಿವಲಿಂಗಕ್ಕೆ ಆಗಾಗ ಬರುವ ಭಕ್ತರು, ಪ್ರತಿ ಆಗಿ ಹುಣ್ಣಿಮೆಗೊಮ್ಮೆ ನಡೆಯುವ ಮಹಾಕೂಟೇಶ್ವರ ಜಾತ್ರೆ ವೇಳೆ ಪೂಜೆಗೊಳ್ಳುತ್ತವೆ.ಆದರೆ, ಪಕ್ಕದಲ್ಲಿರುವ ಇನ್ನೊಂದು ದೇವಾಲಯವಿದ್ದು, ಅದರಲ್ಲಿ ಬೃಹತ್ ಶಿವಲಿಂಗವಿದೆ. ಆ ಶಿವಲಿಂಗಕ್ಕೆ ಪೂಜೆ-ಪುನಸ್ಕಾರ ಕೈಬಿಟ್ಟು ಹಲವು ವರ್ಷಗಳೇ ಕಳೆದಿವೆ. ಶಿವಲಿಂಗ, ದೇವಾಲಯದ ಒಳಗಿನ ಆವರಣ ಎಲ್ಲವೂ ದುಸ್ಥಿತಿಯಲ್ಲಿವೆ. ಈ ದೇವಾಲಯವೂ 5-6ನೇ ಶತಮಾನದಲ್ಲಿ ನಿರ್ಮಿಸಿದ್ದು, ಅವುಗಳನ್ನು ಕಾಪಾಡಿಕೊಳ್ಳಬೇಕಾದ ಭಾರತೀಯ ಪುರಾತತ್ವ ಇಲಾಖೆಯಾಗಲಿ, ಪ್ರವಾಸೋದ್ಯಮ ಇಲಾಖೆಯಾಗಲಿ ಗಂಭೀರ ಚಿಂತನೆ ನಡೆಸದಿರುವುದು ವಿಪರ್ಯಾಸ ಎಂಬ ಮಾತು ಹಲವರಿಂದ ಕೇಳಿ ಬರುತ್ತಿದೆ.
ವರ್ಷವಿಡೀ ಹರಿಯುವ ಗಂಗೆ: ಹಳೆಯ ಮಹಾಕೂಟ ದೇವಾಲಯದ ಹಿಂದೆ ಕೆರೆಯಿಂದ ಅದರಿಂದ ಕೆಳ ಭಾಗದಲ್ಲಿರುವ ದೇವಾಲಯ ಎದುರಿನ ಹೊಂಡದಲ್ಲಿ ವರ್ಷವಿಡೀ (ಮಹಾಕೂಟದ ರೀತಿಯೇ ಹೊಂಡವಿದೆ) ಜುಳು ಜುಳು ನೀರಿನಿಂದ ಹರಿಯುತ್ತದೆ. ಮಹಾಕೂಟದಿಂದ ಶಿವಯೋಗ ಮಂದಿರಕ್ಕೆ ತೆರಳುವ ಮಾರ್ಗದಲ್ಲಿ ಬಲಕ್ಕೆ ಈ ಕ್ಷೇತ್ರವಿದ್ದು, ಸುಂದರ ರಸ್ತೆಯೂ ನಿರ್ಮಿಸಿಲ್ಲ. ಕಾಲು ದಾರಿಯ 50 ಮೀಟರ್ ವ್ಯಾಪ್ತಿಯಲ್ಲೇ ಈ ಸುಂದರ ತಾಣಕ್ಕೆ ನೈಸರ್ಗಿಕವಾಗಿ ಹುಟ್ಟಿದ ಬೃಹತ್ ಆಲದ ಮರಗಳು, ಊರ ಅಗಸಿಯಂತೆ ದ್ವಾರ ಬಾಗಿಲಿನಂತೆ ನಿಂತಿವೆ. ಅವುಗಳೇ ಅನಾಥವಾದ ನಮ್ಮನ್ನು ನೋಡಬನ್ನಿ ಎಂಬ ಕರೆಯುತ್ತವೆ.
ಅಲ್ಲಿಂದ ದೇವಾಲಯದ ಎದುರು ವಿಶಾಲ ಜಾಗೆ, ಬೃಹತ್ ಆಲದ ಮರ, ವರ್ಷವಿಡೀ ತುಂಬಿ ನಿಲ್ಲುವ ಹೊಂಡ, 6ನೇ ಶತಮಾನದ ದೇವಾಲಯ ಎಲ್ಲವೂ ಅದ್ಭುತವಾಗಿವೆ. ಆದರೆ, ಈ ಪುಣ್ಯ ಕ್ಷೇತ್ರ, ಪ್ರವಾಸಿಗರು, ಭಕ್ತರ ನೆಚ್ಚಿನ ತಾಣವಾಗುವ ಬದಲು, ಬಡ ಕುರಿಗಾಯಿಗಳ ಆಸರೆ ತಾಣವಾಗಿದೆ. ಇಲ್ಲಿ ನಿತ್ಯ ಸಾವಿರಾರು ಕುರಿ, ಆಡು, ಜಾನುವಾರುಗಳು ತಮ್ಮ ಹಸಿವು ನಿಂಗಿಸಿಕೊಂಡು ತೆರಳುತ್ತವೆ. ಒಟ್ಟಾರೆ, ಚಾಲುಕ್ಯ ಅರಸರ ಕಾಲದ ಅದ್ಭುತ ತಾಣ, ಅದರಲ್ಲೂ ನಿತ್ಯ ಪೂಜೆಗೊಳ್ಳುವ ಬೃಹತ್ ಶಿವಲಿಂಗ ಇಲ್ಲಿ ಅನಾಥವಾಗಿರುವುದು ಹಲವರಿಗೆ ಬೇಸರ ತರಿಸುತ್ತದೆ. ಈ ಕ್ಷೇತ್ರವನ್ನು ಸ್ವಚ್ಛಗೊಳಿಸಿ, ಪಾರಂಪರಿಕ ತಾಣವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಬೇಕಿದೆ.
-ಎಸ್.ಕೆ. ಬಿರಾದಾರ