Advertisement

ನಗರಾಡಳಿತದಲ್ಲಿ ತೆರಿಗೆ ಸಂಗ್ರಹಕ್ಕೆ ಭಾರೀ ಹಿನ್ನಡೆ

01:19 AM Sep 15, 2019 | mahesh |

ಉಡುಪಿ: ನಗರಾಡಳಿತ ಇ-ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ಸಮಸ್ಯೆಯಿಂದ ರಾಜ್ಯಾದ್ಯಂತ ತೆರಿಗೆ ಸಂಗ್ರಹಕ್ಕೆ ಹಿನ್ನಡೆಯಾಗುತ್ತಿದೆ. ಒಂದು ವಾರದಿಂದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ವ್ಯಾಪ್ತಿಯ ತೆರಿಗೆ ಸಂಗ್ರಹಿಸುವ “ಸ್ವೀಕೃತಿ’ ತಂತ್ರಾಂಶದಲ್ಲಿ ಈ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಸಾರ್ವಜನಿಕರು ತೆರಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ತಿಂಗಳ ಪ್ರಾರಂಭದಲ್ಲಿ ಈ ಸಮಸ್ಯೆ ಉಂಟಾಗಿರುವುದರಿಂದ ನಗರಾಡಳಿತಗಳಿಗೆ ತೆರಿಗೆ ಸಂಗ್ರಹದ ಆದಾಯ ಕುಸಿಯುವ ಸಾಧ್ಯತೆಯಿದೆ.

Advertisement

ಜನರೇಟ್‌ ಆಗದ ಚಲನ್‌
ತಂತ್ರಾಂಶದಿಂದ ಚಲನ್‌ ಜನರೇಟ್‌ ಆಗುತ್ತಿಲ್ಲ. ಕೆಲವೊಮ್ಮೆ ಆದರೂ ಬ್ಯಾಂಕ್‌ನಿಂದ ನಗದು ಸ್ವೀಕೃತಿಯಾದ ಚಲನ್‌ಗಳನ್ನು ವೆಬ್‌ಸೈಟ್‌ನಲ್ಲಿ ಆಪ್‌ಲೋಡ್‌ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಸಿಬಂದಿ.

ತೆರಿಗೆ ಸಂಗ್ರಹದಲ್ಲಿ ಹಿನ್ನಡೆ
ಸಾಮಾನ್ಯ ಶೇ. 90ರಷ್ಟು ಜನರು ತಿಂಗಳ ಪ್ರಾರಂಭದಲ್ಲಿ ತೆರಿಗೆ ಪಾವತಿಸುತ್ತಾರೆ. ಈಗ ತಂತ್ರಾಂಶ ದೋಷದಿಂದಾಗಿ ನಗರಾಡಳಿತ ಸಂಸ್ಥೆಗಳಲ್ಲಿ ಸೆಪ್ಟಂಬರ್‌ನ ತೆರಿಗೆ ಸಂಗ್ರಹಕ್ಕೆ ತೀವ್ರ ಹಿನ್ನಡೆಯಾಗುವ ಸಾಧ್ಯತೆಯಿದೆ.

ಆನ್‌ಲೈನ್‌ ವ್ಯವಸ್ಥೆಯಲ್ಲಿಯೂ ತಿರುಗಾಟ
ಆಸ್ತಿ ತೆರಿಗೆ ಕೆಲಸ ಒಂದೇ ಕಡೆ ಮುಗಿಯುತ್ತಿಲ್ಲ. ಆಸ್ತಿ ಇರುವ ಜಾಗದ ಕಟ್ಟಡ ರೀತಿ ಮತ್ತು ಇತರ ಮಾಹಿತಿ ನೀಡಿದರೆ ಕೇಂದ್ರದ ಸಿಬಂದಿ ಲೆಕ್ಕ ಹಾಕಿ ಎಷ್ಟು ತೆರಿಗೆ ಕಟ್ಟಬೇಕು ಎನ್ನುವ ಕುರಿತು ಮಾಹಿತಿ ಚಲನ್‌ ನೀಡುತ್ತಾರೆ. ಅದನ್ನು ಕೊಂಡು ಹೋಗಿ ಬ್ಯಾಂಕ್‌ ಮೂಲಕ ನಗರಾಡಳಿತ ಸಂಸ್ಥೆಗಳ ಖಾತೆಗೆ ಪಾವತಿ ಮಾಡಬೇಕು. ಆನ್‌ಲೈನ್‌ ಪಾವತಿ ಮಾಡಿದರೂ ಸಾರ್ವಜನಿಕರಿಗೆ ಕಚೇರಿ ಸುತ್ತಾಟ ತಪ್ಪಿಲ್ಲ.

ಉಡುಪಿ ನಗರಸಭೆ ಕೇಂದ್ರಕ್ಕೆ ಪ್ರತಿ ನಿತ್ಯ 100ರಿಂದ 150 ಮಂದಿ ಆಸ್ತಿ ತೆರಿಗೆ ಪಾವತಿಸಲು ಬರುತ್ತಾರೆ. ಏಳು ದಿನ ಗಳಿಂದ ಸರ್ವರ್‌ ಸಮಸ್ಯೆಯಿಂದಾಗಿ ಸಾರ್ವಜನಿಕರು ತೆರಿಗೆ ಪಾವತಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

Advertisement

ಆಸ್ತಿ ತೆರಿಗೆ ಪಾವತಿಸಲು ಮೂರು ದಿನಗಳಿಂದ ಬರುತ್ತಿದ್ದೇನೆ. ತಂತ್ರಾಂಶದಲ್ಲಿನ ಸಮಸ್ಯೆಯಿಂದ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಅದಷ್ಟು ಬೇಗ ಸಮಸ್ಯೆ ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು.
– ವಿನಾಯಕ ನಾಯಕ್‌, ಉಡುಪಿ

ಸ್ವೀಕೃತಿಯಲ್ಲಿನ ತಾಂತ್ರಿಕ ದೋಷ ರಾಜ್ಯಮಟ್ಟದ ಸಮಸ್ಯೆಯಾಗಿದ್ದು, ಎರಡು ದಿನಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
– ಗಾಯತ್ರಿ, ನಗರಸಭೆ ಲೆಕ್ಕ ಅಧೀಕ್ಷಕರು, ಉಡುಪಿ

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next