ನವದೆಹಲಿ:ಭಾರತೀಯ ತೈಲ ನಿಗಮ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ವಾಣಿಜ್ಯ ಬಳಕೆಯ 19 ಕೆಜಿ ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ಮಂಗಳವಾರ(ನವೆಂಬರ್ 01)ದಿಂದ ಅನ್ವಯವಾಗುವಂತೆ 115 ರೂಪಾಯಿ ಕಡಿತಗೊಳಿಸಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ವಿಡಿಯೋ… ಮನುಷ್ಯನ ರುಂಡವನ್ನು ಬಾಯಿಯಲ್ಲಿ ಹಿಡಿದು ನಗರ ತುಂಬಾ ಓಡಾಡಿದ ಬೀದಿ ನಾಯಿ
2022ರ ನವೆಂಬರ್ 1ರಿಂದ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ 115.50 ಪೈಸೆ ಇಳಿಕೆ ಮಾಡಲಾಗಿದೆ. ಆದರೆ ದೇಶೀಯ ಅಡುಗೆ ಅನಿಲದ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತೈಲ ಮಾರುಕಟ್ಟೆ ನಿಗಮ ತಿಳಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1,859.50 ರೂಪಾಯಿಯಾಗಿದ್ದು, ಇದೀಗ 1,744 ರೂಪಾಯಿಗೆ ಇಳಿಕೆಯಾದಂತಾಗಿದೆ ಎಂದು ಪ್ರಕಟಣೆ ವಿವರಿಸಿದೆ. ದೆಹಲಿಯಲ್ಲಿ 14.2 ಕೆಜಿಯ ದೇಶೀಯ ಅಡುಗೆ ಅನಿಲದ ಬೆಲೆ 1,053 ರೂಪಾಯಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದೆ.
ದರ ಕಡಿತದ ಬಳಿಕ ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1,570 ರೂ.ಗೆ ಇಳಿಕೆಯಾಗಿದ್ದು, ಕೋಲ್ಕತಾದಲ್ಲಿ 1,846 ರೂಪಾಯಿಗೆ, ಮುಂಬಯಿಯಲ್ಲಿ 1,696 ರೂ.ಗೆ ಹಾಗೂ ಚೆನ್ನೈನಲ್ಲಿ 1893 ರೂಪಾಯಿಗೆ ಇಳಿಕೆಯಾಗಿದೆ.