Advertisement

ಬೇಡಿಕೆ ಈಡೇರಿಕೆಗೆ ಬೃಹತ್ ಪ್ರತಿಭಟನೆ

11:28 AM Sep 22, 2019 | Suhan S |

ಬ್ಯಾಡಗಿ: ಇಲ್ಲಿನ ಮುಖ್ಯರಸ್ತೆಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಮಾಡುವುದು ಸೇರಿದಂತೆ ಆಣೂರ ಮತ್ತು ಬುಡಪನಹಳ್ಳಿ ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಆಗ್ರಹಿಸಿ ಮುಖ್ಯರಸ್ತೆ ಅಗಲೀಕರಣ ಸಮಿತಿ ನೇತೃತ್ವದಲ್ಲಿ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಯಿತು.

Advertisement

ಪಟ್ಟಣದ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಹಳೆ ಪುರಸಭೆ ಎದುರಿಗೆ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಮುಂದೆ ಸಾಗಿದ ಪ್ರತಿಭಟನಾ ಮೆರವಣಿಗೆ ಸುಭಾಷ್‌ ಸರ್ಕಲ್‌ನಲ್ಲಿ ಸಭೆಯಾಗಿ ಮಾರ್ಪಟ್ಟಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ರಾಜ್ಯ ಮತ್ತು ಕೇಂದ್ರ ಸರ್ಕಾರ ಸೇರಿದಂತೆ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಹಸಿರು ಶಾಲು ಹೊತ್ತು ರೈತರ ಮೇಲೆ ಪ್ರಮಾಣ ವಚನ ಮಾಡಿದ ಬಿಎಸ್‌ವೈ ಸಾವಿರ ಅಡಿ ಕೊಳವೆಬಾವಿ ತೆಗೆದರೂ ಹನಿ ನೀರು ಸಿಗದ ಜಿಲ್ಲೆಗಳಲ್ಲಿನ ಕೆರೆ ಕಟ್ಟೆ ಒಣಗುತ್ತಿದ್ದರೂ ಬಿಡಿಗಾಸು ಬಿಚ್ಚಿಲ್ಲ. ಆದರೆ, ತಾವು ಪ್ರತಿನಿ ಧಿಸುವ ಶಿವಮೊಗ್ಗ ಜಿಲ್ಲೆಯ ಕೆರೆಗಳಿಗೆ ನೂರಾರು ಕೋಟಿ ಹಣ ಬಿಡುಗಡೆ ಮಾಡುತ್ತಿರುವುದು ರಾಜದ್ರೋಹವಲ್ಲವೆ? ಮೂಲನಕ್ಷೆಯಂತೆ ಆಣೂರ ಬುಡಪನಹಳ್ಳಿ ಕೆರೆ ತುಂಬಿಸುವ ಯೋಜನೆ, ಮುಖ್ಯರಸ್ತೆ ಅಗಲೀಕರಣ ಹಾಗೂ ಬೆಳೆವಿಮೆ ಪರಿಹಾರ ಸಮಸ್ಯೆಗಳನ್ನು 3 ತಿಂಗಳೊಳಗಾಗೆ ಪರಿಹರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಸ್ಥಗಿತಗೊಳಿಸಿ “ಜೈಲ್‌ ಭರೋ ಚಳವಳಿ’ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮುಖ್ಯರಸ್ತೆ ಅಗಲೀಕರಣ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, ಚತುಷ್ಪಥ ರಸ್ತೆ ನಿರ್ಮಾಣದಿಂದ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರಕ್ಕಾಗಿಯೇ ರಾಜ್ಯ ಸಚಿವ ಸಂಪುಟದಲ್ಲಿ 15.60 ಕೋಟಿ.ರೂ ಬಿಡುಗಡೆಗೆಅನುಮೋದನೆ ಸಿಕ್ಕಿದೆ. ಅದಾಗ್ಯೂ ಅಧಿಕಾರಿಗಳು ವಿಳಂಬ ನೀತಿ ತೋರುತ್ತಿರುವುದು ಖಂಡನಾರ್ಹ. ಯಾವುದೇ ಕಾರಣಕ್ಕೂ ಹೋರಾಟಗಾರರನ್ನು ಕೆಣಕದೆಕೂಡಲೇ ಭೂ ಸ್ವಾಧಿಧೀನ ಪ್ರಕ್ರಿಯೆ ಪ್ರಾರಂಭಿಸಿ, ಕಿಷ್ಕಿಂದೆಯಂಥ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದರು.

ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಪರಿಹಾರದ ನೆಪವನ್ನಿಟ್ಟುಕೊಂಡು ಮುಖ್ಯರಸ್ತೆಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಮುಂದೂಡುತ್ತ ಬರಲಾಗಿದೆ. ದಶಕದಿಂದ ಪ್ರತಿಭಟಿಸುತ್ತ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲ ಪಟ್ಟಪದ್ರ ಹಿತಾಸಕ್ತಿಗಳಿಂದ ಪಟ್ಟಣ ಅಭಿವೃದ್ಧಿ ಕಾಣದೇ ಉಳಿದಿದೆ. ರಸ್ತೆ ಅಗಲೀಕರಣಕ್ಕೆ ದಿನಾಂಕ ನಿಗದಿಗೊಳಿಸಿದ ಬಳಿಕವೇ ಪ್ರತಿಭಟನೆಯಿಂದ ಹಿಂದೆ ಸರಿಯುವುದಾಗಿ ಪಟ್ಟು ಹಿಡಿದರು. ಪ್ರತಿಭಟನೆ ಸ್ಥಳಕ್ಕಾಗಮಿಸಿದ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಚುನಾವಣೆ ಪೂರ್ವ ನೀಡಿದ್ದ ಭರವಸೆ ಈಡೇರಿಸಲು ಬದ್ಧನಾಗಿದ್ದೇನೆ. ರಸ್ತೆ ಅಗಲೀಕರಣಕ್ಕೆ ಈಗಾಗಲೇ 15 ಕೋಟಿ ರೂ.ಪರಿಹಾರಕ್ಕೆ ಅನುಮೋದನೆ ತಂದಿದ್ದೇನೆ. ಸಾರ್ವಜನಿಕರ ಹಿತಕ್ಕಾಗಿ ಮತ್ತು ಸುಗಮ ಸಂಚಾರಕ್ಕಾಗಿ ಮುಂದಿನ ವಾರದಲ್ಲಿ

Advertisement

ಶೇ.30 ರಷ್ಟು ಹಣ ಬಿಡುಗಡೆಗೊಳಿಸಿ ಚತುಷ್ಪ ತ ರಸ್ತೆ ಮಾಡಿಯೇ ತಿರುತ್ತೇನೆ. ಕೆರೆಗೆ ನೀರು ತುಂಬಿಸುವ

ಯೋಜನೆ ಸಹ ಶೀಘ್ರದಲ್ಲಿ ಈಡೇರಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ವಾಪಸ್‌ ಪಡೆದುಕೊಳ್ಳಲಾಯಿತು.

ವರ್ತಕ ಎಸ್‌.ಆರ್‌.ಪಾಟೀಲ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ, ರುದ್ರನಗೌಡ ಕಾಡನಗೌಡ್ರ, ಕಿರಣ ಗಡಿಗೋಳ, ಶಿವಯೋಗಿ ಶಿರೂರ, ರಮೇಶ ಸುತ್ತಕೋಟಿ ಸೇರಿದಂತೆ ಸಾವಿರಾರು ರೈತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಡಿವೈಎಸ್‌ಪಿ ಎಲ್‌.ಕುಮಾರಪ್ಪ ಹಾಗೂ ಸಿಪಿಐ ಭಾಗ್ಯವತಿ ಬಂತ್ಲಿ ನೇತೃತ್ವದಲ್ಲಿ ಬಂದೋಬಸ್ತ್ ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next