ಹೊಸದಿಲ್ಲಿ: ಪಾಕಿಸ್ಥಾನದಿಂದ ಗಡಿ ನುಸುಳಿ ಭಾರತಕ್ಕೆ ಪ್ರವೇಶಿಸಿರುವ ಉಗ್ರರನ್ನು ನಿರ್ಮೂಲಗೊಳಿಸಲು ಕಳೆದ ಎರಡು ವಾರಗಳಿಂದಲೂ ಸೇನಾ ಪಡೆ ಕಾಶ್ಮೀರದ ಗಂದರ್‌ಬಾಲ್ ಅರಣ್ಯದಲ್ಲಿ ಬೃಹತ್ ಕಾರ್ಯಾಚರಣೆ ಹಮ್ಮಿಕೊಂಡಿದೆ. ಈಗಾಗಲೇ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದ್ದು, ಒಟ್ಟು 12 ಉಗ್ರರು ಒಳ ನುಸುಳಿರುವ ಶಂಕೆಯನ್ನು ಸೇನೆ ಮೂಲಗಳು ವ್ಯಕ್ತ ಪಡಿಸಿವೆ.
ಸೆ. 28ರಂದು ಮೊದಲು ಒಬ್ಬ ಉಗ್ರನನ್ನು ಹತ್ಯೆಗೈಯಲಾಗಿದ್ದು, ಕೆಲವು ದಿನಗಳ ಅನಂತರ ಇನ್ನೊಬ್ಬ ಉಗ್ರನನ್ನೂ ಹತ್ಯೆಗೈಯಲಾಗಿದೆ.
ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹತ ಉಗ್ರರಿದ್ದ ಪ್ರದೇಶದಿಂದ ವಶಪಡಿಸಿ ಕೊಳ್ಳಲಾಗಿದೆ. ಗಂದರ್‌ಬಾಲ್ ಅರಣ್ಯದಲ್ಲಿ ತೀವ್ರ ಶೋಧ ಕಾರ್ಯವನ್ನು ಸೇನೆ ನಡೆಸಿದ್ದು, ದಿನದಿಂದ ದಿನಕ್ಕೆ ಸೇನೆ ಸಿಬಂದಿ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತಿದೆ. ಹೆಲಿಕಾಪ್ಟರ್‌ಗಳನ್ನೂ ಬಳಸಿಕೊಳ್ಳಲಾಗಿದೆ.
ಇಲ್ಲಿನ ಉಗ್ರರು ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಪಾಕಿಸ್ಥಾನ ದಿಂದ ತರಬೇತಿ ಪಡೆದಿದ್ದಾರೆ ಎಂದು ಹೇಳಲಾಗಿದೆ. ಈ ಉಗ್ರರು ಗಡಿ ದಾಟಿ ಗುರೆಜ್ ಪ್ರದೇಶಕ್ಕೆ ಆಗಮಿಸಿದ್ದು, ಇಲ್ಲಿಂದ ಬಂಡಿಪೋರಾಗೆ ಬಂದು ದಕ್ಷಿಣ ಕಾಶ್ಮೀರ ಭಾಗಕ್ಕೆ ತೆರಳು ತ್ತಿದ್ದರು ಎನ್ನಲಾಗಿದೆ.