Advertisement

ಚಂದ್ರಗಿರಿ ಸೇತುವೆಯಲ್ಲಿ ಅಪಾಯಕಾರಿ ಬೃಹತ್‌ ಗಾತ್ರದ ಹೊಂಡ

06:00 AM Jul 21, 2018 | |

ಕಾಸರಗೋಡು: ಧಾರಾಕಾರ ಮಳೆಯಾಗುತ್ತಿದ್ದಂತೆ ಕಾಸರಗೋಡು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣ ಪ್ರದೇಶದ ರಸ್ತೆಗಳು ಸಹಿತ ಬಹುತೇಕ ಎಲ್ಲ ರಸ್ತೆಗಳು ಶೋಚನೀಯ ಸ್ಥಿತಿಗೆ ತಲುಪಿವೆೆ. ರಾಜ್ಯ ಹೆದ್ದಾರಿಯೂ ಇದಕ್ಕೆ ಹೊರತಾಗಿಲ್ಲ. 

Advertisement

ಕೇರಳ ರಾಜ್ಯ ಹೆದ್ದಾರಿ ಕಾಸರಗೋಡಿನಿಂದ ಕಾಂಞಂಗಾಡ್‌ಗೆ ಸಾಗುವ ರಸ್ತೆಯುದ್ದಕ್ಕೂ ಅಲ್ಲಲ್ಲಿ ಹೊಂಡಗಳು ಸೃಷ್ಟಿಯಾಗಿವೆ. ಕಾಸರಗೋಡು ನಗರದಿಂದ ಕೆಲವೇ ದೂರದಲ್ಲಿರುವ ಚಂದ್ರಗಿರಿ ಸೇತುವೆಯ ಮೇಲೂ ದೊಡ್ಡ ಹೊಂಡವೊಂದು ಸೃಷ್ಟಿಯಾಗಿದ್ದು, ಅಪಾಯಕಾರಿಯಾಗಿ ಮರಣಗುಂಡಿಯಾಗಿದೆ. ಈ ಸೇತುವೆಯಲ್ಲಿ ಪದೇ ಪದೇ ಇದೇ ರೀತಿಯ ಹೊಂಡಗಳು ಸೃಷ್ಟಿಯಾಗುತ್ತಿದ್ದರೂ, ಈ ಹೊಂಡಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟವರು ಮುಂದಾಗದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. 

ಇದೇ ರೀತಿ ಕಾಸರಗೋಡು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಸೇತುವೆಗಳಲ್ಲಿ ಹೊಂಡ ಸೃಷ್ಟಿಯಾಗಿದ್ದು, ಅಪಾಯವನ್ನು ಕೈಬೀಸಿ ಕರೆಯುವಂತಿದೆ. ರಾಷ್ಟ್ರೀಯ ಹೆದ್ದಾರಿಯ ನೀಲೇಶ್ವರ ಸೇತುವೆಯಲ್ಲಿ ಬೃಹತ್‌ ಗಾತ್ರದ ಹೊಂಡ ಸೃಷ್ಟಿಯಾಗಿದೆ. ಇದೇ ರೀತಿ ನೀಲೇಶ್ವರದಿಂದ ಪಳ್ಳಿಕೆರೆ ರೈಲ್ವೇ ಗೇಟಿನ ವರೆಗೂ ಅಲ್ಲಲ್ಲಿ ಹೊಂಡ ಬಿದ್ದು ವಾಹನ ಚಾಲಕರು ಅಪಾಯಕ್ಕೆ ಗುರಿಯಾಗುತ್ತಿದ್ದಾರೆ. 

ಮಳೆ ಸುರಿದಾಗ ರಸ್ತೆಯಲ್ಲಿ  ಸೃಷ್ಟಿಯಾದ ಹೊಂಡಗಳಲ್ಲಿ ನೀರು ತುಂಬಿ ವಾಹನ ಚಾಲಕರಿಗೆ ರಸ್ತೆಯಲ್ಲಿ ಹೊಂಡ ಇರುವ ಬಗ್ಗೆ ಗಮನಕ್ಕೆ ಬಾರದೆ ಈ ಹೊಂಡಕ್ಕೆ ಬಿದ್ದು ಅಪಘಾತ ಸಾಮಾನ್ಯ ವಾಗಿದೆ. ರಸ್ತೆಯ ಹೊಂಡಕ್ಕೆ ವಾಹನಗಳು ಬೀಳುವುದರಿಂದ ವಾಹನಗಳ ಬಿಡಿ ಭಾಗಗಳೂ ಕೆಟ್ಟುಹೋಗುವುದು ಸಾಮಾನ್ಯವಾಗಿದೆ. ಇದರಿಂದಾಗಿ ವಾಹನ ಗಳಿಗೆ ಬಹಳಷ್ಟು ನಷ್ಟ ಉಂಟಾಗುತ್ತಿದೆ. 

ತಲಪಾಡಿಯಿಂದ ಕಾಸರಗೋಡಿನ ವರೆಗೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಬೃಹತ್‌ ಗಾತ್ರದ ಹೊಂಡ ಗಳಿಂದಾಗಿ ಪ್ರತಿದಿನ ವಾಹನ ಅಪಘಾತ ಸಾಮಾನ್ಯವಾಗಿದೆ. ಈಗಾಗಲೇ ಹಲವು ವಾಹನ ಅಪಘಾತಗಳು ಸಂಭವಿಸಿದ್ದು ಹಲವು ಜೀವಗಳು ಬಲಿಯಾಗಿವೆ. ಹಲವಾರು ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದಾರೆ. 

Advertisement

ದುರಸ್ತಿಯಾಗದೆ ಆಕ್ರೋಶ
ಹೀಗಿದ್ದರೂ ರಸ್ತೆ ದುರಸ್ತಿಗೆ ಅಗತ್ಯ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಜನರು ಸಹಜವಾಗಿಯೇ ಆಕ್ರೋಶ ವ್ಯಕ್ತ ಪಡಿಸುತ್ತಾರೆ. ಆದರೂ ರಸ್ತೆ ದುರಸ್ತಿ ಕಾರ್ಯ ನಡೆಯುವುದು ಅಪರೂಪ. 

ಮರಣಗುಂಡಿ!
ಕಾಸರಗೋಡು ಪ್ರಸ್‌ ಕ್ಲಬ್‌ನಿಂದ ಕೆಲವೇ ದೂರದಲ್ಲಿ ಪಯಸ್ವಿನಿ ಹೊಳೆಗೆ ನಿರ್ಮಿಸಿದ ಚಂದ್ರಗಿರಿ ಸೇತುವೆಯಲ್ಲಿ ಬೃಹತ್‌ ಗಾತ್ರದ ಹೊಂಡದಿಂದ ದ್ವಿಚಕ್ರ ವಾಹನ ಚಾಲಕರು ಅಪಾಯವನ್ನು ಎದುರಿಸುತ್ತಿದ್ದಾರೆ. ವೇಗವಾಗಿ ಸಾಗುವ ವಾಹನಗಳ ಚಾಲಕರಿಗೆ ಹೊಂಡ ಗೋಚರಿಸದೆ ಅಪಘಾತಕ್ಕೆ ಕಾರಣವಾಗುತ್ತಿದೆ. ಈಗಾಗಲೇ ಹಲವು ದ್ವಿಚಕ್ರ ವಾಹನಗಳು ಉರುಳಿ ಬಿದ್ದ ಘಟನೆಗಳು ನಡೆದಿವೆ. ಮುಂಭಾಗದಿಂದ ಬರುವ ವಾಹನಗಳಿಗೆ ದಾರಿ ಬಿಟ್ಟುಕೊಡಲು ಬದಿಗೆ ಸರಿಯುವ ವಾಹನಗಳು ಈ ಹೊಂಡಕ್ಕೆ ಬಿದ್ದು ಅಪಘಾತ ಸಂಭವಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next