ಹಾವೇರಿ: ಕೌಶಲ್ಯಾಭಿವೃದ್ಧಿ ಮಿಷನ್ ಕಾರ್ಯಕ್ರಮದಡಿ ಫೆ. 22 ಹಾಗೂ 23ರಂದು ಎರಡು ದಿನ ನಗರದ ಹುಕ್ಕೇರಿಮಠದಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲು ನಿರ್ಧರಿಸಲಾಗಿದ್ದು, ನಿರುದ್ಯೋಗಿಗಳಿಂದ ಒಂದು ವಾರ ಮುಂಚೆಯೇ ಅರ್ಜಿ ಆಹ್ವಾನಿಸಲು ತೀರ್ಮಾನಿಸಲಾಯಿತು.
ನಗರದ ಜಿಲ್ಲಾ ಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಅಪರ ಜಿಲ್ಲಾಧಿ ಕಾರಿ ಎಸ್. ಯೋಗೇಶ್ವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳದ ಪೂರ್ವಭಾವಿ ಸಿದ್ಧತಾ ಸಭೆ ಜರುಗಿತು.
ಉದ್ಯೋಗಮೇಳದಲ್ಲಿ ಜಿಲ್ಲೆಯ ಹೆಚ್ಚು ನಿರುದ್ಯೋಗಿ ಯುವಕರಿಗೆ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚು ಉದ್ಯೋಗದಾತ ಸಂಸ್ಥೆಗಳನ್ನು ಮೇಳಕ್ಕೆ ಆಹ್ವಾನಿಸಬೇಕು. ವಿವಿಧ ವೃತ್ತಿ ಹಾಗೂ ಉದ್ಯೋಗಗಳಿಗೆ ಸಂಬಂಧಿಸಿದಂತೆ ಮೇಳದಲ್ಲಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಬೇಕು. ಉದ್ಯೋಗಮೇಳದಲ್ಲಿ ಜಿಲ್ಲೆಯ ಹೆಚ್ಚು ನಿರುದ್ಯೋಗಿಗಳು ಭಾಗವಹಿಸಲು ಅನುಕೂಲವಾಗುವಂತೆ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಂಡು ಮಾಹಿತಿಯನ್ನು ಪ್ರಸಾರ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಉದ್ಯೋಗ ಮೇಳ ನಡೆಯುವ ದಿನಾಂಕದ ಒಂದುವಾರ ಮುಂಚಿತವಾಗಿ ನಿರುದ್ಯೋಗಿ ಯುವಕರಿಂದ ಆನ್ ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲು ತಿರ್ಮಾನಿಸಲಾಯಿತು. ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಕುರಿತಂತೆ ಪ್ರತ್ಯೇಕ ವೆಬ್‌ಸೈಟ್ ಡಿಸೈನ್ ಮಾಡಿ ವೆಬ್‌ಸೈಟ್ ವಿಳಾಸವನ್ನು ಪ್ರಕಟಿಸಲು ನಿರ್ಧರಿಸಲಾಯಿತು. ಆಫ್‌ಲೈನ್‌ನಲ್ಲೂ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳ ನಗರಸಭೆ ಅಥವಾ ಕರ್ನಾಟಕ ಒನ್ ಸೆಂಟರ್ ಗಳಲ್ಲಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆದು ಅರ್ಜಿ ನೋಂದಣಿಗೆ ಅವಕಾಶ ಕಲ್ಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲೆಯ ಎಲ್ಲ ಐಟಿಐ ಕಾಲೇಜುಗಳು, ತಾಂತ್ರಿಕ ಕಾಲೇಜುಗಳು ಹಾಗೂ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಉದ್ಯೋಗಮೇಳದ ಕುರಿತಂತೆ ವ್ಯಾಪಕ ಪ್ರಚಾರ ಕೈಗೊಳ್ಳಲು ನಿರ್ಧರಿಸಲಾಯಿತು. ಪೂರ್ಣಾವಧಿ ಉದ್ಯೋಗದ ಜತೆಗೆ ಅರೆಕಾಲಿಕ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ನಿಟ್ಟಿನಲ್ಲಿ ಶಾಲಾ-ಕಾಲೇಜು, ಹೋಟೆಲ್ ಸೇರಿದಂತೆ ವಿವಿಧೆಡೆ ಅರೆಕಾಲಿಕ ಕೆಲಸಗಳ ಗುರುತಿಸಿ ಇಂತಹ ಉದ್ಯೋಗಗಳನ್ನು ಬಯಸುವ ನಿರುದ್ಯೋಗಿಗಳಿಗೆ ವೆಬ್‌ಸೈಟ್ ನಲ್ಲಿ ಪ್ರತ್ಯೇಕ ಕಾಲಂಗಳ ರಚಿಸಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಯಿತು.
ಈ ಕುರಿತಂತೆ ಯಾವ-ಯಾವ ಸಂಸ್ಥೆಗಳಲ್ಲಿ ಅರೆಕಾಲಿಕ ಸೇವೆಗಳು ಖಾಲಿ ಇವೆಯೋ ಅಂತಹ ಉದ್ಯೋಗಾವಕಾಶಗಳ ಸಂಖ್ಯೆಯನ್ನು ಸಂಗ್ರಹಿಸಲು ಸೂಚಿಸಲಾಯಿತು. ಉದ್ಯೋಗ ಮೇಳ ನಡೆಯುವ ನಗರದ ಹುಕ್ಕೇರಿಮಠದ ಶ್ರೀ ಶಿವಲಿಂಗೇಶ್ವರ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಸಂದರ್ಶನಕ್ಕಾಗಿ ಕಂಪನಿವಾರು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಬೇಕು. ಮುಖ್ಯವೇದಿಕೆ ನಿರ್ಮಾಣ, ಫುಡ್ ಕೌಂಟರ್ ತೆರೆಯುವುದು ಸೇರಿದಂತೆ ಉದ್ಯೋಗಮೇಳದ ಯಶಸ್ವಿ ಆಯೋಜನೆಗೆ ವಿವಿಧ ಎಂಟು ಸಮಿತಿಗಳನ್ನು ರಚಿಸಲಾಯಿತು.
ತ್ವರಿತವಾಗಿ ಸಿದ್ಧತೆಗಳನ್ನು ಕೈಗೊಂಡು ವರದಿ ಸಲ್ಲಿಸಲು ಸೂಚಿಸಲಾಯಿತು. ಸ್ಥಳೀಯ ಉದ್ಯಮಗಳಲ್ಲಿ ಕೆಲಸ ಮಾಡಲು ಅನುಕೂಲವಾಗುವಂತೆ ಅಪ್ರಂಟಿಸ್ ಮಾದರಿಯಲ್ಲಿ ಕೌಶಲ್ಯ ಕೇಂದ್ರಕ್ಕೆ ದಾಖಲಾದ ಅಭ್ಯರ್ಥಿಗಳನ್ನು ನಿಯೋಜಿಸಬೇಕು. ಸ್ಥಳೀಯ ಉದ್ಯೋಗದಾತರನ್ನು ಉದ್ಯೋಗ ಮೇಳದಲ್ಲಿ ಪ್ರಾಧ್ಯಾನ್ಯತೆಯ ಅನುಸಾರ ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾ ವಾಣಿಜ್ಯೋದ್ಯಮದ ಸಂಸ್ಥೆಯ ಪದಾಧಿಕಾರಿಗಳು ಸಭೆಯಲ್ಲಿ ಮನವಿ ಮಾಡಿಕೊಂಡರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಕೌಶಲ್ಯಾಭಿವೃದ್ಧಿ ಕೇಂದ್ರದ ಸುಭಾಷ್‌ಗೌಡ, ಜಿಲ್ಲಾ ಕೌಶಲ್ಯಾಭಿವೃದ್ಧಿ ಕೇಂದ್ರದ ಅಧಿಕಾರಿ ಸಂಜಯ ದಿಗಂಬರ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಜೋಶಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನಪ್ಪ ವಡಗೇರಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೀರಜಾದೆ, ವಾರ್ತಾಧಿಕಾರಿ ಡಾ| ಬಿ.ಆರ್ ರಂಗನಾಥ್, ವಾಣಿಜ್ಯಮಂಡಳಿಯ ಪದಾಧಿಕಾರಿಗಳು ಇತರರು ಇದ್ದರು.